ಕರಾವಳಿ

ಗಾಂಧೀಜಿಯವರ ಬದುಕು ವಿಶ್ವಕ್ಕೆ ಮಾದರಿ: ಅಪರ ಜಿಲ್ಲಾಧಿಕಾರಿ

Pinterest LinkedIn Tumblr

gandhi_jayanthi_photo_1

ಮಂಗಳೂರು, ಅ.0.3:  ರಾಷ್ಟ್ರಪಿತ ಮಹಾತ್ಮಾಗಾಂಧೀಜಿಯವರು ಸತ್ಯ, ಸರಳ, ಅಹಿಂಸೆ ಮತ್ತು ಪ್ರಾಮಾಣಿಕತೆಯನ್ನೇ ದೃಢವಾಗಿ ನಂಬಿ, ಅದೇ ಮಾರ್ಗದಲ್ಲಿಯೇ ಹೋರಾಟ ನಡೆಸಿ, ವಿಶ್ವಕ್ಕೇ ಮಾದರಿಯಾಗಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಹೇಳಿದ್ದಾರೆ.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಮಂಗಳೂರು ವಿಶ್ವವಿದ್ಯಾನಿಲಯ ರಾಷ್ಟ್ರೀಯ ಸೇವಾ ಯೋಜನೆ ಘಟಕ ಹಾಗೂ ವಿಶ್ವವಿದ್ಯಾನಿಲಯ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಗುರುವಾರ ರವೀಂದ್ರಕಲಾಭವನದಲ್ಲಿ ನಡೆದ ಗಾಂಧೀ ಜಯಂತಿ ಅಂಗವಾಗಿ ವಿಚಾರಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು. ಆದರ್ಶ, ತತ್ವ ಸಿದ್ಧಾಂತಗಳ ವಿಷಯದಲ್ಲಿ ಎಂದಿಗೂ ರಾಜಿಯಾಗದ ಗಾಂಧೀಜಿಯವರು, ನೇತಾರನಗಿಂತಲೂ, ಒಬ್ಬ ಸೇನಾನಿಯಂತೆ ಸ್ವಾತಂತ್ರ್ಯ ಹೋರಾಟದಲ್ಲಿ ಅಹಿಂಸಾತ್ಮಕವಾಗಿ ತಮ್ಮನ್ನು ತೊಡಗಿಸಿದ್ದರು. ವಿಶ್ವದಲ್ಲಿ ಇಂತಹ ಹೋರಾಟ ಅಪರೂಪವಾಗಿದೆ ಎಂದು ಅವರು ಹೇಳಿದರು.

ಮಹಾತ್ಮಾ ಗಾಂಧಿಯವರ ಆದರ್ಶಗಳು ಸದಾ ಪ್ರಚಲಿತದಲ್ಲಿರಬೇಕು. ಮುಖ್ಯವಾಗಿ ವಿದ್ಯಾರ್ಥಿಗಳು ಇದನ್ನು ಅರಿತುಕೊಳ್ಳಬೇಕಾದ ಅವಶ್ಯಕತೆ ಬಹಳ ಇದೆ ಎಂದು ಅವರು ಅಪರ ಜಿಲ್ಲಾಧಿಕಾರಿಗಳು ನುಡಿದರು.

gandhi_jayanthi_photo_2

ಉಪನ್ಯಾಸ ನೀಡಿದ ಬದ್ರಿಯಾ ಕಾಲೇಜಿನ ಪ್ರಾಂಶುಪಾಲ ಡಾ.ಇಸ್ಮಾಯಿಲ್, ಮಹಾತ್ಮಾಗಾಂಧಿಯವರು ಬಾಹ್ಯ ಸ್ವಚ್ಛತೆಗಿಂತಲೂ, ಆಂತರಿಕ ಸವಚ್ಛತೆಗೆ ಹೆಚ್ಚು ಒತ್ತು ನೀಡಿದ್ದರು. ಅಂತರಂಗದ ಶುದ್ಧಿಯಿಂದ ಸಮಾಜವೂ ಉತ್ತಮವಾಗಲಿದೆ ಎಂಬುದು ಅವರ ನಂಬಿಕೆಯಾಗಿತ್ತು. ಸ್ವತ: ಇದನ್ನು ಪಾಲಿಸಿಕೊಂಡು, ಅವರು ಇತರರಿಗೆ ಮಾದರಿಯಾಗಿದ್ದರು .ಇಡೀ ಜಗತ್ತಿಗೆ ಅಹಿಂಸೆಯ ಪಾಠ ಕಲಿಸಿದ ಗಾಂಧಿಯವರು ಮಹಾತ್ಮಾರಾಗಿದ್ದು ವಿಶೇಷವೇನಲ್ಲ ಎಂದು ಹೇಳಿದರು.

ಯುವಜನರಲ್ಲಿ ನಿಷ್ಕಳಂಕತೆ ಮತ್ತು ಸಾಮಾಜಿಕ ಸೇವೆಯ ಮನೋಭಾವನೆ ಹೆಚ್ಚಬೇಕು. ನಾನು, ನಮ್ಮದು ಎಂಬ ಮನೋಸ್ಥಿತಿ ಅಪಾಯಕಾರಿಯಾದದ್ದು. ದೇಶಸೇವೆಯಲ್ಲಿ ಎಲ್ಲರೂ ಒಗ್ಗೂಡಿಸಿ ಕೊಳ್ಳಬೇಕು ಎಂದು ಅವರು ಹೇಳಿದರು.

ವಿಶ್ವವಿದ್ಯಾನಿಲಯ ಕಾಲೇಜು ಪ್ರಾಂಶುಪಾಲ ಡಾ.ಸತ್ಯನಾರಾಯಣ ಮಲ್ಲಿಪಟ್ಣ ಅಧ್ಯಕ್ಷತೆವಹಿಸಿದ್ದರು. ಮಂಗಳೂರು ವಿಶ್ವವಿದ್ಯಾನಿಲಯ ರಾಷ್ಟ್ರೀಯ ಸೇವಾ ಸಂಯೋಜನಧಿಕಾರಿ ವಿನೀತಾ ರೈ ಅವರು ನೆರೆದವರಿಗೆ ಸ್ವಚ್ಛತಾ ಪ್ರಮಾಣವಚನ ಬೋಧಿಸಿದರು. ಭಗಿನಿ ಸಮಾಜದ ಅಧ್ಯಕ್ಷೆ ವಜ್ರಾರಾವ್, ಕಾಲೇಜಿನ ಎನ್‌ಎಸ್‌ಎಸ್ ಯೋಜನಾಧಿಕಾರಿ ಡಾ.ದಯಾನಂದ ನಾಕ್ ಉಪಸ್ಥಿತರಿದ್ದರು.

ವಾರ್ತಾಧಿಕಾರಿ ಬಿ.ಎ. ಖಾದರ್ ಶಾ ಸ್ವಾಗತಿಸಿದರು. ಇನ್ನೋರ್ವ ಎನ್‌ಎಸ್‌ಎಸ್ ಯೋಜನಾಧಿಕಾರಿ ಉಪನ್ಯಾಸಕಿ ಡಾ.ನಾಗರತ್ನ ಕೆ.ಎ. ವಂದಿಸಿದರು.ಗಾಂಧೀ ಜಯಂತಿ ಅಂಗವಾಗಿ ಏರ್ಪಡಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಸಮಾರಂಭದಲ್ಲಿ ಬಹುಮಾನ ವಿತರಿಸಲಾಯಿತು.ಗಾಂಧೀಜಯಂತಿ ಪ್ರಯುಕ್ತ ವಿವಿ ಕಾಲೇಜಿನ ರಾ.ಸೇ.ಯೋ. ಘಟಕದಿಂದ ವೆನ್‌ಲಾಕ್ ಆಸ್ಪತ್ರೆ ಆವರಣವನ್ನು ಸ್ವಚ್ಛಗೊಳಿಸಲಾಯಿತು. ಅಲ್ಲದೆ, ಜಿಲ್ಲಾಸ್ಪತ್ರೆಗೆ ಶುದ್ಧ ಕುಡಿಯುವ ನೀರಿನ ಘಟಕವನ್ನು ಕೊಡುಗೆಯಾಗಿ ನೀಡಲಾಯಿತು.

Write A Comment