ಬಂಟ್ವಾಳ, ಅ.03: ಜಾನುವಾರು ಸಾಗಾಟದ ವಾಹನವನ್ನು ದುಷ್ಕರ್ಮಿಗಳ ತಂಡವೊಂದು ತಡೆದು ಇಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಕಲ್ಲಡ್ಕ ಸಮೀಪದ ಪೂರ್ಲಿಪ್ಪಾಡಿ ಎಂಬಲ್ಲಿ ಗುರುವಾರ ಮುಂಜಾನೆ ನಡೆದಿದ್ದು, ಓರ್ವನ ಸ್ಥಿತಿ ಚಿಂತಾಜನಕವಾಗಿದೆ.
ಘಟನೆಗೆ ಸಂಬಂಧಿಸಿದಂತೆ ಕಲ್ಲಡ್ಕ ಪರಿಸರದ 7 ಮಂದಿಯ ವಿರುದ್ಧ ನಗರ ಠಾಣೆಯಲ್ಲಿ ಕೊಲೆಯತ್ನ ಹಾಗೂ ದರೋಡೆಯ ಪ್ರಕರಣ ದಾಖಲಿಸಲಾಗಿದೆ. ಸಾಲೆತ್ತೂರು ನಿವಾಸಿಗಳಾದ ಬಶೀರ್ (22) ಹಾಗೂ ಸಿದ್ದೀಕ್ (32) ಎಂಬಿಬ್ಬರ ಮೇಲೆ ತಲವಾರು ಹಾಗೂ ಕಬ್ಬಿಣದ ರಾಡ್ಗಳ ಸಹಿತ ಮಾರಕಾಯುಧಗಳಿಂದ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಇಬ್ಬರೂ ಮಂಗಳೂರಿನ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಿದ್ದೀಕ್ ಆಸ್ಪತ್ರೆಗೆ ತರುವ ವೇಳೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಎಂದು ಹೇಳಲಾಗಿದೆ.
ಜಾನುವಾರು ಸಾಗಾಟದ ವಾಹನವನ್ನು ಕಲ್ಲಡ್ಕ ಸಮೀಪದ ಪೂರ್ಲಿಪ್ಪಾಡಿ ಎಂಬಲ್ಲಿ ಪಿಕ್ಅಪ್ ವಾಹನದಿಂದ ಢಿಕ್ಕಿ ಹೊಡೆಸಿ ತಡೆಯಲಾಗಿತ್ತು. ಢಿಕ್ಕಿ ಹೊಡೆಯುವುದನ್ನು ತಡೆಯುವ ಭರದಲ್ಲಿ ಜಾನುವಾರು ಸಾಗಾಟದ ವಾಹನ ಪಕ್ಕದ ಕಮಿರಿಗೆ ಉರುಳಿತ್ತು. ಆ ಬಳಿಕ 15ಕ್ಕೂ ಹೆಚ್ಚು ಮಂದಿಯ ತಂಡ ಜಾನುವಾರು ಸಾಗಾಟದ ವಾಹನದಲ್ಲಿದ್ದ ಬಶೀರ್ ಹಾಗೂ ಸಿದ್ದೀಕ್ರ ಮೇಲೆ ದಾಳಿ ನಡೆಸಿತ್ತು. ತಲವಾರು ಸಹಿತ ಮಾರಕ ಆಯುಧಗಳಿಂದ ನಡೆಸಿದ ದಾಳಿಗೆ ಸಿದ್ದೀಕ್ನ ಕೈ, ಕಾಲು, ಕುತ್ತಿಗೆ ಹಾಗೂ ಬೆನ್ನಿಗೆ ಆಳವಾದ ಗಾಯಗಳಾಗಿವೆ. ಚಿಕಿತ್ಸೆಯ ಬಳಿಕವೂ ಸಿದ್ದೀಕ್ರ ಸ್ಥಿತಿ ಗಂಭೀರವಾಗಿಯೇ ಇದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಬಶೀರ್ರ ತಲೆ, ಕೈ ಹಾಗೂ ಕಾಲಿಗೆ ಆಳವಾದ ಗಾಯಗಳಾಗಿವೆ. ಗುರುವಾರ ಮುಂಜಾನೆ ಸೂರಿಕುಮೇರಿನಿಂದ ಖರೀದಿಸಿದ ಜಾನುವಾರುಗಳನ್ನು ಹೇರಿಕೊಂಡು ಬರುತ್ತಿದ್ದ ವಾಹನವನ್ನು ಇಬ್ಬರು ಯುವಕರು ಮಾಣಿಯಿಂದ ಬೈಕ್ನಲ್ಲಿ ಹಿಂಬಾಲಿಸಿದ್ದರು. ಪೂರ್ಲಿಪ್ಪಾಡಿಯಲ್ಲಿ ಮತ್ತೊಂದು ಪಿಕಪ್ ವಾಹನದಲ್ಲಿ ಐದು ಮಂದಿ ಕಾದುಕುಳಿತಿದ್ದರು ಎನ್ನಲಾಗಿದೆ.
ಜಾನುವಾರು ಸಾಗಾಟದ ವಾಹನ ತಡೆಯಲು ಪೂರ್ಲಿಪ್ಪಾಡಿ ತಿರುವಿನಲ್ಲಿ ರಸ್ತೆಗೆ ಅಡ್ಡವಾಗಿ ಪಿಕಪ್ ಇಡಲಾಗಿತ್ತು. ರಸ್ತೆಯಲ್ಲಿ ಅಡ್ಡವಾಗಿದ್ದ ಪಿಕ್ಅಪ್ಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಜಾನುವಾರು ಸಾಗಾಟದ ವಾಹನದ ಚಾಲಕ ರಸ್ತೆಯ ತೀರಾ ಬಲಭಾಗಕ್ಕೆ ವಾಹನವನ್ನು ಚಲಾಯಿಸಿದ್ದರಿಂದ ನಿಯಂತ್ರಣ ತಪ್ಪಿ ಹೆದ್ದಾರಿಯ ಪಕ್ಕದ ಕಮರಿಗೆ ಬಿದ್ದಿತ್ತು. ಜಾನುವಾರು ಸಾಗಾಟದ ವಾಹನದಿಂದ ಬಿದ್ದು ಗಾಯಗೊಂಡಿದ್ದ ಬಶೀರ್ ಹಾಗೂ ಸಿದ್ದೀಕ್ರ ಮೇಲೆ ಅವರಿಗಾಗಿಯೇ ಕಾದಿದ್ದ ದುಷ್ಕರ್ಮಿಗಳು ದಾಳಿ ನಡೆಸಿದ್ದರು.
ಗಾಯಗೊಂಡಿರುವ ಈರ್ವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾ ಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಕಮರಿಗೆ ಬಿದ್ದ ಪಿಕಪ್ ವಾಹನ, ಅದರಲ್ಲಿದ್ದ ಎರಡು ಎತ್ತುಗಳು, ದುಷ್ಕರ್ಮಿಗಳು ಬಳಸಿದ ಪಿಕಪ್ ವಾಹನ ಮತ್ತು ಬೈಕನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ದಾಳಿಕೋರರನ್ನು ಕಲ್ಲಡ್ಕ ಪರಿಸರದ ಮಿಥುನ್, ಧೀರಜ್, ಕಮಲಾಕ್ಷ, ಯತಿರಾಜ್, ಚೇತನ್, ಭವಿತ್, ರವಿರಾಜ್ ಎಂದು ಗುರುತಿಸಲಾಗಿದ್ದು ತಂಡದ ಓರ್ವನನ್ನು ಪೊಲೀಸರು ವಶಕ್ಕೆ ತೆಗೆದು ಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಸಿದ್ದೀಕ್ ಹಾಗೂ ಬಶೀರ್ ವಿರುದ್ಧ ಅಕ್ರಮ ಜಾನುವಾರು ಸಾಗಾಟದ ಪ್ರಕರಣ ದಾಖಲಿಸಿಕೊ ಳ್ಳಲಾಗಿದದು, ಇವರು ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಯಲ್ಲಿ ಪೊಲೀಸ್ ಕಾವಲು ನಿಯೋಜಿಸಲಾಗಿದೆ.
ಗುಂಪು ಘರ್ಷಣೆ ವದಂತಿ: ಆತಂಕದಲ್ಲಿ ಸ್ಥಳಿಯರು
ಗುರುವಾರ ಮುಂಜಾನೆ ಈ ಘಟನೆ ನಡೆದಿದ್ದು, ಇದರ ಬೆನ್ನಲ್ಲೇ ಕಲ್ಲಡ್ಕದಲ್ಲಿ ಗುಂಪು ಘರ್ಷಣೆ ಎಂಬೆಲ್ಲಾ ವದಂತಿ ಹಬ್ಬಿದ್ದು, ಆತಂಕದ ವಾತಾವರಣ ನಿರ್ಮಾಣಗೊಂಡಿತ್ತು. ಘಟನಾ ಸ್ಥಳಕ್ಕೆ ಬಂಟ್ವಾಳ ಪೊಲೀಸ್ ವೃತ್ತ ನಿರೀಕ್ಷಕ ಬೆಳ್ಳಿಯಪ್ಪ ಹಾಗೂ ನಗರ ಠಾಣಾ ಎಸೈ ನಂದಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಂಟ್ವಾಳ ಎಎಸ್ಪಿ ರಾಹುಲ್ ಕುಮಾರ್ ಮಾರ್ಗದರ್ಶನದಲ್ಲಿ ತನಿಖೆ ನಡೆಯುತ್ತಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶರಣಪ್ಪ ಕಲ್ಲಡ್ಕಕ್ಕೆ ಭೇಟಿ ನೀಡಿ ಸೂಕ್ತ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಿದ್ದು, ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ.
