ಕರಾವಳಿ

ಕುಂದಾಪುರ : ಜಾಗತಿಕ ಕಾರ್ಯಾಚರಣೆ ದಿನ – ನಿರುದ್ಯೋಗ ಭೂತದ ಪ್ರತಿಕೃತಿ ದಹಿಸಿ ಪ್ರತಿಭಟನೆ

Pinterest LinkedIn Tumblr

Kundapur_CITU_Protest (3)

ಕುಂದಾಪುರ : ಜಗತ್ತು ಅಭಿವೃದ್ಧಿ ಹೊಂದುತ್ತಿದೆ ಎಂದು ಬಂಡವಾಳಷಾಹಿಗಳು ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ ಜಗತ್ತಿನಲ್ಲಿ ಹಸಿವಿನಿಂದ ಸಾಯುವವರು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದಾರೆ. ಜಗತ್ತಿನಲ್ಲಿ ಹಾಗೂ ದೇಶದಲ್ಲಿ ಕಾರ್ಪೋರೇಟ್ ಸಂಸ್ಥೆಗಳಿಗೆ, ದೊಡ್ಡ ಉದ್ಯಮಪತಿಗಳಿಗೆ ತೆರಿಗೆಗಳಲ್ಲಿ ರಿಯಾಯಿತಿ ಮಾಡುವ ಹಾಗೂ ಸಾರ್ವಜನಿಕ ಸಂಸ್ಥೆಗಳನ್ನು ಲೂಟಿಮಾಡಲು ಬಂಡವಾಳಶಾಹಿ ಸರಕಾರಗಳು ಅವಕಾಶ ಮಾಡಿಕೊಟ್ಟಿದೆ. ಇದರಿಂದ ದೇಶದಲ್ಲಿಯೂ ಜಗತ್ತಿನಲ್ಲಿಯೂ ಶತಕೋಟ್ಯಾದಿಪತಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ ಎಂದು ಸಿ‌ಐಟಿಯು ಸಂಘಟನೆಯ ತಾಲೂಕು ಅಧ್ಯಕ್ಷರಾದ ಎಚ್.ನರಸಿಂಹ ಹೇಳಿದರು.

Kundapur_CITU_Protest (1)

ಅವರು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿ‌ಐಟಿಯು) ಕುಂದಾಪುರ ತಾಲೂಕು ಸಮಿತಿಯ ನೇತೃತ್ವದಲ್ಲಿ ನಡೆದ ನಿರುದ್ಯೋಗ ವಿರುದ್ಧ ಜಾಗತಿಕ ಕಾರ್ಯಾಚರಣೆ ದಿನದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದರು.

Kundapur_CITU_Protest (2) Kundapur_CITU_Protest

ಬಂಡವಾಳಶಾಹಿ ಅಭಿವೃದ್ಧಿ ಎಂದರೆ ಒಂದು ರಾಷ್ಟ್ರದ ವಿರುದ್ಧ ಇನ್ನೊಂದು ರಾಷ್ಟ್ರದ ಯುದ್ಧಕ್ಕಾಗಿ ಅಣುಶಸ್ತ್ರಾಸ್ತ್ರ ಸಂಗ್ರಹಿಸಲು ಹಣ ತೊಡಗಿಸುವುದು ಎಂಬಂತಾಗಿದೆ. ಆದರೆ ಕಾರ್ಮಿಕರು ದುಡಿತದ ಪ್ರತಿಫಲ ಸಿಗದೇ ಸವಲತ್ತುಗಳಿಂದ ಹಾಗೂ ಸಾಮಾಜಿಕ ಭದ್ರತೆಯಿಂದ ವಂಚಿತರಾಗುತ್ತಿದ್ದಾರೆ. ಅರೆ ಉದ್ಯೋಗ, ಗುತ್ತಿಗೆ ಕಾರ್ಮಿಕ ಪದ್ಧತಿಯಂತಹ ಅಲ್ಪಕಾಸಿನ ವೇತನಕ್ಕೆ ದುಡಿಸಿಕೊಳ್ಳುವುದು ಬಂಡವಾಳಶಾಹಿ ಸರಕಾರಗಳ ಬಹುಮುಖ್ಯ ನೀತಿಯಾಗಿದೆ. ಇಂತಹ ನೀತಿಗಳಿಂದ ಕಾರ್ಮಿಕ ವರ್ಗ ಅತ್ಯಂತ ಶೋಷಣೆಗೊಳಗಾಗಿದೆ. ನಮ್ಮ ದೇಶದ ಕೇಂದ್ರ ಸರಕಾರ ವಿಶ್ವಬ್ಯಾಂಕ್ ವಿದೇಶಿ ಹಣಕಾಸು ಬಂಡವಾಳಿಗರು ದೇಶೀಯ ಉದ್ದಿಮೆದಾರರ ಒತ್ತಡಕ್ಕೆ ಮಣಿದು ಕಾರ್ಮಿಕ ಕಾನೂನುಗಳಿಗೆ ಮಾಲಿಕರ ಪರವಾದ ತಿದ್ದುಪಡಿ ತರಲು ಮುಂದಾಗಿದೆ. ಇದರಿಂದ ಪ್ರತಿಶತ ೯೦ರಷ್ಟು ಕಾರ್ಮಿಕರು ಕಾನೂನುಗಳ ಭದ್ರತೆಯಿಂದ ಹೊರದೂಡಲ್ಪಡಲಿದ್ದಾರೆ ಈ ನೀತಿಯಿಂದ ಇನ್ನಷ್ಟು ನಿರುದ್ಯೋಗ ಉಲ್ಬಣಗೊಳ್ಳಲಿದೆ. ಹೀಗಾಗಿ ನಿರುದ್ಯೋಗದ ವಿರುದ್ಧ ಎಲ್ಲಾ ಬಂಡವಾಳಶಾಹಿ ರಾಷ್ಟ್ರಗಳ ಸರಕಾರದ ವಿರುದ್ಧ ವಿಶ್ವಕಾರ್ಮಿಕರ ಸಂಘಟನೆಗಳ ಒಕ್ಕೂಟ (ಡಬ್ಲ್ಯೂ‌ಎಫ್‌ಟಿಯು) ಜಗತ್ತಿನಾದ್ಯಂತ ಹೋರಾಟಕ್ಕೆ ಕರೆ ನೀಡಿದೆ  ಎಂದು ಹೇಳಿದರು.

ಸಿ‌ಐಟಿಯು ಜಿಲ್ಲಾ ಅಧ್ಯಕ್ಷರಾದ ಕೆ.ಶಂಕರ್ ಮಾತನಾಡಿ – ಜಗತ್ತಿನಾದ್ಯಂತ ನಿರುದ್ಯೋಗ ಎಂಬುದು ಗಂಭೀರ ಸಮಸ್ಯೆಯಾಗುತ್ತಿದೆ. ಮುಂದುವರಿದ ರಾಷ್ಟ್ರಗಳಲ್ಲೂ ಕೂಡಾ ನಿರುದ್ಯೋಗ ಸಂಖ್ಯೆ ಬೆಳೆಯುತ್ತಿದೆ. ನಿರುದ್ಯೋಗಿಗಳಿಗೆ ಇರುವ ಕೆಲವು ರಕ್ಷಣಾತ್ಮಕ ಸವಲತ್ತುಗಳು ಕೂಡಾ ಬಲಪಂಥೀಯ ಸರಕಾರಗಳು ಕಸಿದುಕೊಳ್ಳುತ್ತಿವೆ. ಸಮಾಜವಾದಿ ರಾಷ್ಟ್ರಗಳಲ್ಲಿ ಮಾತ್ರ ನಿರುದ್ಯೋಗಿಗಳ ಸವಲತ್ತುಗಳು ರಕ್ಷಣೆ ಆಗುತ್ತಿದೆ. ನಮ್ಮ ದೇಶದ ಕೇಂದ್ರ ಸರಕಾರ ಅತ್ಯಂತ ಮಹತ್ವದ ಯೋಜನೆಗಳಲ್ಲೊಂದಾದ ಉದ್ಯೋಗಖಾತ್ರಿ ಯೋಜನೆಯನ್ನು ಬಲಹೀನಗೊಳಿಸಲು ಹೊರಟಿದೆ. ಅಲ್ಲದೆ ಕಾರ್ಮಿಕರಿಗೆ ಸಿಗುವ ಸಂಬಳ ಸಹಿತ ಕೆಲವು ರಜೆಗಳನ್ನು ಮೋದಿ ಸರಕಾರ ಕಾರ್ಮಿಕರಿಗೆ ನಿರಾಕರಿಸುವ ಸೂಚನೆ ನೀಡಿದೆ. ಹೀಗಾಗಿ ಎಲ್ಲಾ ಕಾರ್ಮಿಕ ಸಂಘಟನೆಗಳು ಒಗ್ಗಟ್ಟಾಗಿ ಹೋರಾಟ ತೀವ್ರಗೊಳಿಸಬೇಕಾಗಿದೆ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಸುಮಾರು 150 ಮಂದಿ ಕಾರ್ಮಿಕರು ಭಾಗವಹಿಸಿದ್ದರು. ನಂತರ ನಿರುದ್ಯೋಗದ ಭೂತ ದಹನ ಮಾಡಲಾಯಿತು. ಸಿ‌ಐಟಿಯು ತಾಲೂಕು ಪ್ರಧಾನ ಕಾರ್ಯದರ್ಶಿ ಸುರೇಶ ಕಲ್ಲಾಗರ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು.

ಕಾರ್ಮಿಕ ಮುಖಂಡರಾದ ಯು.ದಾಸ ಭಂಡಾರಿ, ಮಹಾಬಲ ವಡೇರಹೋಬಳಿ ಉಪಸ್ಥಿತರಿದ್ದರು. ಪ್ರತಿಭಟನೆಯಲ್ಲಿ ಹಂಚು ಕಾರ್ಮಿಕರು, ಕಟ್ಟಡ ಕಾರ್ಮಿಕರು ಭಾಗವಹಿಸಿದ್ದರು. ಕಟ್ಟಡ ಕಾರ್ಮಿಕ ಸಂಘದ ಮುಖಂಡರಾದ ಸಂತೋಷ್ ಹೆಮ್ಮಾಡಿ ವಂದಿಸಿದರು. ಡಿವೈ‌ಎಫ್‌ಐ ತಾಲೂಕು ಕಾರ್ಯದರ್ಶಿ ರಾಜೇಶ್ ವಡೇರಹೋಬಳಿ, ಎಸ್‌ಎಫ್‌ಐ ಮುಖಂಡರಾದ ಅಕ್ಷಯ್ ವಡೇರಹೋಬಳಿ ಉಪಸ್ಥಿತರಿದ್ದರು.

Write A Comment