ಕರಾವಳಿ

ಮುಖ್ಯಮಂತ್ರಿ  ಸಿದ್ದರಾಮಯ್ಯ ಅವರಿಂದ ನಾಳೆ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರ ಉದ್ಘಾಟನೆ 

Pinterest LinkedIn Tumblr
pilikula_sciencecenter_open_9
ಮಂಗಳೂರು,ಸೆಪ್ಟಂಬರ್.30: ಪಿಲಿಕುಳದಲ್ಲಿ ಸುಮಾರು 11 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿರುವ ಪ್ರಾದೇಶಿಕ ವಿಜ್ಞಾನ ಕೇಂದ್ರದ ಉದ್ಘಾಟನೆ ಅ. 1ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಖಾತೆಯ ರಾಜ್ಯ ಸಚಿವ ಶ್ರೀಪಾದ ನಾಯಕ್‌ ಅವರಿಂದ ನೆರವೇರಲಿದೆ.
ರಾಷ್ಟ್ರೀಯ ವಿಜ್ಞಾನ ವಸ್ತು ಸಂಗ್ರಹಾಲಯಗಳ ಪರಿಷತ್‌ (ಎನ್‌ಸಿಎಸ್‌ಎಂ) ಕರ್ನಾಟಕ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಬೆಂಬಲದೊಂದಿಗೆ ಈ ಪ್ರಾದೇಶಿಕ ವಿಜ್ಞಾನ ಕೇಂದ್ರವನ್ನು ಅಭಿವೃದ್ಧಿ ಪಡಿಸಿದ್ದು, 8.50 ಕೋಟಿ ರೂ. ವೆಚ್ಚದಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರಗಳ ಸಮಾನ ಪಾಲುದಾರಿಕೆ ಇದೆ. ಅಲ್ಲದೆ ರಾಜ್ಯ ಸರಕಾರ 2 ಕೋಟಿ ರೂ.ಗಳನ್ನು ಹೆಚ್ಚುವರಿಯಾಗಿ ಒದಗಿಸಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರು ತಿಳಿಸಿದ್ದಾರೆ.
45ನೇ ಪ್ರಾದೇಶಿಕ ವಿಜ್ಞಾನ ಕೇಂದ್ರ
ರಾಷ್ಟ್ರೀಯ ವಿಜ್ಞಾನ ವಸ್ತು ಸಂಗ್ರಹಾಲಯಗಳ ಪರಿಷತ್ತಿನ ಪರಿಕಲ್ಪನೆ ಮತ್ತು ವಿನ್ಯಾಸಗಳಿಂದ ಅಭಿವೃದ್ಧಿ ಪಡಿಸಲಾಗಿರುವ ದೇಶದ 45ನೇ ಪ್ರಾದೇಶಿಕ ವಿಜ್ಞಾನ ಕೇಂದ್ರ ಇದಾಗಿರುತ್ತದೆ. ಇದು ಪ್ರದರ್ಶಿಕೆಗಳು ಮತ್ತು ಚಟುವಟಿಕೆಗಳು ಎಂಬ ಎರಡು ರೀತಿಯ ಕಾರ್ಯತಂತ್ರಗಳಿಂದ ವಿಜ್ಞಾನವನ್ನು ಪ್ರಸಾರ ಮಾಡಲಿದೆ. 4,000 ಚ.ಮೀ. ಜಾಗದಲ್ಲಿ ಜೀವ ವೈವಿಧ್ಯ, ಮುಂಚೂಣಿ ತಂತ್ರಜ್ಞಾನ ಮತ್ತು ಮೋಜಿನ ವಿಜ್ಞಾನ ಎಂಬ ಮೂರು ಶಾಶ್ವತ ಪ್ರದರ್ಶನಾಲಯಗಳಿರುತ್ತವೆ. ‘ಪ್ಲಾನೆಟ್‌ ಅಂಡರ್‌ ಪ್ರಶರ್‌’ ಎಂಬ ತಾತ್ಕಾಲಿಕ ಪ್ರದರ್ಶನಾಲಯವೂ ಇರುತ್ತದೆ. 3ಡಿ ಪ್ರದರ್ಶನಾಲಯ, ತಾರಾ ಮಂಡಲ, ದೃಶ್ಯ- ಶ್ರವಣ ಸಾಧನಗಳ ಸೌಲಭ್ಯವಿರುವ ಹವಾ ನಿಯಂತ್ರಿತ ಸಭಾಂಗಣ, ವಿಜ್ಞಾನ ಪ್ರಾತ್ಯಕ್ಷಿಕೆಗಳ ವಿಭಾಗ, ಸೃಜನಾತ್ಮಕ ಕಲಿಕಾ ಕೇಂದ್ರ ಗ್ರಂಥಾಲಯ, ಆಕಾಶ ವೀಕ್ಷಣೆಗೆ ದೂರದರ್ಶಕ ಮತ್ತು ವಿಜ್ಞಾನ ಉದ್ಯಾನವನ ಇತ್ಯಾದಿಗಳಿರುತ್ತವೆ.
ಜೀವ ವೈವಿಧ್ಯ ಪ್ರದರ್ಶನಾಲಯವು ದೇಶದ ಏಕೈಕ ಪ್ರದರ್ಶನಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ತಾರಾಲಯವು ಒಂದು ವರ್ಷದೊಳಗೆ ವೀಕ್ಷಣೆಗೆ ಸಿದ್ಧವಾಗಲಿದೆ. ಉದ್ಯಾನವನವು 4 ಎಕರೆ ಜಾಗದಲ್ಲಿ ಹರಡಿದೆ ಎಂದು ರೈ ವಿವರಿಸಿದ್ದಾರೆ.
pilikula_opening_photo_5 pilikula_opening_photo_2 pilikula_opening_photo_3 pilikula_opening_photo_7
‘ಪ್ರಾದೇಶಿಕ ವಿಜ್ಞಾನ ನಗರ’
ಪಿಲಿಕುಳ ನಿಸರ್ಗಧಾಮವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸಲು ಕಳೆದ 18 ವರ್ಷಗಳಿಂದ ಪ್ರಯತ್ನ ನಡೆಯುತ್ತಿದೆ. ಇತ್ತೀಚೆಗೆ ಈಪ್ರದೇಶಕ್ಕೆ ಸಿಟಿ ಬಸ್‌ ವ್ಯವಸ್ಥೆ ಕಲ್ಪಿಸಲಾಗಿದೆ. ವಿಜ್ಞಾನ ಕೇಂದ್ರವನ್ನೂ ಇದರಲ್ಲಿ ಸೇರಿಸಿ ಪಿಲಿಕುಳವನ್ನು ‘ಪ್ರಾದೇಶಿಕ ವಿಜ್ಞಾನ ನಗರ’ವನ್ನಾಗಿಸಲು ಪ್ರಯತ್ನ ಸಾಗಿದೆ ಎಂದು ಶಾಸಕ ಹಾಗೂ ಪಿಲಿಕುಳ ನಿಸರ್ಗಧಾಮ ಸೊಸೈಟಿಯ ಮಾಜಿ ಕಾರ್ಯ ನಿರ್ವಾಹಕ ನಿರ್ದೇಶಕರೂ ಆದ ಜೆ.ಆರ್‌. ಲೋಬೊ ತಿಳಿಸಿದ್ದಾರೆ.
ನಾಳೆ ನಡೆಯಲ್ಲಿರುವ ಉದ್ಘಾಟನಾ ಕಾರ್ಯಕ್ರಮದಲ್ಲಿ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ,  ಸಚಿವರಾದ ಯು.ಟಿ.ಖಾದರ್, ಅಭಯಚಂದ್ರ ಜೈನ್, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಜೆ.ಆರ್‌. ಲೋಬೊ, ಮೊಯ್ದಿನ್ ಬಾವ, ಎಮ್.ಎಲ್.ಸಿ ಐವನ್ ಡಿಸೋಜಾ, ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ, ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರ ಸೊಸೈಟಿಯ ಸದಸ್ಯ ಕಾರ್ಯದರ್ಶಿ ಪ್ರಭಾಕರ ಶರ್ಮ, ನಿರ್ದೇಶಕ ಡಾ| ಕೆ.ವಿ. ರಾವ್‌ ಹಾಗೂ ಇತರ ಅಧಿಕಾರಿಗಳು, ಜಿಲ್ಲೆಯ ಗಣ್ಯರು ಭಾಗವಹಿಸಲಿದ್ದಾರೆ.

Write A Comment