ಕರಾವಳಿ

ಅನಂತಮೂರ್ತಿ ಸಂಸ್ಮರಣೆ ಕಾರ್ಯಕ್ರಮ -ಅನಂತಮೂರ್ತಿಯವರು ಅತ್ಯಾಧುನಿಕ ತಂತ್ರ ಜ್ಞಾನದ ವಿರೋಧಿಯಾಗಿರಲಿಲ್ಲ : ಡಾ.ಅನುರಾಧ

Pinterest LinkedIn Tumblr

Anatamurti_wife_dougtr

ಮಂಗಳೂರು, ಸೆ.25: ‘‘ಅನಂತಮೂರ್ತಿಯವರಿಗೆ ನಾವಷ್ಟೇ ಮಕ್ಕಳಾಗಿರಲಿಲ್ಲ. ಮನೆಗೆ ಬಂದ ಯುವ ತರುಣರನ್ನೆಲ್ಲ ಮಕ್ಕಳಂತೆಯೇ ಮಾತನಾಡಿಸುತ್ತಿದ್ದರು. ಸಣ್ಣವರೆಂಬ ಯಾವ ಅಂತರವನ್ನೂ ಇಟ್ಟುಕೊಳ್ಳದೆ ಅವರು ಬೆರೆಯುತ್ತಿದ್ದರು. ಅನಂತಮೂರ್ತಿಯನ್ನು ಭೇಟಿಯಾಗಲು ದಿನಪೂರ್ತಿ ಒಬ್ಬರಲ್ಲ ಒಬ್ಬರು ಬರುತ್ತಿದ್ದರು. ಅವರೊಂದಿಗೆ ಅಷ್ಟೇ ಪ್ರೀತಿ, ವಿಶ್ವಾಸದಿಂದ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದರು. ಇದರಿಂದಾಗಿ ನನ್ನ ಕುಟುಂಬ ಕೇವಲ ನನ್ನ ಮಕ್ಕಳಿಗಷ್ಟೇ ಸೀಮಿತವಾಗಿ ಉಳಿಯಲಿಲ್ಲ’’ ಹೀಗೆಂದು ದೇಶದ ಖ್ಯಾತ ಚಿಂತಕ, ಸಾಹಿತಿ ಡಾ.ಯು.ಆರ್. ಅನಂತಮೂರ್ತಿಯವರ ಕುರಿತಂತೆ ಅನಿಸಿಕೆಗಳನ್ನು ಹಂಚಿಕೊಂಡಿದ್ದು, ಅವರ ಪತ್ನಿ ಎಸ್ತರ್ ಅನಂತಮೂರ್ತಿ.

ಮಂಗಳೂರು ವಿ.ವಿ. ಕಾಲೇಜಿನ ಇಂಗ್ಲಿಷ್ ಅಸೋಸಿಯೇಶನ್ ಮತ್ತು ಕನ್ನಡ ಸಂಘ ಜಂಟಿಯಾಗಿ ರವೀಂದ್ರ ಕಲಾಭವನದಲ್ಲಿ ಗುರುವಾರ ಆಯೋಜಿಸಿದ ಅನಂತಮೂರ್ತಿ ಸಂಸ್ಮರಣೆ ಕಾರ್ಯಕ್ರಮದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು ಅನಂತಮೂರ್ತಿ ಜೊತೆಗೆ ಕಳೆದ ಅವಿಸ್ಮರಣೀಯ ದಿನಗಳನ್ನು ಸಭಿಕರೊಂದಿಗೆ ಹಂಚಿಕೊಂಡರು. ಈ ಸಂದರ್ಭದಲ್ಲಿ ಅನಂತಮೂರ್ತಿಯವರ ಪುತ್ರಿ ಡಾ.ಅನುರಾಧ ಉಪಸ್ಥಿತರಿದ್ದು, ಸಭಿಕರ ಪ್ರಶ್ನೆಗಳಿಗೆ ಉತ್ತರಿಸಿದರು.

ಸಾಹಿತಿಗಳ ಮಡದಿಯಾಗಿರುವುದು ಕಷ್ಟ ಎನ್ನುತ್ತಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಎಸ್ತರ್, ನಾನು ಅವರ ವಿದ್ಯಾರ್ಥಿಯಾಗಿದ್ದೆ. ಮದುವೆಯಾಗುವ ಸಂದರ್ಭದಲ್ಲಿ ಒಬ್ಬ ಸಾಹಿತಿಯ ಮನೆಯ ವಾತಾವರಣ ಹೇಗಿರುತ್ತದೆ ಎನ್ನುವುದು ನನಗೆ ಅರಿವಿರಲಿಲ್ಲ. ಅನಂತಮೂರ್ತಿಯವರು ಸಾಹಿತಿ ಯಾಗಿ ಬೆಳೆಯುತ್ತಾ ಹೋದಂತೆ ಮನೆ ತುಂಬಾ ಜನ ಬರಲು ಆರಂಭಿಸಿದರು. ಸಾಹಿತಿಯ ಪತ್ನಿಯಾಗಿ ಹೇಗೆ ಬಾಳಬೇಕು ಎನ್ನುವುದನ್ನು ನಾನು ನಿಧಾನಕ್ಕೆ ರೂಢಿಸಿಕೊಂಡೆ. ಅವರನ್ನು ನೋಡಿಕೊಳ್ಳುತ್ತಾ, ನಾನೂ ಬೆಳೆದೆ ಎಂದು ಹೇಳಿದರು.

ಮದುವೆಯಾದ ಆರಂಭದ ದಿನ ಅದು. ಒಲೆ ಮೇಲೆ ಪಲ್ಯ ಬೇಯಲು ಇಟ್ಟು ನಾನು ಬಟ್ಟೆ ಒಗೆಯುತ್ತಿದ್ದೆ. ಅಡುಗೆಯ ನೆನಪಾಗಿ ‘‘ರೀ, ಒಲೆಯ ಮೇಲೆ ಪಲ್ಯ ಬೇಯುತ್ತಿದೆ. ಸ್ವಲ್ಪ ಸೌಟು ತಿರುವಿಸಿ’ ಎಂದೆ. ಆದರೆ ಅಷ್ಟಕ್ಕೇ ಸಿಕ್ಕಾಪಟ್ಟೆ ಮಗುವಿನಂತೆ ರೇಗಾಡಿದರು. ‘‘ನಾನಿಲ್ಲಿ ಬರೆಯುತ್ತಾ ಇದ್ದೇನೆ… ನನ್ನಲ್ಲಿ ಅಡುಗೆ ಮಾಡೋದಕ್ಕೆ ಹೇಳುತ್ತೀಯ’’ ಎಂದು ಸಿಟ್ಟಾದರು. ನಿಧಾನಕ್ಕೆ ಒಬ್ಬ ಸಾಹಿತಿಯನ್ನು ಹೇಗೆ ನೋಡಿಕೊಳ್ಳ ಬೇಕು ಎನ್ನುವುದನ್ನು ನಾನು ಕಲಿತೆ ಎಂದು ಅನಂತಮೂರ್ತಿಯ ಜೊತೆಗಿನ ಆರಂಭದ ದಿನಗಳನ್ನು ನೆನೆದುಕೊಂಡರು.

ಸಂಸ್ಕಾರ ಕಾದಂಬರಿ ಬರೆದ ದಿನಗಳನ್ನು ನೆನೆದುಕೊಂಡ ಎಸ್ತರ್, ‘‘ಅವರು ಸಂಸ್ಕಾರ ಕಾದಂಬರಿ ಬರೆಯು ತ್ತಿರುವುದು ನನಗೆ ಗೊತ್ತೇ ಇರಲಿಲ್ಲ. ಅದೇನೋ ಹಗಲು ರಾತ್ರಿ ಬರೀತಾ ಇದ್ದರು. ಅದ್ಯಾವುದೋ ಥೀಸಿಸ್ ಹಿಂದೆ ಬಿದ್ದಿರಬೇಕು ಅಂದು ಕೊಂಡಿದ್ದೆ. ಬರೆದು ಪೂರ್ತಿ ಯಾದಾಕ್ಷಣ ಅವರು ನನಗೆ ತೋರಿಸಿದರು. ಆಗ ನನಗೆ ಗೊತ್ತಾಯಿತು ಸಂಸ್ಕಾರ ಕಾದಂಬರಿ ಕುರಿತಂತೆ’’ ಎಂದು ಹೇಳಿದರು.
ಯುವ ಜನರು ಬದಲಾವಣೆಯಾಗ್ತಾರೆ

ಯುವ ತರುಣರ ಕುರಿತಂತೆ ಅನಂತಮೂರ್ತಿಗೆ ಅಗಾಧ ನಂಬಿಕೆಯಿತ್ತು ಎಂದು ಅವರ ಪುತ್ರಿ ಡಾ. ಅನುರಾಧ ಅನಂತಮೂರ್ತಿ ನೆನಪು ಗಳನ್ನು ಹಂಚಿಕೊಂಡರು. ಯಾರಾದರೂ ತನ್ನ ವಿರುದ್ಧ ಟೀಕೆಗಳನ್ನು ಮಾಡಿದರೆ, ತನ್ನ ಜೊತೆಗೆ ಜಗಳವನ್ನು ಮಾಡಿದರೆ ಅದನ್ನು ಸದಾ ನೆನಪಲ್ಲಿಟ್ಟು ಕೊಳ್ಳುವ ಸ್ವಭಾವ ಅವರದಾಗಿರಲಿಲ್ಲ. ‘ಯಾಕೆ ಮತ್ತೆ ಅವರ ಸಮಾರಂಭಕ್ಕೆ ಹೋಗ್ತೀಯಾ?’ ಎಂದು ನಾವು ಅಸಮಾಧಾನದಿಂದ ಕೇಳಿದರೆ ‘‘ಯುವ ಜನರು ಬದಲಾವಣೆಯಾಗ್ತಾರೆ’’ ಎಂದು ಹೇಳುತ್ತಿದ್ದರು.

‘‘ಅವರೆಂದೂ ಅತ್ಯಾಧುನಿಕ ತಂತ್ರ ಜ್ಞಾನದ ವಿರೋಧಿಯಾಗಿರಲಿಲ್ಲ. ಬರೆ ಯುವುದಕ್ಕೆ ಕಂಪ್ಯೂಟರನ್ನೇ ಬಳಸ್ತಾ ಇದ್ದರು. ಆಧುನಿಕ ವ್ಯಾಟ್ಸಪ್‌ನ್ನೂ ಬಳ ಸುತ್ತಿದ್ದರು’’ ಎನ್ನುವುದನ್ನು ಅನುರಾಧ ನೆನಪಿಸಿಕೊಂಡರು.

ನನ್ನ ತಂದೆ ವೈದಿಕ ಧರ್ಮದ ವೌಢ್ಯಗಳನ್ನು ಟೀಕಿಸುತ್ತಿದ್ದರೂ, ಆ ಧರ್ಮದೊಳಗಿನ ತಾತ್ವಿಕ ಅಂಶಗಳನ್ನು ಅಪಾರವಾಗಿ ಗೌರವಿಸುತ್ತಿದ್ದರು. ಅವರೆಂದೂ ಬ್ರಾಹ್ಮಣ ವಿರೋಧಿ ಯಾಗಿರಲಿಲ್ಲ. ನನ್ನ ತಾಯಿಯದು ಕ್ರೈಸ್ತ ಧರ್ಮವಾಗಿತ್ತು. ನಾವು ಎರಡೂ ಧರ್ಮಗಳಿಗೂ ಗೌರವವನ್ನು ನೀಡು ತ್ತಿದ್ದೆವು. ಬೈಬಲನ್ನು ನನ್ನ ತಾಯಿ ಗಿಂತಲೂ ಹೆಚ್ಚು ಓದಿ ಅರ್ಥ ಮಾಡಿ ಕೊಂಡಿದ್ದರು. ಕ್ರಿಸ್ಮಸ್ ದಿನವನ್ನೂ ನಾವು ತಾಯಿಯ ಮನೆಯಲ್ಲಿ ಆಚರಿಸುತ್ತಿ ದ್ದೆವು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಅನುರಾಧ ಹೇಳಿದರು.

‘‘ಅವರ ಅಂತ್ಯ ಸಂಸ್ಕಾರವನ್ನು ನಾವು ಬ್ರಾಹ್ಮಣ ವಿಧಿ ವಿಧಾನದಂತೆಯೇ ನೆರವೇರಿಸಿದೆವು. ಅವರಿಗೆ ಏನು ಇಷ್ಟವಾಗಬಹುದು ಅನ್ನೋ ನೆಲೆಯಲ್ಲಿ ನಾವು ಆ ತೀರ್ಮಾನವನ್ನು ತೆಗೆದು ಕೊಂಡೆವು. ಇದು ಕೆಲವರ ಟೀಕೆಗೆ ಗುರಿಯಾಗಿತ್ತು’’ ಎಂದು ನೆನಪಿಸಿಕೊಂಡರು.

ವೇದಿಕೆಯಲ್ಲಿ ‘ದಿ ಹಿಂದೂ ಪತ್ರಿಕೆ’ ಯ ಹಿರಿಯ ಸಂಪಾದಕಿ ದೀಪಾ ಗಣೇಶ್ ಉಪಸ್ಥಿತರಿದ್ದು, ಅನಂತಮೂರ್ತಿ ಕುರಿತಂತೆ ತನ್ನ ಅನಿಸಿಕೆಗಳನ್ನು ಹಂಚಿಕೊಂಡರು. ಕಾಲೇಜಿನ ಪ್ರಾಂಶುಪಾಲ ಡಾ. ಸತ್ಯನಾರಾಯಣ ಮಲ್ಲಿಪಟ್ಣ, ಉಪನ್ಯಾಸಕ ಪಟ್ಟಾಭಿರಾಮ ಸೋಮಯಾಜಿ ಸಹಿತ ಹಲವು ಪತ್ರಕರ್ತರು, ಲೇಖಕರು, ವಿದ್ಯಾರ್ಥಿ ಗಳು ಸಂವಾದದಲ್ಲಿ ಭಾಗವಹಿಸಿದ್ದರು.

ನಿಂದನೆಗಳ ಪತ್ರಗಳು, ಬೆದರಿಕೆ ಪತ್ರಗಳು ಬರುತ್ತಲೇ ಇವೆ!

ಅನಂತಮೂರ್ತಿಯವರ ಮೇಲೆ ಎರಗಿದ ಅಸೂಕ್ಷ್ಮವಾದ ಟೀಕೆಗಳು, ದಾಳಿಗಳಿಗೆ ಉತ್ತರಿಸಿದ ಡಾ.ಅನುರಾಧ ‘‘ಕೊನೆಯ ದಿನಗಳಲ್ಲಿ ಇದು ಅನಂತಮೂರ್ತಿ ಯವರನ್ನು ಒಂದಿಷ್ಟು ನೋವಿಗೆ ತಳ್ಳಿತ್ತು. ಅವರನ್ನು ಆಸ್ಪತ್ರೆಯಲ್ಲೂ ಕನವರಿಸುವಂತೆ ಮಾಡಿತ್ತು’’ ಎಂದು ನೆನಪಿಸಿಕೊಂಡರು. ‘‘ಈ ಹಿಂದೆ ವೈಚಾರಿಕ ಹಿನ್ನೆಲೆಯ ದಾಳಿಗಳು ತಂದೆಯ ಮೇಲೆ ನಡೆಯುತ್ತಿದ್ದವು. ಆದರೆ ಇತ್ತೀಚಿನ ದಿನಗಳಲ್ಲಿ ಯಾವುದೇ ವೈಚಾರಿಕ ಹಿನ್ನೆಲೆಯಿಲ್ಲದ, ಅಸೂಕ್ಷ್ಮವಾದ, ವೈಯಕ್ತಿಕ ದಾಳಿಗಳು ನಡೆದವು. ಇದರಿಂದ ನೊಂದುಕೊಂಡರಾದರೂ, ಕುಗ್ಗಲಿಲ್ಲ. ಜೀವನದ ಕೊನೆಯವರೆಗೂ ಅವರು ವೌನ ತಾಳಲಿಲ್ಲ. ಹೇಳಬೇಕಾದುದನ್ನು ಹೇಳುತ್ತಲೇ ಹೋದರು’’ ಎಂದು ಅನಂತಮೂರ್ತಿಯವರ ಕಡೆ ದಿನಗಳ ಕ್ಷಣಗಳನ್ನು ಹಂಚಿಕೊಂಡರು.

‘‘ಅತ್ಯಂತ ನೋವಿನ ಸಂಗತಿಯೆಂದರೆ, ಅವರಿರುವಾಗಲೂ, ಅವರು ತೀರಿ ಹೋದ ಬಳಿಕವೂ ಟೀಕೆಗಳು, ನಿಂದನೆಗಳ ಪತ್ರಗಳು ಬರುತ್ತಲೇ ಇವೆ. ಈಗಲೂ ದಕ್ಷಿಣ ಕನ್ನಡದಿಂದ ಬೇರೆ ಬೇರೆ ಹೆಸರಿನಲ್ಲಿ ಬೆದರಿಕೆಯ ಪತ್ರಗಳು ಬರುತ್ತಿವೆ’’ ಎಂದು ಅವರು ಹೇಳಿದರು.

Write A Comment