ಕರಾವಳಿ

ತೋಕೂರಿನಿಂದ ಪಾದೂರಿಗೆ ಐಎಸ್‌ಪಿಆರ್‌ಎಲ್ ಕಚ್ಚಾತೈಲ ಸಾಗಣೆ ಕೊಳವೆ ಮಾರ್ಗ : ಕುತ್ಯಾರು, ಪಾದೂರು, ಕಳತ್ತೂರು ಗ್ರಾಮಸ್ಥರ ವಿರೋಧ

Pinterest LinkedIn Tumblr

 ISRL_Pipe_Line_1

ಅವೈಜ್ಞಾನಿಕ ಸರ್ವೇ, ಕನಿಷ್ಠ ಪರಿಹಾರ ನಿಗದಿಯಿಂದ ಕೃಷಿಕರಿಗೆ ತೊಂದರೆ ನೀಡಲು ಸಿದ್ದವಾಗಿರುವ ಐಎಸ್‌ಆರ್‌ಎಲ್‌ ಯೋಜನೆಯ ಪೈಪ್‌ ಲೈನ್‌ ಹಾದು ಹೋಗುವ ಕೃಷಿ ಭೂಮಿ.

ಮಂಗಳೂರು /ಉಡುಪಿ : ಪಾದೂರಿನಲ್ಲಿರುವ ಐಎಸ್‌ಪಿಆರ್‌ಎಲ್ ಕಚ್ಚಾತೈಲ ಸಂಸ್ಥೆಗೆ ಮಂಗಳೂರಿನ ತೋಕೂರಿನಿಂದ ಉಡುಪಿ ಜಿಲ್ಲೆಯ ಪಾದೂರಿನವರೆಗೆ ಕಚ್ಚಾತೈಲ ಸಾಗಣೆ ಕೊಳವೆ ಮಾರ್ಗಕ್ಕೆ ಫಲಭರಿತ ಕೃಷಿ ಭೂಮಿಯನ್ನು ಗುರುತಿಸಲಾಗಿದೆ. ಇದರ ಭೂಸ್ವಾಧೀನಕ್ಕೆ ತಮ್ಮ ತೀವ್ರ ವಿರೋಧವಿದೆ ಎಂದು ಕುತ್ಯಾರು, ಪಾದೂರು, ಕಳತ್ತೂರು ಜನಜಾಗೃತಿ ಸಮಿತಿ ನೇತೃತ್ವದಲ್ಲಿ ಸಂತ್ರಸ್ತ ಗ್ರಾಮಗಳ ಗ್ರಾಮಸ್ಥರು ಹೇಳಿದ್ದಾರೆ.

ಕಳತ್ತೂರಿನಲ್ಲಿ ಈ ಕುರಿತು ಇಂದು ಗ್ರಾಮಸ್ಥರ ಸಭೆ ನಡೆಸಿದ ಸಮಿತಿಯ ಪದಾಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ್ದಾರೆ. ಉಡುಪಿ ಜಿಲ್ಲೆಯ ಏಳು-ಪಾದೂರು, ಕಳತ್ತೂರು, ಬೆಳಪು, ಎಲ್ಲೂರು, ಸಾಂತೂರು, ನಂದಿಕೂರು, ಇನ್ನಾ ಗ್ರಾಮಗಳು ಹಾಗೂ ಮಂಗಳೂರು ತಾಲೂಕಿನ 17-ಬಳ್ಕುಂಜೆ, ಕರ್ನಿರೆ, ಕವತ್ತಾರು, ಅತಿಕಾರಿಬೆಟ್ಟು, ಸಿಮಂತೂರು, ತಾಳಿಪಾಡಿ, ಕಿಲ್ಪಾಡಿ, ಬೆಳ್ಳಯೂರು, ತೋಕೂರು, ಕೊಕುಡೆ, ಪಂಜ, ಮಧ್ಯ, ಸೂರಿಂಜೆ, ಕುತ್ತೆತ್ತೂರು, ಕಾಟಿಪಳ್ಳ, ಬಾಳ ಹಾಗೂ 62 ತೋಕೂರು ಗ್ರಾಮಗಳಲ್ಲಿ ಈ ಪೈಪ್‌ಲೈನ್ ಹಾಕುವ ಬಗ್ಗೆ ಈಗಾಗಲೇ ಮಾಹಿತಿ ಸಿಕ್ಕಿದೆ ಎಂದು ಸಮಿತಿಯ ಸಂಚಾಲಕ ಲಾರೆನ್ಸ್ ಫೆರ್ನಾಂಡಿಸ್ ಹಾಗೂ ಪ್ರಧಾನ ಕಾರ್ಯದರ್ಶಿ ಅಶೋಕ್ ರಾವ್ ತಿಳಿಸಿದರು.

ಈ ಪ್ರದೇಶಗಳಲ್ಲಿ ಅತೀ ಹೆಚ್ಚು ಸಣ್ಣ ಹಿಡುವಳಿದಾರರಿದ್ದು, ಫಲವತ್ತಾದ ಕೃಷಿ ಭೂಮಿಯಿದೆ. ಉತ್ತಮ ನೀರಾವರಿ ಸೌಕರ್ಯವನ್ನು ಹೊಂದಿರುವ ಜಮೀನು ಸಂಪೂರ್ಣ ನಿಷ್ಪ್ರಯೋಜಕವಾಗಲಿವೆ. ಹೆಚ್ಚಾಗಿ ಸಣ್ಣ ಹಿಡುವಳಿ ದಾರರ ಕುಟುಂಬಗಳೇ ಹೆಚ್ಚಿರುವ ಈ ಭಾಗದಲ್ಲಿ ರೈತರು ಬೀದಿಪಾಲಾಗುವ ಭೀತಿ ಇದೆ ಎಂದವರು ವಿವರಿಸಿದ್ದಾರೆ.

ಯೋಜನೆಗೆ ಪೈಪ್‌ಲೈನ್ ಹಾದುಹೋಗುವ ಭೂಮಿಯಲ್ಲಿ ಸುಮಾರು 60-70 ಅಡಿ ಅಗಲ ಹಾಗೂ 10ರಿಂದ 15 ಅಡಿ ಆಳದ ಗುಂಡಿ ತೋಡಲಾಗುತ್ತದೆ. ಹೀಗೆ ತೆಗೆದ ಮಣ್ಣನ್ನು ಇಕ್ಕೆಲ್ಲಗಳಲ್ಲಿ ರಾಶಿ ಹಾಕುವುದರಿಂದ ಮತ್ತೆ 20+20 ಅಡಿ ಜಾಗ ಹಾಳಾಗಲಿದೆ. ಹೀಗೆ ಒಟ್ಟು 100 ಅಡಿಗಳಷ್ಟು ಕೃಷಿಭೂಮಿ ಹಾಳಾಗುವ ಸಂಭವವಿದ್ದು, ಭಾರೀ ವಾಹನಗಳ ಓಡಾಟದಿಂದ ಇನ್ನಷ್ಟು ಸ್ಥಳ ಹಾಳಾಗುವ ಸಾಧ್ಯತೆಯಿದೆ ಎಂದರು.

ಹೀಗೆ ಪೈಪ್‌ಲೈನ್ ಹಾದುಹೋಗುವ ಸ್ಥಳದ ಸುಮಾರು 100 ಅಡಿ ಜಾಗ ಮುಂದೆ ಯಾವುದಕ್ಕೂ ಪ್ರಯೋಜನವಿಲ್ಲದಾಗುತ್ತದೆ. ಅಲ್ಲಿ ಮುಂದಿನ ದಶಕಗಳ ಕಾಲ ಯಾವುದೇ ಕೃಷಿ ಚಟುವಟಿಕೆ ನಡೆಸಲು ಸಾದ್ಯವಿಲ್ಲ. ಅಲ್ಲದೇ ಆಸುಪಾಸಿನಲ್ಲಿ ಮನೆಕಟ್ಟಲು, ಬಾವಿ ತೋಡಲು ಸಹ ಸಾಧ್ಯವಿಲ್ಲ. ಹೀಗಾಗಿ ಜಾಗದ ಮಾಲಕರು ಅತಂತ್ರರಾಗುವ ಭೀತಿ ಇದೆ ಎಂದರು.

ISRL_Pipe_Line_2

ಇನ್ನು ಈ ಭಾಗದಲ್ಲಿ ಸಣ್ಣ ಹಿಡುವಳಿದಾರರಾದ ಅವಿಭಕ್ತ ಕುಟುಂಬಗಳೇ ಇವೆ. ಒಂದು ಕುಟುಂಬ ಸರಕಾರಿ 20-30 ಸೆಂಟ್ಸ್‌ನಿಂದ ಒಂದು ಎಕರೆಯವರೆಗೆ ಭೂಮಿ ಹೊಂದಿದೆ. ಇವರ ಜಾಗದಲ್ಲಿ ಪೈಪ್‌ಲೈನ್ ಹಾದು ಹೋದರೆ ಅವರು ಮುಂದೆ ಅನುಭವಿಸುವ ಸಮಸ್ಯೆಗಳು ಅಗಾಧ ಎಂದು ಫೆರ್ನಾಂಡಿಸ್ ವಿವರಿಸಿದರು.

ಈಗ ಸಿಕ್ಕಿರುವ ಮಾಹಿತಿಯಂತೆ ಐಎಸ್‌ಪಿಆರ್‌ಎಲ್ ಪಾದೂರು ಯೋಜನೆಗೆ ಒಟ್ಟು ಮೂರು ಪ್ರತ್ಯೇಕ ಪೈಪ್‌ಲೈನ್ ಅಳವಡಿಸಲಾಗುತ್ತದೆ. ಒಂದು ಪಾದೂರಿನಿಂದ ತೋಕೂರುವರೆಗೆ ಹೊರಹೋಗುವ ಭೂಗತ ಪೈಪ್‌ಲೈನ್, ಎರಡು ಕಾಪುವಿನ ಮೂಳೂರಿನಿಂದ ಪಾದೂರುವರೆಗೆ ಒಳ ಬರುವ ಪೈಪ್‌ಲೈನ್ ಹಾಗೂ ನಂದಿಕೂರಿನಿಂದ ಪಾದೂರಿ ನವರೆಗೆ ಹೈಟೆನ್ಶನ್ ವಿದ್ಯುತ್ ಲೈನ್. ಈ ಮೂರು ಲೈನ್‌ಗಳು ಸುಮಾರು 500ರಿಂದ 800 ಮೀ. ಅಂತರದಲ್ಲಿರಲಿದ್ದು, ಗ್ರಾಮಗಳನ್ನೇ ಹೋಳುಗಳಾಗಿ ಮಾಡಿ ಕೃಷಿಕರ ಬದುಕನ್ನು ಸರ್ವನಾಶ ಮಾಡುವ ಸಂಭವವಿದೆ ಎಂದರು.

‘ಅಕ್ವಿಜಿಷನ್ ಆಫ್ ರೈಟ್ ಆಫ್ ಯೂಸರ್ ಇನ್‌ಲ್ಯಾಂಡ್’ ಅಧಿನಿಯಮ ದಡಿ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲು ನಮ್ಮ ತೀವ್ರ ವಿರೋಧವಿದೆ ಎಂದರು.
ಯೋಜನೆ ಕಳೆದ ಮೂರು ವರ್ಷಗಳಿಂದ ಕಾರ್ಯಗತ ಗೊಳ್ಳುತ್ತಿದ್ದರೂ ನಮಗೆ ಸ್ಪಷ್ಟ ಮಾಹಿತಿಯನ್ನೇ ನೀಡಲಾಗು ತ್ತಿಲ್ಲ. ಈಗಲೂ ಪೈಪ್‌ಲೈನ್ ಹಾದು ಹೋಗುವ ಮಾರ್ಗದ ಬಗ್ಗೆ ಐಎಸ್‌ಪಿಆರ್‌ಎಲ್ ಹಾಗೂ ಕೆಐಎಡಿಬಿ ಅಧಿಕಾರಿಗಳು ಗೊಂದಲಪೂರಿತ ಹೇಳಿಕೆಗಳನ್ನು ನೀಡುತ್ತಿದ್ದಾರೆ.

ಈ ಬಗ್ಗೆ ಜಿಲ್ಲಾಧಿಕಾರಿಯೊಂದಿಗೆ ಮೂರು ಸಭೆಗಳನ್ನು ನಡೆಸಿದ್ದರೂ, ಅವರಿಂದಲೂ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. ಕಾಪು ಶಾಸಕರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿಯಾದಾಗ ಅವರು ಗ್ರಾಮಗಳಿಗೆ ಭೇಟಿ ನೀಡಿ ಚರ್ಚಿಸುವ ಭರವಸೆ ನೀಡಿದ್ದರು. ಆದರೆ ಅವರಿನ್ನೂ ಇಲ್ಲಿಗೆ ಬಂದಿಲ್ಲ ಎಂದು ದೂರಿದರು.

ಸಂಬಂಧಿತರು ನಮಗೆ ಕೂಡಲೇ ಯೋಜನೆಯ ಸಂಪೂರ್ಣ ಮಾಹಿತಿ ನೀಡಬೇಕು. ಇಲ್ಲದಿದ್ದರೆ ಯೋಜನಾ ಪ್ರದೇಶದ ಉಡುಪಿಯ 7 ಹಾಗೂ ಮಂಗಳೂರಿನ 17 ಗ್ರಾಮಗಳ ಸಂತ್ರಸ್ತ ಗ್ರಾಮಸ್ಥರನ್ನು ಮನೆಮನೆಗೆ ತೆರಳಿ ಒಗ್ಗೂಡಿಸಿ ಬೃಹತ್ ಹೋರಾಟ ನಡೆಸಲು ಮುಂದಾಗುತ್ತೇವೆ ಎಂದವರು ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಶಿವರಾಮ ಶೆಟ್ಟಿ, ಜಿಪಂ ಸದಸ್ಯ ಅರುಣ್ ಶೆಟ್ಟಿ ಪಾದೂರು, ನವೀನ್ ಶೆಟ್ಟಿ ಕುತ್ಯಾರು, ಪ್ರವೀಣ್ ಕುಮಾರ್ ಗುರ್ಮೆ ಮತ್ತಿತರರು ಉಪಸ್ಥಿತರಿದ್ದರು.

Write A Comment