ಕರಾವಳಿ

ಬೈಂದೂರು ಶೀಘ್ರ ತಾಲೂಕು ಘೋಷಣೆಯಾಗಲಿ: ನಾ. ಡಿಸೋಜ

Pinterest LinkedIn Tumblr

 baindoor_book_realses_1

ಬೈಂದೂರು: ಬೈಂದೂರಿಗೆ ಸಾಕಷ್ಟು ಪ್ರಾಚೀನತೆ ಇದೆ. ಇಲ್ಲಿ ಹಲವಾರು ಪುರಾತನ ಶ್ರದ್ಧಾಕೇಂದ್ರಗಳು, ಪ್ರೇಕ್ಷಣೀಯ ಸ್ಥಳಗಳಿದ್ದರೂ ಗುರುತಿಸುವಂತಹ ಸ್ಥಾನಮಾನ ಇನ್ನೂ ಸಿಕ್ಕಿಲ್ಲ. ಬೈಂದೂರನ್ನು ಶೀಘ್ರದಲ್ಲಿಯೇ ತಾಲೂಕಾಗಿ ಘೋಷಣೆ ಮಾಡುವ ಮೂಲಕ ಬೈಂದೂರಿನ ಪ್ರಾಚಿನತೆಗೆ, ಐತಿಹಾಸಿಕ ಶ್ರೀಮಂತಿಕೆಗೆ ನ್ಯಾಯಸಮ್ಮತ ಸ್ಥಾನವನ್ನು ನೀಡಿದಂತಾಗಬಹುದೆಂದು ಪ್ರಸಿದ್ಧ ಸಾಹಿತಿ, 50 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ನಾ. ಡಿಸೋಜ ಹೇಳಿದರು.

baindoor_book_realses_2

ಕುಂದಾಪ್ರ ಡಾಟ್ ಕಾಂ ನ ವಿನೂತನ ಪರಿಕಲ್ಪನೆಯಂತೆ ಮೂಡಿಬಂದ ಬೈಂದೂರಿನ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ಪ್ರಕಟಿಸಿದ ’ಬೈಂದೂರು ಡೈರೆಕ್ಟರಿ’ ಪುಸ್ತಕವನ್ನು ಇಲ್ಲಿನ ಶಾರದಾ ವೇದಿಕೆಯಲ್ಲಿ ಸೆ.21 ರ ಸಂಜೆ ಜರುಗಿದ ಸಮಾರಂಭದಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

baindoor_book_realses_3

ಒಂದು ದೇಶದ ಇತಿಹಾಸವನ್ನು ಎಲ್ಲಿಯ ವರೆಗೆ ನಮ್ಮದಾಗಿಸಿಕೊಳ್ಳುವುದಿಲ್ಲವೋ ಅಲ್ಲಿಯ ತನಕ ಒಂದು ಊರನ್ನು ಮುಂದಿನ ಪೀಳಿಗೆಗೆ ಕಟ್ಟಿಕೊಡಲು ಸಾಧ್ಯವಾಗದು. ಇತಿಹಾಸ, ಪರಂಪರೆಯ ಅರಿವು, ಪ್ರಜ್ಞೆ ಪ್ರತಿಯೊಬ್ಬರಿಗೂ ಅಗತ್ಯವಾಗಿದ್ದು ಇದರಿಂದ ಒಂದು ನಾಡನ್ನು, ಒಂದು ಊರನ್ನು ಮುಂದಿನ ದಿನಗಳಲ್ಲಿ ಕಟ್ಟಲು ಬೇಕಾದ ಸ್ಫೂರ್ತಿಯು ದೊರಕುತ್ತದೆ ಎಂದು ಅಭಿಪ್ರಾಯ ಪಟ್ಟ ನಾಡಿ, ಬೈಂದೂರನ್ನು ಪರಿಪೂರ್ಣವಾಗಿ ಅರ್ಥಮಾಡಿಕೊಡುವ ಹಾಗೂ ಬೈಂದೂರಿಗರಿಗೆ ಅದನ್ನು ತಮ್ಮದಾಗಿ ಮಾಡಿಕೊಳ್ಳಲು ಅತ್ಯುಪಯುಕ್ತವಾಗುವ ನಿಟ್ಟಿನಲ್ಲಿ ಪ್ರಕಟಗೊಂಡ ಬೈಂದೂರು ಡೈರೆಕ್ಟರಿ ಒಂದು ಮಹತ್ವಪೂರ್ಣವಾದ ಪುಸ್ತಕ ಎಂದು ಶ್ಲಾಘಿಸಿದರು.

baindoor_book_realses_5 baindoor_book_realses_7 baindoor_book_realses_8

ಇಂದು ಜ್ಞಾನ ಸಂಪಾದನೆ ಕಷ್ಟಕರವಲ್ಲ ಆದರೆ ಜ್ಞಾನವನ್ನು ಆಮದು ಮಾಡಿಕೊಳ್ಳುವ ಸ್ಥಿತಿಗೆ ತಲುಪಿದ್ದೇವೆ. ಇದರಿಂದಾಗಿ ನಮ್ಮ ಸ್ಥಳೀಯ ಜ್ಞಾನ ನಿರ್ಲಕ್ಷಕ್ಕೊಳಗಾಗಿದೆ. ಸ್ಥಳೀಯ ಮಾಹಿತಿಗಳನ್ನು ಡೈರೆಕ್ಟರಿ ರೂಪದಲ್ಲಿ ಪ್ರಕಟಿಸಿದ್ದರಿಂದ ಸ್ಥಳೀಯ ಜ್ಞಾನಕ್ಕೆ ಪ್ರಾಮುಖ್ಯ ಲಭಿಸುತ್ತದೆ, ಪ್ರವಾಸಿಗರಿಗೂ ಇದು ಹೆಚ್ಚು ಅನುಕೂಲಕಾರಿ ಎಂದು ಹೇಳಿದರು.

ಉಡುಪಿ ಜಿಲ್ಲಾ ಕ.ಸಾ.ಪ. ಪೂರ್ವಾಧ್ಯಕ್ಷ, ಸಾಹಿತಿ ಯು. ಚಂದ್ರಶೇಖರ ಹೊಳ್ಳ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ ಶುಭಹಾರೈಸಿದರು.

baindoor_book_realses_9 baindoor_book_realses_10

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಕುಂದಾಪುರದ ಹಿರಿಯ ನ್ಯಾಯವಾದಿ ಎ.ಎಸ್.ಎನ್. ಹೆಬ್ಬಾರ್, ಪತ್ರಕರ್ತರ ವೇದಿಕೆ ಬೆಂಗಳೂರು ಇದರ ಉಡುಪಿ ಜಿಲ್ಲಾಧ್ಯಕ್ಷ ಶೇಖರ ಅಜೆಕಾರು, ಬೈಂದೂರು ಯುಸ್ಕೋರ್ಡ್ ಟ್ರಸ್ಟ್ ನ ನಾಗರಾಜ ಪಿ. ಯಡ್ತರೆ ಅವರು ಶುಭಶಂಸನೆಗೈದು ಬೈಂದೂರು ಡೈರೆಕ್ಟರಿಯನ್ನು ಅರ್ಥಪೂರ್ಣ ಹೊತ್ತಗೆಯಾಗಿ ಹೊರತಂದ ತಂಡದ ಪ್ರಯತ್ನ ಪ್ರಶಂಸಾರ್ಹ ಎಂದರು. ಬೈಂದೂರಿಗೆ ಮೊದಲ ಬಾರಿಗೆ ಆಗಮಿಸಿದ್ದ ಸಾಹಿತಿ ನಾ. ಡಿಸೋಜ ದಂಪತಿಯನ್ನು ಕುಂದಾಪ್ರ ಡಾಟ್ ಕಾಂ ವತಿಯಿಂದ ಸಮ್ಮಾನಿಸಿ, ಚಿತ್ರ ಕಲಾವಿದ ದಿನೇಶ್ ಸಿ. ಹೊಳ್ಳ ಅವರು ರಚಿಸಿದ ನಾ. ಡಿಸೋಜ ಅವರ ರೇಖಾಚಿತ್ರ ಕಲಾಕೃತಿಯನ್ನು ಸಮರ್ಪಿಸಲಾಯಿತು.

baindoor_book_realses_12 baindoor_book_realses_11

ಗೀತ ರಚನೆಕಾರ ರವೀಂದ್ರ ಪಿ. ಅವರ ನೂತನ ಧ್ವನಿ ಸುರುಳಿಯನ್ನು ಈ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು.ಬೈಂದೂರು ಡೈರೆಕ್ಟರಿಯ ಲೇಖಕ ಸುನಿಲ್ ಹೆಚ್. ಜಿ. ಬೈಂದೂರು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರವೀಣ ಟಿ. ಬೈಂದೂರು ಧನ್ಯವಾದಗೈದರು. ಸುಧಾಕರ ಪಿ. ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಅಕಾಶವಾಣಿ ಕಲಾವಿದ ಚಂದ್ರ ಕೆ. ಹೆಮ್ಮಾಡಿ ಮತ್ತು ಬಳಗದವರಿಂದ ಸಂಗೀತ ರಸಸಂಜೆ ಕಾರ್ಯಕ್ರಮ ನಡೆಯಿತು.

ವರದಿ ಕೃಪೆ : ಶೇಖರ ಅಜೆಕಾರು

Write A Comment