ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರುಗಳು ಕರ್ನಾಟಕದ ಕರಾವಳಿಯ ಮಂಗಳೂರು ನಗರದ ಕುದ್ರೋಳಿಯಲ್ಲಿ ಸ್ಥಾಪಿಸಿದ ಧಾರ್ಮಿಕ ಕ್ರಾಂತಿಯ ಪುಣ್ಯಕ್ಷೇತ್ರ, ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಈ ಬಾರಿಯ ಇತಿಹಾಸ ಪ್ರಸಿದ್ಧ “ಮಂಗಳೂರು ದಸರಾ” ಮಹೋತ್ಸವದ ವೈಭವಪೂರಿತ ಸಡಗರಕ್ಕೆ ಸಕಲ ಸಿದ್ದತೆಗಳು ಭರದಿಂದ ನಡೆಯುತ್ತಿದೆ.
ಒಂದು ಶತಮಾನಕ್ಕೂ ಮೀರಿದ ಇತಿಹಾಸ, ಚರಿತ್ರೆಯನ್ನೊಳಗೊಂಡ ಕುದ್ರೋಳಿ ಕ್ಷೇತ್ರದಲ್ಲಿ ಶ್ರೀ ಕ್ಷೇತ್ರದ ನವೀಕರಣದ ರೂವಾರಿ, ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಅವರ ನೇತೃತ್ವದಲ್ಲಿ ಕಳೆದ 23 ವರ್ಷಗಳಿಂದ ನಿರಂತರವಾಗಿ ನಡೆಯುತ್ತಿರುವ ಜಗತ್ಪ್ರಸಿದ್ದ `ಮಂಗಳೂರು ದಸರಾ’ ವೈಭವ ಇದೇ ಬರುವ ಸೆ.25ರಿಂದ ಅಕ್ಟೋಬರ್ 5ರವರೆಗೆ ಸತತ 10 ದಿನಗಳ ಕಾಲ ಅತ್ಯಂತ ವೈಭವಪೂರ್ಣವಾಗಿ ನಡೆಯಲಿದೆ ಎಂದು ಶ್ರೀ ಗೋಕರ್ಣನಾಥ ಕ್ಷೇತ್ರದ ಆಡಳಿತ ಮಂಡಳಿ ಅಧ್ಯಕ್ಷರಾದ ಎಚ್.ಎಸ್.ಸಾಯಿರಾಮ್ ಅವರು ತಿಳಿಸಿದರು.
ಶನಿವಾರ ಶ್ರೀ ಕ್ಷೇತ್ರದಲ್ಲಿ ಏರ್ಪಡಿಸಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ.25ರಂದು ಬೆಳಗ್ಗೆ 11.15ಕ್ಕೆ ಶ್ರೀಕ್ಷೇತ್ರದ ಗೋಕರ್ಣನಾಥ ಕಲ್ಯಾಣ ಮಂಟಪದಲ್ಲಿ ಅತ್ಯಂತ ಕಲಾತ್ಮಕ ಹಾಗೂ ಮನಮೋಹಕ ಸ್ವರ್ಣಮಯ ವರ್ಣದ ಶೈಲಿಯಲ್ಲಿ ವಿನ್ಯಾಸಗೊಳಿಸಿದ ವಿಶೇಷ ಮಂಟಪಗಳಲ್ಲಿ ಶಾರದಾ ಮಾತೆ ಹಾಗೂ ನವದುರ್ಗೆಯರ ಮೂರ್ತಿಗಳನ್ನು ಏಕಕಾಲದಲ್ಲಿ ಧಾರ್ಮಿಕ ಪೂಜಾ ವಿಧಿ ವಿಧಾನಗಳೊಂದಿಗೆ ಪ್ರತಿಷ್ಠಾಪಿಸಲಾಗುವುದು.
ಸೆ.27ರಂದು ಸಂಜೆ 6.30ಕ್ಕೆ ಮಂಗಳೂರು ದಸರಾ ವೈಭವದ ಕಾರ್ಯಕ್ರಮವನ್ನು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ವಹಿಸಲಿದ್ದಾರೆ. ಸೆ.25 ರಿಂದ ಅ.3ರವರೆಗೆ ಪ್ರತಿನಿತ್ಯ ಸಂಜೆ 6 ಗಂಟೆಗೆ ಕ್ಷೇತ್ರದ ಸಂತೋಷಿ ಕಲಾ ಮಂಟಪದಲ್ಲಿ ರಾಜ್ಯದ ಪ್ರಸಿದ್ಧ ಕಲಾವಿದರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ತಿಳಿಸಿದರು.
ಅಭಿವೃದ್ಧಿ ಸಮಿತಿ ಸದಸ್ಯ ಹರಿಕೃಷ್ಣ ಬಂಟ್ವಾಳ್ ಅವರು ಮಾತನಾಡಿ, ಅ.4ರ ಶನಿವಾರ ಸಂಜೆ ನಾಲ್ಕು ಗಂಟೆಗೆ ಶ್ರೀ ಕ್ಷೇತ್ರದಿಂದ ಶಾರದಾ ಮಾತೆ ಹಾಗೂ ನವದುರ್ಗೆಯರ ಮೂರ್ತಿಯನ್ನೊಳಗೊಂಡ ಮಂಗಳೂರು ದಸರಾದ ಬೃಹತ್ ಮೆರವಣಿಗೆ ಜನಾರ್ದನ ಪೂಜಾರಿಯವರ ನೇತೃತ್ವದಲ್ಲಿ ನಡೆಯಲಿದೆ. ಈ ದಸರಾ ಮೆರವಣಿಗೆಯಲ್ಲಿ ರಾಜ್ಯದ ವಿವಿಧೆಡೆಗಳ ಸ್ತಬ್ಧಚಿತ್ರದ ಟ್ಯಾಬ್ಲೋಗಳು, ಸಾಂಸ್ಕೃತಿಕ ಕಲಾತಂಡಗಳು ಪಾಲ್ಗೊಳ್ಳಲಿದೆ. ಮಾತ್ರವಲ್ಲದೆ, ಕೇರಳ ಸರಕಾರ 3 ಟ್ಯಾಬ್ಲೋಗಳನ್ನು ಕಳುಹಿಸಿಕೊಡಲಿದೆ. ಈ ಮೆರವಣಿಗೆಯಲ್ಲಿ ಭಾಗವಹಿಸಲು ಇಚ್ಛಿಸುವ ಟ್ಯಾಬ್ಲೋ ತಂಡಗಳು ಸೆ.25ರೊಳಗೆ ಕಡ್ಡಾಯವಾಗಿ ಹೆಸರನ್ನು ನೊಂದಾಯಿಸಬೇಕು ಎಂದು ವಿವರಿಸಿದರು.
ಮಂಗಳೂರು ದಸರಾ ಮೆರವಣಿಗೆ ಸಾಗುವ ನಗರದ ನಗರದ ಪ್ರಮುಖ ಮುಖ್ಯ ರಸ್ತೆ ಹಾಗೂ ಶ್ರೀ ಕ್ಷೇತ್ರವನ್ನು ಸಂಪೂರ್ಣವಾಗಿ ಸುಮಾರು 20 ಲಕ್ಷ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗುವುದು. ಮೆರವಣಿಗೆ ಸಾಗುವ ರಸ್ತೆಯ ಇಕ್ಕೆಲಗಳಲ್ಲಿರುವ ಕಟ್ಟಡಗಳ ಮಾಲಕರು ತಮ್ಮ ಕಟ್ಟಡಗಳಲ್ಲಿ ವಿಶೇಷ ವಿದ್ಯುದ್ದೀಪಗಳಿಂದ ಅಲಂಕರಿಸಿ ದಸರಾ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಬೇಕು ಎಂದು ಹರಿಕೃಷ್ಣ ಬಂಟ್ವಾಳ ವಿನಂತಿಸಿದ್ದಾರೆ.
ಮಂಗಳೂರು ದಸರಾ ವೈಭವದ ಸೌಂದರ್ಯವನ್ನು ವೀಕ್ಷಿಸಲು ದೇಶ – ವಿದೇಶಗಳಿಂದ ಲಕ್ಷಾಂತರ ಮಂದಿ ಆಗಮಿಸುವ ನಿರೀಕ್ಷೆಯಿದೆ. ಶ್ರೀ ಕ್ಷೇತ್ರದಲ್ಲಿ ದಿನಾಪ್ರಂತಿ ಅನ್ನ ಸಂತರ್ಪಣೆ ನಡೆಯುತ್ತದೆ. ನವರಾತ್ರಿ ಸಂದರ್ಭದಲ್ಲಿ ಅನೇಕ ಭಕ್ತರ ನೆರವಿನಿಂದ ವಿಶೇಷ ಮಹಾಪೂಜೆಗಳು ನಡೆಯಲಿವೆ. ಜಿಲ್ಲೆ ಹಾಗೂ ರಾಜ್ಯಕ್ಕೆ ಹೆಸರು ತರುವ ಮೂಲಕ ವಿಶ್ವವಿಖ್ಯಾತಿಗೊಂಡಿರುವ ಈ ಮಂಗಳೂರು ದಸರಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಸರ್ವ ಧರ್ಮದವರು ಸಹಕರಿಸುವಂತೆ ಎಚ್.ಎಸ್.ಸಾಯಿರಾಂ ಕೋರಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಶ್ರೀಕ್ಷೇತ್ರದ ಆಡಳಿತ ಮಂಡಳಿಯ ಉಪಾಧ್ಯಕ್ಷ ರಾಘವೇಂದ್ರ ಕೂಳೂರು, ಖಜಾಂಚಿ ಪದ್ಮರಾಜ್ ಆರ್., ಟ್ರಸ್ಟಿಗಳಾದ ರವಿಶಂಕರ್ ಮಿಜಾರ್, ಬಿ.ಕೆ.ತಾರಾನಾಥ, , ಕೆ.ಮಹೇಶ್ವರಚಂದ್ರ, ಅಭಿವೃದ್ಧಿ ಸಮಿತಿ ಸದಸ್ಯರಾದ ಡಾ.ಬಿ.ಜಿ.ಸುವರ್ಣ, ಎಂ.ಶೇಖರ ಪೂಜಾರಿ, ಡಿ.ಡಿ.ಕಟ್ಟೆಮಾರ್, ಲೀಲಾಕ್ಷ ಕರ್ಕೇರಾ ಮುಂತಾದವರು ಉಪಸ್ಥಿತರಿದ್ದರು.