ಬಂಟ್ವಾಳ: ಅಮ್ಟಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಲೆಂಬಿಲ ಮಾಣಿಜಾಲ್ ಎಂಬಲ್ಲಿ ಕಳೆದ ಒಂದು ತಿಂಗಳ ಹಿಂದೆನಿರಂತರವಾಗಿ ಸುರಿದ ಮಳೆಗೆ ಸ್ಥಳೀಯ ನಿವಾಸಿ ಗೋಪಾಲ ಪೂಜಾರಿ ಎಂಬವರ ಮನೆ ಮಾಡಿನ ಒಂದು ಭಾಗ ಕುಸಿದಿತ್ತು. ಇದರಿಂದಾಗಿ ಮನೆಯೊಳಗೆ ಅಲ್ಲಲ್ಲಿ ನೀರಿನ ಸೋರಿಕೆಗೆ ಇದ್ದ ಪಾತ್ರೆಯನ್ನೆಲ್ಲಾ ಇಟ್ಟು ದಿನ ಕಳೆಯುತ್ತಿದ್ದರು. ಇದೀಗ ಮತ್ತೆ ಕಳೆದ ವಾರ ಮನೆಯ ಬಲಭಾಗದ ಗೋಡೆ ಮತ್ತು ಮಾಡು ಸಂಪೂರ್ಣ ಕುಸಿತಗೊಂಡು ಮನೆಯೊಳಗೆ ಕೆಸರು ನೀರು ಮತ್ತು ಮಣ್ಣು ತುಂಬಿಕೊಂಡಿದೆ.
ಮನೆ ಮಂದಿಗೆ ಇಲ್ಲಿ ವಾಸ ಮಾಡಲು ಸಾಧ್ಯವಿಲ್ಲದೆ ಇರುವದರಿಂದ ಅವರಿಗೆ ತಾತ್ಕಾಲಿಕ ಪರ್ಯಾಯ ವ್ಯವಸೆಯನ್ನು ಮಾಡಿಕೊಡುವ ಬಗ್ಗೆ ಮತ್ತು ಮುಂದಿನ ದಿನಗಳಲ್ಲಿ ಶಾಶ್ವತ ಮನೆ ನಿರ್ಮಿಸಿ ಕೊಡುವ ಸಂಪೂರ್ಣ ಜವಬ್ದಾರಿಯ ಭರವಸೆಯನ್ನು ಮಂಗಳೂರು ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್‍ಯಧ್ಯಕ್ಷ ಜಿತೇಂದ್ರ ಕೊಟ್ಟಾರಿ ನೀಡಿದರು.
ಈ ಸಂದರ್ಭ ಬಂಟ್ವಾಳ ಸಮಿತಿ ಅಧ್ಯಕ್ಷ ಅಶೋಕ್ ಶೆಟ್ಟಿ ಸರಪಾಡಿ, ಸಂಯೋಜಕ ಗುರುರಾಜ್, ಸುರೇಶ್ ಬೆಂಜನಪದವು,ಸಹ ಸಂಚಾಲಕ ಭುವಿತ್ ಶೆಟ್ಟಿ, ಅಮ್ಟಾಡಿ ಗ್ರಾ.ಪಂ. ಅಧ್ಯಕ್ಷೆ ಬಬಿತಾ ಕೋಟ್ಯಾನ್, ಸದಸ್ಯರಾದ ಶೇಖರ್ ಶೆಟ್ಟಿ, ಜಯರಾಮ ಸಾಲಿಯಾನ್, ಗೋಪಾಲ ಪೂಜಾರಿ ಉಪಸ್ಥಿತರಿದ್ದರು.
ಜಿ.ಪಂ ಉಪಾಧ್ಯಕ್ಷರಿಂದ ಸ್ಪಂದನೆ :
ಜಿಲ್ಲಾ ಪಂಚಾಯತ್‌ನ ಉಪಾಧ್ಯಕ್ಷ ಸತೀಶ್ ಕುಂಪಲ ಅವರು ಶುಕ್ರವಾರ ಸಂಜೆ ಗೋಪಾಲ ಪೂಜಾರಿಯವರ ನಿವಾಸಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಈ ಸಂದರ್ಭದಲ್ಲಿ ಬಂಟ್ವಾಳ ತಾ.ಪಂ.ಅಧ್ಯಕ್ಷ ಯಶವಂತ.ಡಿ, ಬಿಲ್ಲವ ಮುಖಂಡ ಕೆ.ಟಿ.ಸುವರ್ಣ,ಸದಾನಂದ,ಅಮ್ಟಾಡಿ ಪಂಚಾಯತ್ ಸದಸ್ಯರಾದ ಜಯರಾಮ್, ಯೋಗೀಶ್,ಸಾಮಾಜಿಕ ಕಾರ್ಯಕರ್ತ ವಿಜಯ್ ಮೊದಲಾದವರು ಉಪಸ್ಥಿತರಿದ್ದರು.
ಮನೆ ಕುಸಿತಕ್ಕೊಳಕ್ಕಾಗಿರುವ ಗೋಪಾಲ ಪೂಜಾರಿಯವರ ಕುಟುಂಬಕ್ಕೆ ತನ್ನಿಂದಾಗುವ ಎಲ್ಲಾ ರೀತಿಯ ಸಹಕಾರ ನೀಡುವುದಲ್ಲದೆ ತಕ್ಷಣ ಬಸವ ಯೋಜನೆಯಡಿ ಈ ಕುಟುಂಬಕ್ಕೆ ಮನೆ ಮಂಜೂರು ಮಾಡಿಸಿಕೊಡುವ ಭರವಸೆಯನ್ನು ಜಿಲ್ಲಾ ಪಂಚಾಯತ್ ನ ಉಪಾಧ್ಯಕ್ಷ ಸತೀಶ್ ಕುಂಪಲ ನೀಡಿದರು.ಈ ಸಂಬಂಧವಾಗಿ ಅಗತ್ಯ ದಾಖಲೆ ಪತ್ರಗಳನ್ನು ಸಿದ್ಧ ಪಡಿಸುವಂತೆ ತಾ.ಪಂ.ಅಧ್ಯಕ್ಷ ಯಶವಂತ ಹಾಗೂ ಸ್ಥಳೀಯ ಪಂಚಾಯತ್ ಸದಸ್ಯರಿಗೆ ಜವಾಬ್ದಾರಿ ವಹಿಸಿದರು. ಹಾಗೆಯೆ ಪಂಚಾಯತ್ ಪಿ.ಡಿ.ಒ ಹಾಗೂ ಗ್ರಾಮಕರಣಿಕರಿಗೂ ತಕ್ಷಣ ಈ ಸಂಬಂಧ ಸೂಕ್ತ ವರದಿ ಸಲ್ಲಿಸುವಂತೆಯೂ ಸೂಚಿಸಿದರು.
ಸಚಿವ ರೈಯಿಂದಲೂ ಸೂಚನೆ :
ದ.ಕ.ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅವರು ಕೂಡಾ ತಾ.ಪಂ.ಕಾರ್ಯನಿರ್ವಾಹಣಾಧಿಕಾರಿ ಸಿಪ್ರಿಯನ್ ಮಿರಾಂದ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಸಂತ್ರಸ್ತ ಗೋಪಾಲ ಪೂಜಾರಿಯವರಿಗೆ ಬಸವ ಯೋಜನೆಯಲ್ಲಿ ಮನೆ ಒದಗಿಸಲು ನಿರ್ದೇಶನ ನೀಡಿದ್ದಾರೆಂದು ತಿಳಿದು ಬಂದಿದೆ.