ಕರಾವಳಿ

ಜಿಲ್ಲೆಯ ಲಿಂಗತ್ವ ಅಲ್ಪಸಂಖ್ಯಾತರಿಗೆ ವಸತಿ ವ್ಯವಸ್ಥೆ ಮತ್ತು ಸ್ವ‌ಉದ್ಯೋಗ ಕಲ್ಪಿಸಲು ಚೂಡಾಮಣಿ ಆಗ್ರಹ : ಜಿಲ್ಲಾಧಿಕಾರಿ ಕಛೇರಿಯಲ್ಲಿ ಸರಕಾರೇತರ ಸಂಘ ಸಂಸ್ಥೆಗಳ ಜತೆ ಸಭೆ.

Pinterest LinkedIn Tumblr

small_minority_dc_1

ಮಂಗಳೂರು, ಸೆ.18: ಲಿಂಗತ್ವ ಅಲ್ಪಸಂಖ್ಯಾತರಿಗೆ ನಗರ ಪಾಲಿಕೆ ವ್ಯಾಪ್ತಿಯಲ್ಲಿ ವಸತಿ ವ್ಯವಸ್ಥೆ ಕಲ್ಪಿಸಬೇಕು ಹಾಗೂ ಗುರುತಿನ ಚೀಟಿ ಮತ್ತು ಪಡಿತರ ಚೀಟಿ ವಿತರಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತೆ ಚೂಡಾಮಣಿ ಆಗ್ರಹಿಸಿದರು. ಸರಕಾರಿ ಅಧಿಕಾರಿಗಳ ಜತೆ ಸರಕಾರೇತರ ಸಂಘ ಸಂಸ್ಥೆಗಳ(ಎನ್‌ಜಿ‌ಒ)ಮುಖಂಡರ ಜತೆ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.

small_minority_dc_2 small_minority_dc_4 small_minority_dc_5

ಜಿಲ್ಲೆಯ ಲಿಂಗತ್ವ ಅಲ್ಪಸಂಖ್ಯಾತರು ವಸತಿ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಅವರಿಗೆ ಸ್ವ ಉದ್ಯೋಗ ಮಾಡಿ ತನ್ನ ಬದುಕು ರೂಪಿಸಲು ಅವಕಾಶ ಕಲ್ಪಿಸಬೇಕು ಎಂದು ಚೂಡಾಮಣಿ ಒತ್ತಾಯಿಸಿದರು.‘‘ನಾನು ತುಮಕೂರಿನಿಂದ ಬಂದು ಮಂಗಳೂರಿನಲ್ಲಿ ನೆಲೆಸಿದ್ದೇನೆ. ಹೊರ ಜಿಲ್ಲೆ ಯವರಿಗೆ ಗುರುತು ಚೀಟಿ ನೀಡಲಾಗುತ್ತಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮ ಜರಗಿಸಬೇಕು ಎಂದು ಲಿಂಗತ್ವ ಅಲ್ಪಸಂಖ್ಯಾತರಾದ ರಾಣಿ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಹೊರ ಜಿಲ್ಲೆಯವರು ಇಲ್ಲಿ ಬಂದು ನೆಲೆಸಿರುವ ಬಗ್ಗೆ ದಾಖಲೆ ಒದಗಿಸಿದರೆ ಗುರುತಿನ ಚೀಟಿ ನೀಡಲಾಗುವುದು ಎಂದು ಭರವಸೆ ನೀಡಿದರು.

ರಾಜ್ಯ ಸರಕಾರವು ಸ್ವ ಉದ್ಯೋಗ ಕಲ್ಪಿಸಲು 7 ಲಕ್ಷ ರೂ. ಸಹಾಯಧನ ನೀಡಿದೆ. ಈಗಾಗಲೇ 31 ಲಿಂಗತ್ವ ಅಲ್ಪಸಂಖ್ಯಾತರಿಗೆ ಗುರುತಿನ ಚೀಟಿ ನೀಡಲಾಗಿದೆ. ಲಿಂಗತ್ವ ಅಲ್ಪಸಂಖ್ಯಾತರ ಸಂಘಟನೆಯು ಈ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಗಟ್ರೂಡ್ ವೇಗಸ್ ಸಭೆಗೆ ತಿಳಿಸಿದರು.ಸಿಡಬ್ಲುಸಿ ಕಿರುಕುಳ: ದ.ಕ.ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯು ಆಶ್ರಮಗಳಿಗೆ ಭೇಟಿ ನೀಡಿ ಟಾಯ್ಲೆಟ್ ಸರಿಯಿಲ್ಲ, ಬಾತ್‌ರೂಮ್ ಸಾಕಷ್ಟಿಲ್ಲ ಎಂದು ಹೇಳಿ ಕಿರುಕುಳ ನೀಡುತ್ತಿದೆ. ಇದರಿಂದ ಆಶ್ರಮ ನಡೆಸುವುದೇ ಕಷ್ಟಕರವಾಗಿದೆ ಎಂದು ಭಗಿನಿ ಸಮಾಜದ ವಜ್ರಾರಾವ್ ಎಂಬವರು ದೂರಿದರು. ಇದಕ್ಕೆ ಧ್ವನಿಗೂಡಿಸಿದ ಸಾಮಾಜಿಕ ಕಾರ್ಯಕರ್ತೆ ಹಿಲ್ಡಾ ರಾಯಪ್ಪನ್ ‘ಸರಕಾರೇತರ ಸಂಘಟನೆಗಳ ಮೂಲಕ ಸಾಮಾಜಿಕ ಚಟುವಟಿಕೆ ನಡೆಸುವುದು ಕಷ್ಟಕರವಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಸಿಡಬ್ಲುಸಿಗೆ ಸೂಕ್ತ ನಿರ್ದೇಶನ ನೀಡಬೇಕು’ ಎಂದರು.
ಮಾಹಿತಿ ಸಿಗುತ್ತಿಲ್ಲ: ಅಲ್ಪಸಂಖ್ಯಾತರಿಗೆ ಸರಕಾರದಿಂದ ಸಿಗುವ ಸವಲತ್ತುಗಳ ಬಗ್ಗೆ ಸೂಕ್ತ ಮಾಹಿತಿ ಸಿಗುತ್ತಿಲ್ಲ. ಇದರಿಂದ ಸಾಕಷ್ಟು ಅಲ್ಪಸಂಖ್ಯಾತರು ಸರಕಾರಿ ಸೌಲಭ್ಯದಿಂದ ವಂಚಿತರಾಗಿದ್ದಾರೆ ಎಂದು ಕಮಲಾಗೌಡ ಹೇಳಿದರು.

small_minority_dc_6 small_minority_dc_7 small_minority_dc_8

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಜಿಲ್ಲಾಧಿಕಾರಿ, ‘ರಾಜ್ಯ ಅಲ್ಪಸಂಖ್ಯಾತರ ಆಯೋಗ, ನಿಗಮ, ಕಲ್ಯಾಣ ಇಲಾಖೆಯು ನೀಡುವ ಸಲವತ್ತುಗಳ ಬಗ್ಗೆ ಪ್ರತಿಯೊಂದು ಜಿಲ್ಲೆಯಲ್ಲೂ ಮಾಹಿತಿ ಕೇಂದ್ರವನ್ನು ಸ್ಥಾಪಿಸಲು ಸರಕಾರ ಸೂಚಿಸಿದೆ. ಅದರಂತೆ ಜಿಲ್ಲೆಯ ಕಂಕನಾಡಿಯ ಜಂಮಿಯ್ಯತುಲ್ ಫಲಾಹ್ ಸಂಸ್ಥೆಯ ಭವನದಲ್ಲಿ ಮಾಹಿತಿ ಕೇಂದ್ರ ತೆರೆಯಲಾಗಿದೆ’ ಎಂದರು.
ವಾರ್ಡ್ ಕಮಿಟಿ ರಚಿಸಿ: ಮಂಗಳೂರು ಮಹಾನಗರ ಪಾಲಿಕೆಯ ಪ್ರತಿಯೊಂದು ವಾರ್ಡಿನಲ್ಲೂ ವಾರ್ಡ್ ಕಮಿಟಿ ರಚಿಸದ ಕಾರಣ ಜನರ ಸಮಸ್ಯೆಯನ್ನು ಬಿಂಬಿಸಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಕಾರ್ಪೊರೇಟರ್‌ಗಳು ಕೂಡ ಆಸಕ್ತಿ ವಹಿಸುತ್ತಿಲ್ಲ ಎಂದು ಪದ್ಮನಾಭ ಉಳ್ಳಾಲ್ ಆಗ್ರಹಿಸಿದರು.

ವಿಕಲಚೇತನರ ಸವಲತ್ತು ಪೂರೈಸಿ: ಸರಕಾರದಿಂದ ವಿಕಲಚೇತನರಿಗೆ ಸಿಗುವ ಸವಲತ್ತುಗಳನ್ನು ಪೂರೈಸಬೇಕು ಎಂದು ಸಾಮಾಜಿಕ ಕಾರ್ಯಕರ್ತರೊಬ್ಬರು ಆಗ್ರಹಿಸಿ ದರು. ಇದಕ್ಕೆ ಪ್ರತಿಕ್ರಿಯಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ, ‘ಈ ನಿಟ್ಟಿನಲ್ಲಿ ಕೇಂದ್ರ ಸರಕಾರದ ಜತೆ ಪತ್ರವ್ಯವಹಾರ ಮಾಡಿದರೂ ಸೂಕ್ತ ಸ್ಪಂದನ ಸಿಕ್ಕಿಲ್ಲ’ ಎಂದು ತಿಳಿಸಿದರು.
ಅಡುಗೆ ಅನಿಲ ಪೂರೈಸಿ: ಜಿಲ್ಲೆಯನ್ನು ‘ಸೀಮೆ‌ಎಣ್ಣೆ ಮುಕ್ತ ಜಿಲ್ಲೆ’ ಎಂದು ಘೋಷಿ ಸುವ ಜಿಲ್ಲಾಧಿಕಾರಿಯ ಕ್ರಮ ಶ್ಲಾಘನೀಯ. ಅದಕ್ಕೂ ಮುನ್ನ ಸಕಾಲಕ್ಕೆ ಅಡುಗೆ ಅನಿಲ ವಿತರಿಸಲು ಸಂಬಂಧಪಟ್ಟ ಇಲಾಖೆ ಕ್ರಮ ಜರಗಿಸಬೇಕು ಎಂದು ಹನುಮಂತ ಕಾಮತ್ ಒತ್ತಾಯಿಸಿದರು.

ಲೋಕ ಅದಾಲತ್ ಆರಂಭ :
ಸೆ.1ರಿಂದ ಮಂಗಳೂರಿನಲ್ಲಿ ಲೋಕ ಅದಾಲತ್ ನಡೆಸಲಾಗುತ್ತಿದೆ. ಇದು ಡಿ.6ರವರೆಗೆ ಮುಂದುವರಿಯಲಿದೆ. ಕಂದಾಯ ಮತ್ತು ವಿದ್ಯುತ್ ಹಾಗೂ ನೀರು ಪೂರೈಕೆ ಸಮಸ್ಯೆ ಬಗ್ಗೆ ಸ್ಪಂದಿಸಲಾಗುವುದು ಎಂದು ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಕಾನೂನು ಸಲಹೆ ಪ್ರಾಧಿಕಾರದ ಕಾರ್ಯದರ್ಶಿ ಗಣೇಶ್ ಬಿ. ಹೇಳಿದರು.

ಮೂರು ತಿಂಗಳಿಗೊಮ್ಮೆ ಸಭೆ ಎನ್‌ಜಿ‌ಒ ಜತೆ ಜಿಲ್ಲಾಡಳಿತದ ವತಿಯಿಂದ 3 ತಿಂಗಳಿಗೊಮ್ಮೆ ಸಭೆ ನಡೆಸಲಾಗುವುದು ಎಂದು ಜಿಲ್ಲಾಧಿ ಕಾರಿ ಎ.ಬಿ. ಇಬ್ರಾಹೀಂ ತಿಳಿಸಿದರು. ಸಭೆಯಲ್ಲಿ ಮೂಡ ಆಯುಕ್ತ ಮುಹಮ್ಮದ್ ನಝೀರ್, ಮನಪಾ ಅಧಿಕಾರಿ ಪ್ರಮೀಳಾ ಎಂ.ಕೆ., ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖಾಧಿಕಾರಿ ಶರಣಬಸಪ್ಪ ಉಪಸ್ಥಿತರಿದ್ದರು.

Write A Comment