ಕರಾವಳಿ

ಕೃಷ್ಣನ ಜನ್ಮದಿನದ ಸಂಭ್ರಮದಲ್ಲಿ ಉಡುಪಿ

Pinterest LinkedIn Tumblr

Hulivesha

ಉಡುಪಿ, ಸೆ.16: ಕಡಗೋಲು ಕೃಷ್ಣನ ಉಡುಪಿಯಲ್ಲೀಗ ಆತನ ಜನ್ಮದಿನದ ಸಂಭ್ರಮ. ಇದಕ್ಕಾಗಿ ಉಡುಪಿ ಅದರಲ್ಲೂ ಮುಖ್ಯವಾಗಿ ಶ್ರೀಕೃಷ್ಣ ಮಠ ಹಾಗೂ ರಥಬೀದಿ ಪರಿಸರ ನಂದಗೋಕುಲದಂತೆ ಸಿಂಗರಿಸಿ ಕೊಂಡು ಸಂಭ್ರಮಿಸುತ್ತಿವೆ.

ಕೃಷ್ಣ ಜನ್ಮಾಷ್ಟಮಿಯ ದಿನವಾದ ಬುಧವಾರ ಹಾಗೂ ವಿಟ್ಲಪಿಂಡಿಯ ದಿನವಾದ ಗುರುವಾರ ಉಡುಪಿಯಲ್ಲಿ ಬಿಡುವಿರದ ಕಾರ್ಯಕ್ರಮಗಳು ನಡೆಯುತ್ತಿವೆ.

ಇಂದು ರಾತ್ರಿ 12:36ಕ್ಕೆ ಸರಿಯಾಗಿ ಚಂದ್ರೋದಯ ಕಾಲದಲ್ಲಿ ಪರ್ಯಾಯ ಕಾಣಿಯೂರು ಮಠದ ಶ್ರೀವಿದ್ಯಾವಲ್ಲಭ ತೀರ್ಥರು ಕೃಷ್ಣನಿಗೆ ಹಾಗೂ ಚಂದ್ರನಿಗೆ ಅರ್ಘ್ಯಪ್ರದಾನ ಮಾಡಿದರು. ರಾತ್ರಿ ಅರ್ಘ್ಯಪ್ರದಾನ ಮಾಡುವ ಸಂದರ್ಭದಲ್ಲಿ ಬಾಲಕೃಷ್ಣನಿಗೆ ಅರ್ಪಿಸುವ ಉಂಡೆ ಕಟ್ಟುವ ಕಾರ್ಯ ಮಠದಲ್ಲಿ ನಡೆಯಿತು. ಇಂದು ಬೆಳಗ್ಗೆ ಕಾಣಿಯೂರು ಶ್ರೀಗಳು ಉಂಡೆ ಕಟ್ಟುವ ಮುಹೂರ್ತ ನೆರವೇರಿಸಿದರು.

ವಿವಿಧ ಸ್ಪರ್ಧೆಗಳು, ಹುಲಿವೇಷ : ಇಂದು ರಾಜಾಂಗಣ, ಕನಕ ಮಂಟಪ ಸೇರಿದಂತೆ ನಗರದ ನಾನಾ ಕಡೆಗಳಲ್ಲಿ ಮಕ್ಕಳಿಗಾಗಿ ನಾಲ್ಕು ವಿಭಾಗಗಳಲ್ಲಿ ಮುದ್ದುಕೃಷ್ಣ ಸ್ಪರ್ಧೆಗಳು ನಡೆದವು. ಸಾರ್ವಜನಿಕರಿಗಾಗಿ ರಂಗೋಲಿ ಸ್ಪರ್ಧೆಗಳೂ ನಡೆದವು.

ನಾಳೆ ಅಪರಾಹ್ನ ರಥಬೀದಿಯಲ್ಲಿ ವಿಟ್ಲಪಿಂಡಿ ಮಹೋತ್ಸವ ಆರಂಭಗೊಳ್ಳಲಿದೆ. ಅಪರಾಹ್ನ 3ಕ್ಕೆ ಕೃಷ್ಣನ ಲೀಲೋತ್ಸವ ಮೆರವಣಿಗೆ ಆರಂಭಗೊಳ್ಳಲಿದ್ದು, ಚಿನ್ನದ ರಥದಲ್ಲಿ ಇರಿಸುವ ಕೃಷ್ಣನ ಮೃಣ್ಮಯ ಮೆರವಣಿಯಲ್ಲಿ ಸಾಗಿ ಬರಲಿದೆ. ಈ ಮೂರ್ತಿಯನ್ನು ಮಧ್ವಸರೋವರದಲ್ಲಿ ಜಲಸ್ತಂಭನ ಗೊಳಿಸುವುದರೊಂದಿಗೆ ಕೃಷ್ಣ ಲೀಲೋತ್ಸವಕ್ಕೆ ತೆರೆಬೀಳಲಿದೆ. ರಥಬೀದಿಯಲ್ಲಿ ವಿವಿಧ ಕಡೆಗಳಲ್ಲಿ ಹಾಕಲಾದ ಮಂಟಪಗಳಲ್ಲಿ ಶ್ರೀಮಠದ ಗೊಲ್ಲರು ಮೊಸರು ಕುಡಿಕೆ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ.

ಸಂಜೆ 4ರಿಂದ ರಾಜಾಂಗಣದಲ್ಲಿ ವಿಟ್ಲಪಿಂಡಿ ಉತ್ಸವ ಪ್ರಯುಕ್ತ ವಿಶೇಷ ಹುಲಿವೇಷ ಸ್ಪರ್ಧೆ ಹಾಗೂ ಜಾನಪದ ವೇಷ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಶುಕ್ರವಾರ ರಾಜಾಂಗಣದಲ್ಲಿ ನಡೆಯುವ ಸಮಾರೋಪ ಸಮಾರಂಭದಲ್ಲಿ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಗುವುದು. ಬಿಗಿ ಬಂದೋಬಸ್ತ್: ಉತ್ಸವದ ಹಿನ್ನೆಲೆಯಲ್ಲಿ ಬಿಗು ಪೊಲೀಸ್ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.

Write A Comment