ಕರ್ನಾಟಕ

ರಾಜ್ಯದಲ್ಲಿ 2.5 ಲಕ್ಷ ಐಟಿ ಉದ್ಯೋಗ ಸೃಷ್ಟಿ: ಸಚಿವ ಪಾಟೀಲ್

Pinterest LinkedIn Tumblr

Patil

ಬೆಂಗಳೂರು, ಸೆ.16: ದೇಶದ ಇಲೆಕ್ಟ್ರಾನಿಕ್ ಕ್ಷೇತ್ರದ ಒಟ್ಟು ಆದಾಯಕ್ಕೆ ರಾಜ್ಯ ಸರಕಾರ ಶೇ. 10ರಷ್ಟು ಕೊಡುಗೆ ನೀಡಲಿದೆ. 2020ರ ವೇಳೆಗೆ ರಾಜ್ಯದಲ್ಲಿ ಐಟಿ ಕ್ಷೇತ್ರದಲ್ಲಿ ಲಕ್ಷಾಂತರ ಉದ್ಯೋಗ ಅವಕಾಶ ಒದಗಿಸಲಾಗುವುದು ಎಂದು ರಾಜ್ಯದ ಐಟಿ, ಬಿಟಿ ಹಾಗೂ ವಿಜ್ಞಾನ, ತಂತ್ರಜ್ಞಾನ ಸಚಿವ ಎಸ್.ಆರ್. ಪಾಟೀಲ್ ಹೇಳಿದ್ದಾರೆ.

ಸ್ಪಾರ್ಕ್ ಐಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಚಿವ ಎಸ್.ಆರ್. ಪಾಟೀಲ್, 2020ರ ಹೊತ್ತಿಗೆ ಇಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಭಾರತ ಸುಮಾರು 400 ಬಿಲಿಯನ್ ಡಾಲರ್‌ನಷ್ಟು ಮೌಲ್ಯದ ಮಾರುಕಟ್ಟೆ ಹೊಂದಲಿದೆ. ಇದಕ್ಕೆ ರಾಜ್ಯದಿಂದ ಶೇ.10ಕ್ಕೂ ಅಧಿಕ ಪ್ರಮಾಣದ ಕೊಡುಗೆ ಸಲ್ಲಿಸಲಾಗುವುದು ಎಂದರು. 2020ರ ಹೊತ್ತಿಗೆ ರಾಜ್ಯದ ಸಾಫ್ಟ್‌ವೇರ್ ರಫ್ತು ಪ್ರಮಾಣ 4 ಲಕ್ಷ ಕೋಟಿ ರೂ. ಮೀರಲಿದೆ. ಕಳೆದ ವರ್ಷ ಸುಮಾರು 1.8 ಲಕ್ಷ ಕೋಟಿ ರೂ. ಮೌಲ್ಯದ ರಫ್ತು ದಾಖಲಾಗಿದೆ. ನಾವು ಅಮೆರಿಕದ ಸಿಲಿಕಾನ್ ವ್ಯಾಲಿ ಜೊತೆ ಪೈಪೋಟಿ ನಡೆಸಿಲ್ಲ. ನಮ್ಮ ಗುರಿ ಸ್ಥಳೀಯರಿಗೆ ಆದ್ಯತೆ ನೀಡುವುದಾಗಿದೆ ಎಂದವರು ತಿಳಿಸಿದರು.

ರಾಜ್ಯದಲ್ಲಿ ಸುಮಾರು 10 ಲಕ್ಷಕ್ಕೂ ಅಧಿಕ ಸಾಫ್ಟ್‌ವೇರ್ ವೃತ್ತಿಪರರಿದ್ದಾರೆ. ಬೆಂಗಳೂರು ಸೇರಿದಂತೆ ವಿವಿಧೆಡೆ ಐಟಿ ಕಂಪೆನಿ ಹಾಗೂ ಅದಕ್ಕೆ ಪೂರಕ ಕಂಪೆನಿಗಳಲ್ಲಿ ಉದ್ಯೋಗಿಗಳಾಗಿರುವವರ ಸಂಖ್ಯೆ 30 ಲಕ್ಷ ದಾಟುತ್ತದೆ. 2020ರ ವೇಳೆಗೆ ನೇರ ನೇಮಕಾತಿ 20 ಲಕ್ಷಕ್ಕೇರಿಸುವುದು ಹಾಗೂ ಪರೋಕ್ಷ ನೇಮಕಾತಿ 60 ಲಕ್ಷಕ್ಕೇರಿಸುವುದು ನಮ್ಮ ಗುರಿ ಎಂದು ಪಾಟೀಲ್ ಹೇಳಿದರು.

ಮಿಷನ್ 2020 ಸಮಿತಿಯ ನೇತೃತ್ವವನ್ನು ಟಿವಿ ಮೋಹನ್ ದಾಸ್ ಪೈ ವಹಿಸಿಕೊಂಡಿದ್ದಾರೆ. ಶೇ.75ರಷ್ಟು ಎಂಜಿನಿಯರಿಂಗ್ ಪದವೀಧರರಲ್ಲಿ ಶೇ. 25ರಷ್ಟು ಮಂದಿ ಮಾತ್ರ ಸಾಫ್ಟ್‌ವೇರ್ ಕಂಪೆನಿಗಳಲ್ಲಿ ಉದ್ಯೋಗ ಪಡೆದುಕೊಳ್ಳುತ್ತಿದ್ದಾರೆ. ಇದಕ್ಕೆ ಕೌಶಲ ಅಭಿವೃದ್ಧಿಯ ಕೊರತೆಯೇ ಕಾರಣ ಎಂದು ಪಾಟೀಲ್ ಅಭಿಪ್ರಾಯಪಟ್ಟರು.

Write A Comment