ಕರಾವಳಿ

ಕಟ್ಟಡ ಕಾರ್ಮಿಕರ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಕಾರ್ಮಿಕ ಆಯುಕ್ತರ ಕಚೇರಿಯೆದುರು ಪ್ರತಿಭಟನೆ

Pinterest LinkedIn Tumblr

citu_protest_photo_1

ಮಂಗಳೂರು, ಸೆ.15 : ಕಾರ್ಮಿಕ ಇಲಾಖೆಯಲ್ಲಿನ ಅವ್ಯವಸ್ಥೆಯ ವಿರುದ್ಧ ಮತ್ತು ಸಾಕಷ್ಟು ಸಿಬ್ಬಂದಿಗಳ ಶಾಶ್ವತ ನೇಮಕಾತಿಗಾಗಿ ಆಗ್ರಹಿಸಿ ಕಟ್ಟಡ ಕಾರ್ಮಿಕರ ಸಂಘಟನೆಯ ವತಿಯಿಂದ ಸೋಮವಾರ ಬೆಳಿಗ್ಗೆ ಬೆಂದೂರ್‌ವೆಲ್‌ನಲ್ಲಿರುವ ಸಹಾಯಕ ಕಾರ್ಮಿಕ ಆಯುಕ್ತರ ಕಚೇರಿಯ ಎದುರು ಪ್ರತಿಭಟನಾ ಪ್ರದರ್ಶನ ನಡೆಯಿತು.

citu_protest_photo_2

ಪ್ರತಿಭಟನಕಾರರನ್ನುದ್ದೇಶಿಸಿ ಕಟ್ಟಡ ಕಾರ್ಮಿಕರ ಸಂಘಟನೆಯ ಮಂಗಳೂರು ನಗರಾಧ್ಯಕ್ಷ ರವಿಚಂದ್ರ ಕೊಂಚಾಡಿ ಮಾತನಾಡಿ, ಕಾರ್ಮಿಕ ಇಲಾಖೆಯಲ್ಲಿ ಅವ್ಯವಸ್ಥೆ ತುಂಬಿ ಹೋಗಿದ್ದು, ಎಲ್ಲಾ ಸಮಸ್ಯೆಗಳಿಗೆ ಕೂಡಲೇ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ. ಕಳೆದ ಮೂರು ವರ್ಷಗಳಿಂದ ಸವಲತ್ತುಗಳಿಗಾಗಿ ಕಟ್ಟಡ ಕಾರ್ಮಿಕರು ಅರ್ಜಿ ಹಾಕಿದರೂ ಇನ್ನೂ ವಿಲೇವಾರಿಯಾಗಿಲ್ಲ. ಅವುಗಳ ತ್ವರಿತ ವಿಲೇವಾರಿ ಮಾಡುವಲ್ಲಿ ಅಧಿಕಾರಿಗಳು ಮೀನಾಮೇಷ ಎಣಿಸುತ್ತಿದ್ದಾರೆ.ಕಟ್ಟಡ ಕಾರ್ಮಿಕರ ಅರ್ಜಿಗಳನ್ನು ವಿಲೇವಾರಿ ಮಾಡಲು ಕಾರ್ಮಿಕ ಇಲಾಖೆಯಲ್ಲಿ ಖಾಯಂ ಸಿಬ್ಬಂದಿಗಳೇ ಇಲ್ಲ. ಇರುವ 2-3 ಸಿಬ್ಬಂದಿಗಳು ಗುತ್ತಿಗೆ ನೌಕರರಾಗಿದ್ದಾರೆ. ಒಟ್ಟಿನಲ್ಲಿ ಅವ್ಯವಸ್ಥೆಗಳ ಆಗರವಾಗಿರುವ ಕಾರ್ಮಿಕ ಇಲಾಖೆಯಲ್ಲಿ ಕಟ್ಟಡ ಕಾರ್ಮಿಕರ ಭವಣೆಗಳನ್ನು ಕೇಳುವವರೇ ಇಲ್ಲವಾಗಿದ್ದಾರೆ’ ಎಂದು ಆರೋಪಿಸಿದರು.

citu_protest_photo_3

`ಕಟ್ಟಡ ಕಾರ್ಮಿಕರ ನಿರಂತರ ಹೋರಾಟದ ಫಲದಿಂದಾಗಿ ಕಳೆದ ಎಂಟು ವರ್ಷಗಳ ಹಿಂದೆ ಕಟ್ಟಡ ಕಾರ್ಮಿಕರಿಗಾಗಿ ಕಲ್ಯಾಣ ಮಂಡಳಿ ರಚನೆಗೊಂಡು 12 ನಮೂನೆಯ ಸವಲತ್ತುಗಳು ಜಾರಿಗೊಂಡಿದ್ದರೂ ಅವುಗಳನ್ನು ನೀಡುವಲ್ಲಿ ರಾಜ್ಯ ಸರಕಾರ ಮೀನಾಮೇಷ ಎನಿಸುತ್ತಿದೆ. ಕಲ್ಯಾಣ ಮಂಡಳಿಯಲ್ಲಿ 2500 ಕೋಟಿ ರೂ.ಯಷ್ಟು ಹಣ ಶೇಖರಣೆಗೊಂಡಿದ್ದು ಅವುಗಳನ್ನು ಅರ್ಜಿ ಹಾಕಿದ ಕಟ್ಟಡ ಕಾರ್ಮಿಕರಿಗೆ ಆರ್ಥಿಕ ಸಹಾಯ ನೀಡುವ ಬದಲು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರವು ಶಾಸಕರ ಸಚಿವರ ಮೋಜಿನ ಪ್ರವಾಸಕ್ಕಾಗಿ 800 ಕೋಟಿ ರೂ. ಹಣ ಖರ್ಚು ಮಾಡಿರುವುದು ತೀರಾ ಖಂಡನೀಯ’ ಎಂದು ರವಿಚಂದ್ರ ಕೊಂಚಾಡಿ ಅವರು ಆಕ್ರೋಶ ವ್ಯಕ್ತಪಡಿಸಿದರು.

citu_protest_photo_4

ಪ್ರತಿಭಟನೆಗೂ ಮೊದಲು ನಗರದ ಕಂಕನಾಡಿ ಮೈದಾನದಿಂದ ಕಟ್ಟಡ ಕಾರ್ಮಿಕರು ಬೃಹತ್ ಮೆರವಣಿಗೆಯಲ್ಲಿ ಪ್ರತಿಭಟನಾ ಪ್ರದರ್ಶನ ನಡೆಯುವ ಸ್ಥಳಕ್ಕೆ ಮೆರವಣಿಗೆಯಲ್ಲಿ ಆಗಮಿಸಿದರು.

ಕಟ್ಟಡ ಕಾರ್ಮಿಕ ಸಂಘಟನೆಯ ನಗರ ಪ್ರಧಾನ ಕಾರ್ಯದರ್ಶಿ ಯೋಗೀಶ್ ಜಪ್ಪಿನಮೊಗರು ಸೇರಿದಂತೆ ಸಂಘಟನೆಯ ಇತರ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು, ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Write A Comment