ಕರಾವಳಿ

ಉಪ್ಪಿನಂಗಡಿ : ನಿಯಂತ್ರಣ ತಪ್ಪಿದ ಬೈಕ್ ಹೊಂಡಕ್ಕೆ ಬಿದ್ದು ಯುವಕ ಸಾವು  

Pinterest LinkedIn Tumblr
accident_uppinagadi_sulya1
ಮಂಗಳೂರು / ಉಪ್ಪಿನಂಗಡಿ : ಮಂಗಳೂರು ಕಡೆಯಿಂದ ಉಪ್ಪಿನಂಗಡಿಗೆ ಬರುತ್ತಿದ್ದ ಬೈಕೊಂದು ಚಾಲಕನ ನಿಯಂತ್ರಣ ಕಳೆದುಕೊಂಡು ಸ್ಕಿಡ್ ಆಗಿ ರಸ್ತೆ ಬದಿಯ ಹೊಂಡಕ್ಕೆ ಉರುಳಿದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಸೋಮವಾರ ಮುಂಜಾನೆ ಉಪ್ಪಿನಂಗಡಿ, ಬೊಳ್ಳಾರು ಆನೆ ಮಜಲು ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ  ಸಂಭವಿಸಿದೆ.
ಅವಘಡದಲ್ಲಿ ಮೃತಪಟ್ಟ ದುರ್ದೈವಿಯನ್ನು ಸುಳ್ಯ ನಿವಾಸಿ ಮಿಥುನ್‌ (19) ಎಂದು ಗುರುತಿಸಲಾಗಿದೆ.  ಮಿಥುನ್‌ ಹಾಗೂ ಮಂಜು ಮಂಗಳೂರು ಕಡೆಯಿಂದ ಉಪ್ಪಿನಂಗಡಿಯತ್ತ ಬರುತ್ತಿದ್ದ ಸಂದರ್ಭದಲ್ಲಿ ನೆಕ್ಕಿಲಾಡಿ ಸಮೀಪದ ಬೊಳ್ಳಾರು ಎಂಬಲ್ಲಿ ಇವರ ಬೈಕ್‌ ಕಲ್ಲಿಗೆ ಸಿಲುಕಿ ಸ್ಕಿಡ್‌ ಆಗಿ ಪಕ್ಕದಲ್ಲಿದ್ದ ಹೊಂಡಕ್ಕೆ ಉರುಳಿತು. ಪ್ರತ್ಯಕ್ಷದರ್ಶಿಗಳು ನೀಡಿರುವ ಮಾಹಿತಿಯಂತೆ ಬೈಕ್‌ ವೇಗವಾಗಿ ಧಾವಿಸುತ್ತಿದ್ದ ಕಾರಣ ನಿಯಂತ್ರಣ ತಪ್ಪಿ ಉರುಳಿಬಿತ್ತು.
ಅತೀ ವೇಗವಾಗಿ ಬರುತ್ತಿದ್ದ ಬೈಕ್ ನಿಯಂತ್ರಣ ಕಳೆದುಕೊಂಡು ಆಳವಾದ ಗುಂಡಿಗೆ ಬಿದ್ದ ಪರಿಣಾಮ, ಮುಖ, ತಲೆ, ಬೆನ್ನಿಗೆ ಗಂಭೀರವಾಗಿ ಗಾಯಗೊಂಡಿದ್ದ ಮಿಥುನ್‌  ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಫ‌ಲಕಾರಿಯಾಗದೆ ಮೃತಪಟ್ಟಿದ್ದಾರೆ.
ಇವರ ಜೊತೆ ಸಂಚಾರಿಸುತ್ತಿದ್ದ ಸಹಸವಾರ ಮಂಜು  ಅಲ್ಪಸ್ವಲ್ಪ ಗಾಯಗಳೊಂದಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಿಬ್ಬರೂ ಮಂಗಳೂರಿನಲ್ಲಿ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದರು ಎಂಬ ವಿಷಯ ಪ್ರಾಥಮಿಕ ಮಾಹಿತಿಗಳಿಂದ ತಿಳಿದುಬಂದಿರುತ್ತದೆ.
ಮೃತ ದೇಹವನ್ನು ಉಪ್ಪಿನಂಗಡಿಯ ಶವಾಗಾರದಲ್ಲಿ ಇರಿಸಲಾಗಿದೆ. ಸ್ಥಳಕ್ಕೆ ಪುತ್ತೂರು ಸಂಚಾರಿ ಪೊಲೀಸರು ಭೇಟಿಕೊಟ್ಟು ಪರಿಶೀಲನೆ ನಡೆಸಿದ್ದಾರೆ.

 

Write A Comment