ಕರಾವಳಿ

ಜಮ್ಮುಕಾಶ್ಮೀರ ಪ್ರವಾಹ: ಬ್ರಹ್ಮಾವರ ಮೂಲದ ಸೈನಿಕ ನಾಪತ್ತೆ; ಮಾಧ್ಯಮಗಳ ಮೊರೆಹೋದ ಕುಟುಂಬಿಕರು

Pinterest LinkedIn Tumblr

Brahmavara soldier missing jammu

ಉಡುಪಿ: ಜಮ್ಮು ಕಾಶ್ಮೀರದಲ್ಲಿ ಉಂಟಾದ ಜಲ ಪ್ರಳಯದಲ್ಲಿ ಬ್ರಹ್ಮಾವರ ಮೂಲದ ನವ ವಿವಾಹಿತ ಸೈನಿಕರೊಬ್ಬರು ಸಂಪರ್ಕ ಕಳೆದುಕೊಂಡಿದ್ದಾರೆ.

ಭಾರತೀಯ ಸೇನೆಯಲ್ಲಿ ಜಮ್ಮು ಕಾಶ್ಮೀರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸುಧೀರ ಪೂಜಾರಿ(31) ನಾಪತ್ತೆಯಾಗಿರುವವರು. ನೆರೆ ಸಂತ್ರಸ್ತರ ನೆರೆವಿನಲ್ಲಿ ತೊಡಗಿ ಕೊಂಡಿದ್ದ ಇವರು ಕಳೆದ ಒಂದು ವಾರದಿಂದ ಕುಟುಂಬದವರ ಸಂಪರ್ಕಕ್ಕೆ ಸಿಕ್ಕಿಲ್ಲ. ಪತಿ ಕುರಿತು ಯಾವುದೇ ಮಾಹಿತಿ ಇಲ್ಲದಿರುವುದರಿಂದ ಅವರ ಗರ್ಭಿಣಿ ಪತ್ನಿ ಆತಂಕಿತರಾಗಿದ್ದು ಮಾಧ್ಯಮದ ನೆರವು ಕೋರಿದ್ದಾರೆ.

Brahmavara soldier missing jammu (1)

ಬ್ರಹ್ಮಾವರ ಚಾಂತಾರು ಅಂಗಡಿಬೆಟ್ಟು ನಿವಾಸಿ ಐತ ಪೂಜಾರಿ ಮತ್ತು ವನಜ ದಂಪತಿಯ ಸುಪುತ್ರ ಸುಧೀರ ಪೂಜಾರಿ ಕಳೆದ ಹಲವು ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಸಿಪಾಯಿ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕಳೆದ ಮೇ 8 ರಂದು ಚೇರ್ಕಾಡಿ ಶಾನರಬೆಟ್ಟಿನ ಜಯಂತಿ (28) ಅವರನ್ನು ವಿವಾಹವಾಗಿದ್ದರು.

ಮೊದಲು ಕೊಲ್ಕತ್ತಾದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸುಧೀರ ಪೂಜಾರಿ ಹಲವು ತಿಂಗಳ ಹಿಂದೆಯಷ್ಟೆ ಜಮ್ಮು ಕಾಶ್ಮೀರಕ್ಕೆ ವರ್ಗವಾಗಿದ್ದು, ವಾರದಿಂದ ಜಮ್ಮು ಕಾಶ್ಮೀರದ ನೆರೆ ಹಾವಳಿಯ ಬಗ್ಗೆ ಪತ್ನಿ ಜಯಂತಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಅಲ್ಲದೇ ಬ್ರಹ್ಮಾವರ ಮನೆಯ ಪಕ್ಕದ ಸ್ನೇಹಿತರೋರ್ವರಿಗೆ ಜಮ್ಮು ಕಾಶ್ಮೀರದ ನೆರೆ ಹಾವಳಿಯ ಚಿತ್ರವನ್ನು ವಾಟ್ಸಪ್‌ನಲ್ಲಿ ಕಳಿಸಿದ್ದರು. ಆ ಬಳಿಕ ಜಮ್ಮು ಕಾಶ್ಮೀರದಲ್ಲಿ ಜಲಪ್ರಳಯ ವಿಪರೀತವಾಗಿದ್ದು ಪತಿ ಸುಧೀರ ಅವರಿಂದ ಯಾವುದೇ ಕರೆ ಬಾರದ ಹಿನ್ನಲೆಯಲ್ಲಿ ಕರೆಯ ನಿರೀಕ್ಷೆಯಲ್ಲಿ ಪತ್ನಿ ಜಯಂತಿ ಕಾಲ ಕಳೆಯುತ್ತಿದ್ದಾರೆ. ಬ್ರಹ್ಮಾವರದಲ್ಲಿ ಮಾಧ್ಯಮದ ಮುಂದೆ ಭಾನುವಾರ ಕಣ್ಣೀರಿಟ್ಟ ಜಯಂತಿ ತನ್ನ ಪತಿಯ ಇರುವಿಕೆಯ ಬಗ್ಗೆ ಹೇಗಾದರೂ ಮಾಡಿ ಮಾಹಿತಿ ಕೊಡುವಂತೆ ಅಂಗಲಾಚಿದ್ದಾರೆ.

ಜಮ್ಮು ಕಾಶ್ಮೀರ ನೆರೆ ಪೀಡಿತರ ಸಂಪರ್ಕ ಸಹಾಯವಾಣಿ ಸಂಖ್ಯೆಗೆ, ಪತಿ ಸುಧೀರ ಅವರ ಯೋಗಕ್ಷೇಮದ ಬಗ್ಗೆ ಮಾಹಿತಿ ನಿರೀಕ್ಷೆಯಲ್ಲಿ ಕರೆ ಮಾಡಿದಾಗ ಯಾವುದೇ ಸರಿಯಾದ ಮಾಹಿತಿ ದೊರಕದೇ ಇರುವುದು ಇವರಲ್ಲಿ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಪತಿ ದೇಶದ ಸೇವೆಯಲ್ಲಿ ತೊಡಗಿರುವುದು ತನಗೆ ಹೆಮ್ಮೆಯ ವಿಚಾರವಾಗಿದೆ. ಆದರೆ ದೇಶ ಸೇವೆಗೈಯುತ್ತಿರುವ ಪತಿಯ ಯೋಗ ಕ್ಷೇಮ ಬಗ್ಗೆ ಮಾಹಿತಿಯನ್ನು ಪಡೆಯಲು ಸರಕಾರ ಸಹಕರಿಸದಿರುವುದು  ಬೇಸರ ತಂದಿದೆ ಎನ್ನುತ್ತಾರೆ ಜಯಂತಿ.

Write A Comment