ಕರಾವಳಿ

ಗಂಗೊಳ್ಳಿ ಅಳಿವೆಯಲ್ಲಿ ಮತ್ತೊಂದು ಬೋಟ್ ದುರಂತ ; ಪ್ರಾಣಾಪಯದಿಂದ ಪಾರು

Pinterest LinkedIn Tumblr

 

Gangolli Alive Problem-1 (1)

ಕುಂದಾಪುರ: ಗಂಗೊಳ್ಳಿಯ ಅಳಿವೆ ಪ್ರದೇಶದಲ್ಲಿ ಭಾನುವಾರ ಬೆಳಿಗ್ಗೆ ಮತ್ತೊಂದು ಬೋಟ್ ದುರಂತ ಸಂಭವಿಸಿದ್ದು, ಅದೃಷ್ಟವಶಾತ್ ಬೋಟಿನಲ್ಲಿದ್ದ ಮೀನುಗಾರರು ಅಪಾಯದಿಂದ ಪಾರಾಗಿದ್ದು, ಬೋಟಿಗೆ ಲಕ್ಷಾಂತರ ರೂ. ಹಾನಿ ಸಂಭವಿಸಿದೆ.

ಶುಕ್ರವಾರ ಗಂಗೊಳ್ಳಿ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ಪಾಂಚಜನ್ಯ ಹೆಸರಿನ ಮೀನುಗಾರಿಕಾ ಟ್ರಾಲ್ ಬೋಟ್ ಮೀನುಗಾರಿಕೆ ಮುಗಿಸಿ ಭಾನುವಾರ ಬೆಳಿಗ್ಗೆ ಸುಮಾರು ೮ ಗಂಟೆಗೆ ಗಂಗೊಳ್ಳಿ ಬಂದರಿಗೆ ವಾಪಾಸಾಗುತ್ತಿದ್ದ ವೇಳೆ ಗಂಗೊಳ್ಳಿಯ ಅಳಿವೆ ಪ್ರದೇಶದಲ್ಲಿ ಮರಳು ದಿಣ್ಣೆಗೆ ಡಿಕ್ಕಿ ಹೊಡೆದಿದೆ. ಇದರಿಂದ ಬೋಟು ವಾಲಿಕೊಂಡು ಅಪಾಯಕ್ಕೆ ಸಿಲುಕಿಕೊಂಡಿತು. ಘಟನೆಯ ಸುದ್ಧಿ ತಿಳಿದಾಕ್ಷಣ ಮೀನುಗಾರಿಕೆ ಮುಗಿಸಿ ವಾಪಾಸು ಬರುತ್ತಿದ್ದ ಭಾಗ್ಯವತಿ, ಚಕ್ರೇಶ್ವರಿ, ಮಾರಲಸ್ವರೂಪ್ ಹಾಗೂ ಅನುಶ್ರೀ ಬೋಟಿನಲ್ಲಿದ್ದ ಮೀನುಗಾರರು ಅಪಾಯಕ್ಕೆ ಸಿಲುಕಿದ್ದ ಬೋಟನ್ನು ರಕ್ಷಿಸುವಲ್ಲಿ ಪ್ರಯತ್ನಿಸಿದರು.

Gangolli Alive Problem-1

ಇದೇ ಸಂದರ್ಭ ಗಂಗೊಳ್ಳಿಯ ದಿವ್ಯ ಜಟ್ಟಿಗೇಶ್ವರ ದೋಣಿಯ ಮೋಹನ ಖಾರ್ವಿ ಮತ್ತವರ ಸಂಗಡಿಗರು ಅಪಾಯಕ್ಕೆ ಸಿಲುಕಿದ್ದ ಬೋಟನ್ನು ಎಳೆದು ತರಲು ದೋಣಿ ಮೂಲಕ ದುರ್ಘಟನೆ ಸಂಭವಿಸಿದ ಸ್ಥಳಕ್ಕೆ ದೋಣಿಯ ಸಹಾಯದಿಂದ ರೋಪನ್ನು ಸಾಗಿಸಿ ರಕ್ಷಣಾ ಕಾರ್ಯಕ್ಕೆ ಸಹಕರಿಸಿದರು.

ಸುಮಾರು 2 ಗಂಟೆಗಳ ಕಾರ್ಯಾಚರಣೆ ಬಳಿಕ ಅಪಾಯಕ್ಕೆ ಸಿಲುಕಿದ್ದ ಬೋಟನ್ನು ರಕ್ಷಿಸಿ ಗಂಗೊಳ್ಳಿ ಬಂದರಿಗೆ ತರುವಲ್ಲಿ ಮೀನುಗಾರರು ಯಶಸ್ವಿಯಾಗಿದ್ದಾರೆ. ಅಪಾಯಕ್ಕೀಡಾದ ಬೋಟ್ ಕೋಡಿಯ ಕುಶಲ ಮೊಗವೀರ ಎಂಬುವರಿಗೆ ಸೇರಿದ್ದಾಗಿದ್ದು, ಬೋಟಿನ ಚಾಲಕ ಮಹಾಬಲ, ಅಣ್ಣಪ್ಪ, ಸತೀಶ, ಕೃಷ್ಣ ಹಾಗೂ ನಾರಾಯಣ ಎಂಬುವರು ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ. ಬೋಟು ಮರಳು ದಿಣ್ಣೆಗೆ ಡಿಕ್ಕಿ ಹೊಡೆದ ಪರಿಣಾಮ ಬೋಟಿಗೆ ಹಾನಿಯಾಗಿ ಬೋಟಿನ ಒಳಗೆ ನೀರು ನುಗ್ಗಿ ಇಂಜಿನ್ ಮತ್ತಿತರ ಸಲಕರಣೆಗಳಿಗೆ ಹಾನಿಯಾಗಿದೆ.

ಕಳೆದ ನಾಲ್ಕು ದಿನಗಳ ಅವಧಿಯಲ್ಲಿ ಗಂಗೊಳ್ಳಿ ಅಳಿವೆಯಲ್ಲಿ ನಡೆದ ಮೂರನೇ ದುರಂತ ಇದಾಗಿದೆ. ಸೆ.10 ರಂದು ಯಾಂತ್ರೀಕೃತ ಮೀನುಗಾರಿಕಾ ದೋಣಿ ಮತ್ತು ಸೆ.12ರಂದು ರಾತ್ರಿ ಮೀನುಗಾರಿಕಾ ಬೋಟ್ ಅಳಿವೆಯಲ್ಲಿ ದುರಂತಕ್ಕೀಡಾಗಿತ್ತು. ಈ ಮೂರು ದುರಂತಗಳಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಈ ಘಟನೆಗಳನ್ನು ಇಲ್ಲಿ ಸ್ಮರಿಸಬಹುದಾಗಿದೆ.

Write A Comment