ಕರಾವಳಿ

2 ವರ್ಷದೊಳಗೆ 4 ಸಾವಿರ ಮೆ.ವಾ. ಹೆಚ್ಚುವರಿ ವಿದ್ಯುತ್ ಉತ್ಪಾದನೆ

Pinterest LinkedIn Tumblr

DKS

ಮಂಗಳೂರು, ಸೆ.14: ಮುಂದಿನ ಎರಡು ವರ್ಷಗಳಲ್ಲಿ(2016ರೊಳಗೆ) ರಾಜ್ಯದಲ್ಲಿ 4 ಸಾವಿರ ಮೆಗಾವಾಟ್ ಹೆಚ್ಚುವರಿ ವಿದ್ಯುತ್ ಉತ್ಪಾದನೆ ಮಾಡಲಾಗುವುದು ಎಂದು ರಾಜ್ಯದ ಇಂಧನ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ನಗರದಲ್ಲಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮುಂದಿನ 2016ರೊಳಗೆ ಉಷ್ಣ ವಿದ್ಯುತ್ ಸ್ಥಾವರದ ಮೂಲಕ 3 ಸಾವಿರ ಮತ್ತು ಸೋಲಾರ್ ವಿದ್ಯುತ್ ಸ್ಥಾವರಗಳ ಮೂಲಕ 1 ಸಾವಿರ ಮೆಗಾವಾಟ್ ವಿದ್ಯುತ್ ಉತ್ಪಾದಿಸುವ ಗುರಿ ಹೊಂದಲಾಗಿದೆ. ಬಳ್ಳಾರಿ, ರಾಯಚೂರು, ಕೂಡಿಗಿಗಳಲ್ಲಿ ಉಷ್ಣ ವಿದ್ಯುತ್ ಸ್ಥಾವರಗಳ ಮೂಲಕ ಈ ಗುರಿ ತಲುಪಲಾಗುವುದು. ಇದರಿಂದ ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ವಿದ್ಯುತ್ ಕೊರತೆ ನೀಗಲಿದೆ ಎಂದರು.

ಅನುಮತಿಯಿಲ್ಲದ ಕಟ್ಟಡಗಳಿಗೆ ವಿದ್ಯುತ್ ಇಲ್ಲ: ನಗರಾಭಿವೃದ್ಧಿ ಇಲಾಖೆಯ ಅನುಮತಿಯಿಲ್ಲದೆ ಇರುವ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ನೀಡಲಾಗುವುದಿಲ್ಲ. ಕೆಲವು ಕಡೆಗಳಲ್ಲಿ ಇಂತಹ ಕಟ್ಟಡಗಳಿಗೆ ತಾತ್ಕಾಲಿಕ ಸಂಪರ್ಕ ನೀಡಿದ್ದರೂ ಆ ಸಂಪರ್ಕ ಶಾಶ್ವತವಾಗಿ ಇರುವುದಿಲ್ಲ. ಈ ಬಗ್ಗೆ ಹೈಕೋರ್ಟ್ ಆದೇಶವಿರುವುದರಿಂದ ಸರಕಾರ ಈ ಕ್ರಮಕ್ಕೆ ಮುಂದಾಗಿದೆ ಎಂದು ಡಿಕೆಶಿ ಹೇಳಿದರು.

ನಿಡ್ಡೋಡಿಯಲ್ಲಿ ಉಷ್ಣ ವಿದ್ಯುತ್ ಸ್ಥಾವರಕ್ಕೆ ಕೇಂದ್ರದ ಒತ್ತಡ: ದಕ್ಷಿಣ ಕನ್ನಡ ಜಿಲ್ಲೆಯ ನಿಡ್ಡೋಡಿಯಲ್ಲಿ ಉಷ್ಣ ವಿದ್ಯುತ್ ಸ್ಥಾವರ ಆರಂಭಿಸಲು ಕೇಂದ್ರ ಸರಕಾರದ ಒತ್ತಡ ಹೇರುತ್ತಿದೆ. ಆದರೆ ನಿಡ್ಡೋಡಿಯ ಜನರ ವಿರೋಧವಿದ್ದರೆ ರಾಜ್ಯ ಸರಕಾರ ಸ್ಥಾವರ ಆರಂಭಿಸುವ ಕೆಲಸದಲ್ಲಿ ಮುಂದುವರಿಯುವುದಿಲ್ಲ. ಜನರ ಸಹಕಾರವಿದ್ದರೆ ಮಾತ್ರ ಈ ಬಗ್ಗೆ ಯೋಚಿಸುವುದಾಗಿ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದರು.

ಟ್ರಾನ್ಸ್‌ಫಾರ್ಮರ್ ಬ್ಯಾಂಕ್: ರಾಜ್ಯದಲ್ಲಿ 5 ಸಾವಿರ ಚದರ ಅಡಿ ವಿಸ್ತೀರ್ಣಕ್ಕಿಂತ ಹೆಚ್ಚು ದೊಡ್ಡ ಕಟ್ಟಡದ ಮಾಲಕರು ತಾವೇ ಟ್ರಾನ್ಸ್ ಫಾರ್ಮರ್ ಹಾಕಿಸಿಕೊಳ್ಳಬೇಕು ಎಂಬ ನಿಯಮವನ್ನು ಸಡಿಲಿಸಿ 8 ಸಾವಿರ ಚದರ ಅಡಿಗಿಂತ ಮೇಲ್ಪಟ್ಟ ಕಟ್ಟಡ ಹೊಂದಿರುವವರು ಈ ರೀತಿಯ ಟ್ರಾನ್ಸ್‌ಫಾರ್ಮರ್ ಅಳವಡಿಸಿಕೊಳ್ಳಬೇಕೆಂದು ಹೊಸ ನಿಯಮ ಮಾಡಲಾಗಿದೆ. ಇದಕ್ಕೆ ಪೂರಕವಾಗಿ ರಾಜ್ಯದಲ್ಲಿ ಟ್ರಾನ್ಸಫಾರ್ಮರ್ ಬ್ಯಾಂಕ್ ನಿರ್ಮಿಸಲಾಗಿದೆ. ಟ್ರಾನ್ಸ್‌ಫಾರ್ಮರ್ ಅಗತ್ಯವಿರುವೆಡೆಗಳಲ್ಲಿ ನಗರ ಪ್ರದೇಶ ವಾದರೆ 24 ಗಂಟೆಗಳಲ್ಲಿ ಹಾಗೂ ಗ್ರಾಮಾಂತರ ಪ್ರದೇಶವಾದರೆ 72 ಗಂಟೆಗಳಲ್ಲಿ ಅಳವಡಿಸಲು ಸೂಚನೆ ನೀಡಲಾಗಿದೆ ಎಂದು ಸಚಿವರು ತಿಳಿಸಿದರು. ರಸ್ತೆ ಬದಿಯ ಟ್ರಾನ್ಸ್‌ಫಾರ್ಮರ್‌ಗಳನ್ನು ಸುರಕ್ಷತೆಯ ದೃಷ್ಟಿಯಿಂದ ಬದಲಾವಣೆ ಮಾಡುವ ಯೋಜನೆ ಹೊಂದಲಾಗಿದೆ ಎಂದವರು ವಿವರಿಸಿದರು.

ವಿದ್ಯುತ್ ಸಮಸ್ಯೆ ಪರಿಹಾರಕ್ಕೆ ತಾಲೂಕು; ಸೆಕ್ಷನ್ ಮಟ್ಟದಲ್ಲಿ ಸಲಹಾ ಸಮಿತಿ:
ವಿದ್ಯುತ್ ಗ್ರಾಹಕರ ಸಮಸ್ಯೆ ಪರಿಹಾರಕ್ಕೆ ನಿರಂತರ ದೂರು ದಾಖಲಿಸಲು 24 ಗಂಟೆಗಳ ನಿರಂತರ ಸೇವೆ ನೀಡುವ ಸಹಾಯವಾಣಿಯನ್ನು ರಾಜ್ಯದಲ್ಲಿ ಆರಂಭಿಸಲಾಗುವುದು. ನಿರಂತರ ಜ್ಯೋತಿ ಯೋಜನೆಗೆ ಮತ್ತೆ ಚಾಲನೆ ನೀಡಲಾಗುವುದು. ವಿದ್ಯುತ್ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸಲು ತಾಲೂಕು ಮಟ್ಟದಲ್ಲಿ ಶಾಸಕರ ನೇತೃತ್ವದಲ್ಲಿ 6 ಜನರ ಸಲಹಾ ಸಮಿತಿ ಹಾಗೂ ಸೆಕ್ಷನ್ ಮಟ್ಟದಲ್ಲಿ 6 ಜನರ ಸಮಿತಿಯನ್ನು ರಚಿಸಲಾಗುವುದು. ಈ ಸಮಿತಿಗಳು ತಿಂಗಳಿಗೆ ಒಂದು ಬಾರಿ ಸೇರಿ ತಮ್ಮ ವ್ಯಾಪ್ತಿಯ ವಿದ್ಯುತ್ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಸಮಾಲೋಚನೆ ನಡೆಸಲಿದೆ ಎಂದು ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶಾಸಕರಾದ ಜೆ.ಆರ್.ಲೋಬೊ, ಐವನ್ ಡಿಸೋಜ ಜಿಲ್ಲಾ ಕಾಂಗ್ರೆಸ್ ಪ್ರಭಾರ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ಮೇಯರ್ ಮಹಾಬಲ ಮಾರ್ಲ, ಮಾಜಿ ಶಾಸಕ ವಿಜಯ ಕುಮಾರ್ ಶೆಟ್ಟಿ, ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಕಾಂಗ್ರೆಸ್ ಮುಖಂಡ ಬದ್ರುದ್ದೀನ್ ಮತ್ತಿತರರು ಉಪಸ್ಥಿತರಿದ್ದರು.

Write A Comment