ಕರಾವಳಿ

ಬ್ರಹ್ಮಾವರ: ಮನೆಯಲ್ಲಿದ್ದ ವೃದ್ಧೆಯ ಚಿನ್ನಾಭರಣ ಹಾಗೂ ನಗದು ದೋಚಿದ್ದ ಇಬ್ಬರ ಬಂಧನ; ಓರ್ವ ಪರಾರಿ

Pinterest LinkedIn Tumblr

Brahmavara police arrests robbers-1

ಉಡುಪಿ: ಮನೆಯೊಂದಕ್ಕೆ ನುಗ್ಗಿ ವೃದ್ಧೆಯನ್ನು ಕಟ್ಟಿಹಾಕಿ ಚಿನ್ನಾಭರಣ ಹಾಗೂ ನಗದು ದೋಚಿದ್ದ ಇಬ್ಬರು ಆರೋಪಿಗಳನ್ನು ಬ್ರಹ್ಮಾವರ ಪೊಲೀಸರು ಬಂಧಿಸಿದ್ದಾರೆ. ಇವರ ಪೈಕಿ ಓರ್ವ ಆರೋಪಿ ಪೊಲೀಸರ ಕಣ್ಣುತಪ್ಪಿಸಿ ಪರಾರಿಯಾಗಿದ್ದಾನೆ.

ಬ್ರಹ್ಮಾವರ ಪೇತ್ರಿಯ ಚೇರ್ಕಾಡಿ ನಿವಾಸಿ ರಾಧಕೃಷ್ಣ (24), ಮಂದರ್ತಿ ಮೈರಕೊಮೆ ನಿವಾಸಿ ಪ್ರವೀರ (22) ಬಂಧಿತ ಆರೋಪಿಗಳಾಗಿದ್ದು ಇನ್ನೋರ್ವ ಆರೋಪಿ ಅರವಿಂದ ಶೆಟ್ಟಿ ತಲೆಮರೆಸಿಕೊಂಡಿದ್ದಾನೆ.

ಘಟನೆ ವಿವರ: ಬ್ರಹ್ಮಾವರ ಪೊಲೀಸ್ ಠಾಣೆ ವ್ಯಾಪ್ತಿಯ ಕೆಂಜೂರು ಗ್ರಾಮದ ಬೈದಬೆಟ್ಟು ಎಂಬಲ್ಲಿ ಸೆ.11 ರಂದು ರಾತ್ರಿ 8:00 ಗಂಟೆ ಸಮಯಕ್ಕೆ 3 ಜನ ಅಪರಿಚಿತ ವ್ಯಕ್ತಿಗಳು ಶ್ರೀಮತಿ ಶೆಡ್ತಿ(63 ವರ್ಷ) ಎನ್ನುವವರ ಮನೆಗೆ ನುಗ್ಗಿ ಶ್ರೀಮತಿ ಶೆಡ್ತಿರವರ ಕೈಗಳನ್ನು ಹಿಡಿದು ಕಾಲುಗಳನ್ನು ಕಟ್ಟಿ ಹಾಕಿ ಬಾಯಿಗೆ ಬಟ್ಟೆ ತುರುಕಿಸಿ ಮೈಮೇಲಿದ್ದ 7.5 ಪವನ್ ಚಿನ್ನಾಭರಣ ಮತ್ತು ನಗದು ರೂ 3,000 ವನ್ನು ಸೇರಿದಂತೆ 1.50,000 ಮೌಲ್ಯದ ಸೊತ್ತನ್ನು ದೋಚಿಕೊಂಡು ಹೋಗಿದ್ದರು.

ಈ ಬಗ್ಗೆ ಉಡುಪಿ ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್ ಐ.ಪಿ.ಎಸ್, ಹಾಗೂ ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಂತೋಷ ಕುಮಾರ್ ಇವರ ಮಾರ್ಗದರ್ಶನದಲ್ಲಿ ಉಡುಪಿ ಉಪ – ವಿಭಾಗದ ಪೊಲೀಸ್ ಉಪಾಧೀಕ್ಷಕ ಡಾ. ಪ್ರಭುದೇವ ಬಿ. ಮಾನೆ ಉಸ್ತುವಾರಿಯಲ್ಲಿ ಬ್ರಹ್ಮಾವರ ಸಿ.ಪಿ.ಐ (ವೃತ್ತ ನಿರೀಕ್ಷಕ ) ಅರುಣ ಬಿ ನಾಯಕ ಇವರ ನೇತೃತ್ವದಲ್ಲಿ ಕ್ಷಿಪ್ರ ಕಾರ್ಯಚರಣೆ ನಡೆಸಿದ ಮೂವರು ಆರೋಪಿಗಳ ಪೈಕಿ ಇಬ್ಬರನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳಿಂದ 36 ಗ್ರಾಂ ಚಿನ್ನಾಭರಣ ಮೌಲ್ಯ ರೂ 90,000, ನಗದು 1000, ಮತ್ತು ಕೃತ್ಯಕ್ಕೆ ಬಳಸಿದ ಬುಲೆರೋ ವಾಹನ ಮೌಲ್ಯ ರೂ 2,00,000 ಸೇರಿದಂತೆ ಒಟ್ಟು 2,91,000 ಮೌಲ್ಯದ ಸೊತ್ತುಗಳನ್ನು ಸ್ವಾಧಿನಪಡಿಸಿಕೊಳ್ಳಲಾಗಿದೆ.

ಈ ಕಾರ್ಯಾಚರಣೆಯಲ್ಲಿ ಬ್ರಹ್ಮಾವರ ವೃತ್ತ ನಿರೀಕ್ಷಕ ಅರುಣ ಬಿ ನಾಯಕ, ಬ್ರಹ್ಮಾವರ ಠಾಣಾ ಉಪನಿರೀಕ್ಷಕ ಗಿರೀಶ್ ಕುಮಾರ್ ಎಸ್. ಮತ್ತು ಸಿಬ್ಬಂದಿರವರಾದ ಸುದೇಶ ಶೆಟ್ಟಿ, ರಮೇಶ, ಪ್ರಸಾದ್, ಜೀವನ, ನವೀನ ನಾಯ್ಕ, ಜಯಕರ, ಲೋಕೇಶ ನಾಯ್ಕ, ಅರುಣ, ನಾಗರಾಜ, ಮೊದಲಾದವರು ಭಾಗವಹಿಸಿದ್ದರು.

ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಿದೆ.

Write A Comment