ಅಂತರಾಷ್ಟ್ರೀಯ

ಐಷಾರಾಮಿ ಕಾರಿನ ಟಾಪ್‌ನಲ್ಲಿ ಗರ್ಲ್‌ಫ್ರೆಂಡ್‌’ನ್ನು ಕಟ್ಟಿದ ವಿಡಿಯೋವೊಂದು ವೈರಲ್; ಈ ಭಯಾನಕ ದೃಶ್ಯ ಕಂಡು ಹೌಹಾರಿದ ಜನ

Pinterest LinkedIn Tumblr

ಸೋಶಿಯಲ್ ಮೀಡಿಯಾದಲ್ಲಿ ಕಾಣಸಿಗುವ ಕೆಲವೊಂದು ದೃಶ್ಯಗಳು ನಿಜಕ್ಕೂ ಆಘಾತ ಮೂಡಿಸುತ್ತವೆ. ಅದರಲ್ಲೂ ಕೆಲವೊಂದು ಸ್ಟಂಟ್‌ಗಳು ಎದೆ ನಡುಗಿಸುವಂತಿರುತ್ತದೆ. ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಇಂತಹ ದೃಶ್ಯಗಳು ಕಾಣಸಿಗುತ್ತವೆ. ಸದ್ಯ ಅಂತಹದ್ದೇ ವಿಡಿಯೋವೊಂದು ನೆಟ್ಟಿಗರಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ರಷ್ಯಾದ ಇನ್‌ಸ್ಟಾಗ್ರಾಂ ಪ್ರಭಾವಶಾಲಿ ಮತ್ತು ಬ್ಲಾಗರ್ ತನ್ನ ಗರ್ಲ್‌ಫ್ರೆಂಡ್‌ ಅನ್ನು ಐಷಾರಾಮಿ ಕಾರಿನ ಟಾಪ್‌ನಲ್ಲಿ ಕಟ್ಟಿ ಸಾಗಿದ್ದ ವಿಡಿಯೋವೊಂದು ಈಗ ವೈರಲ್ ಆಗುತ್ತಿದೆ. ಈ ಜೋಡಿ ಮಾಸ್ಕೋ ನಗರದ ಮೂಲಕ ಸವಾರಿ ಮಾಡಿದ್ದು, ಈ ವಿಚಿತ್ರ ಸಾಹಸವನ್ನು ಕಂಡ ಪ್ರತ್ಯಕ್ಷದರ್ಶಿಗಳು, ನೆಟ್ಟಿಗರು ಒಂದು ಕ್ಷಣ ಆಘಾತಕ್ಕೊಳಗಾಗಿದ್ದರು.

https://www.instagram.com/reel/CSCziXcCfXh/?utm_source=ig_embed&ig_rid=92027562-fef3-447e-b9fc-4c9752ab85c2

ವೈರಲ್ ಆಗುತ್ತಿರುವ ರೀಲ್ ವಿಡಿಯೋದಲ್ಲಿ ಸೆರ್ಗೆ ಕೊಸೆಂಕೊ ಐಷಾರಾಮಿ ಕಾರನ್ನು ಓಡಿಸುತ್ತಿರುವುದನ್ನು ಕಾಣಬಹುದಾಗಿದೆ. ಜತೆಗೆ ಈ ವಿಡಿಯೋದಲ್ಲಿ ಈ ಹಸಿರು ಕಾರಿನ ಮೇಲೆ ಸೆರ್ಗೆ ಗರ್ಲ್‌ಫ್ರೆಂಡ್ ಇಲೋನಾಳನ್ನು ಗಟ್ಟಿಯಾಗಿ ಕಟ್ಟಿರುವುದು ಮತ್ತು ಬಾಯಿಯನ್ನೂ ಟೇಪ್‌ನಿಂದ ಮುಚ್ಚಿರುವುದನ್ನು ನೋಡಬಹುದಾಗಿದೆ. ಬರೀ ಅಷ್ಟೇ ಅಲ್ಲ, ಪರಸ್ಪರ ಇಬ್ಬರ ಕೈಗೂ ಕೋಳ ಹಾಕಿರುವುದು ಕೂಡಾ ಇಲ್ಲಿ ಕಾಣಿಸುತ್ತದೆ.

ಈ ವಿಡಿಯೋ ವೈರಲ್ ಆಗುವುದಕ್ಕೆ ಹೆಚ್ಚು ಹೊತ್ತು ಹಿಡಿದಿರಲಿಲ್ಲ. ಜತೆಗೆ ಇದು ಟ್ರಾಫಿಕ್ ಪೊಲೀಸರ ಗಮನಕ್ಕೂ ಬಂದಿತ್ತು. ಹೀಗಾಗಿ, ಅಧಿಕಾರಿಗಳು ತಕ್ಷಣ ಈ ಬಗ್ಗೆ ತನಿಖೆ ಆರಂಭಿಸಿದ್ದರು. ಇನ್‌ಸ್ಟಾಗ್ರಾಂನಲ್ಲಿ ಲಕ್ಷಾಂತರ ಫಾಲೋವರ್‌ಗಳನ್ನು ಹೊಂದಿರುವ ಸೆರ್ಗೆ ಮತ್ತು ಆತನ ಗೆಳತಿ ಅನೇಕ `ಟಾಸ್ಕ್‌’ಗಳನ್ನು ನಿರ್ವಹಿಸುತ್ತಿರುತ್ತಾರೆ. ಇದು ಕೂಡಾ ಅಂತಹದ್ದೇ ಒಂದು `ಟಾಸ್ಕ್‌’ ಎಂದು ಹೇಳಲಾಗುತ್ತಿದೆ. ಆದರೆ, ಇವರಿಗೆ ಇಂತಹ `ಟಾಸ್ಕ್‌’ ಕೊಟ್ಟವರು ಯಾರು ಎಂದು ಸ್ಪಷ್ಟವಾಗಿ ಗೊತ್ತಾಗಿಲ್ಲ. ಇನ್ನು ಸೆರ್ಗೆ ಚಲಾಯಿಸುತ್ತಿದ್ದ ಕಾರು ಕೂಡಾ ಬೇರೆಯವರ ಹೆಸರಿನಲ್ಲಿ ನೋಂದಾವಣಿಯಾಗಿದೆ. ಈ ಕಾರಿನ ಮೇಲೆ ಇದುವರೆಗೆ 68 ಪಾವತಿಸದ ದಂಡಗಳಿವೆ ಎಂದೂ ಗೊತ್ತಾಗಿದೆ.

ಇತ್ತ ತನಿಖೆ ನಡೆಯುತ್ತಿದ್ದಂತೆಯೇ ಈ ಸ್ಟಂಟ್ ಬಗ್ಗೆ ಸೆರ್ಗೆ ವಿಷಾದ ವ್ಯಕ್ತಪಡಿಸಿದ್ದು, ಕ್ಷಮೆ ಕೂಡಾ ಯಾಚಿಸಿದ್ದಾನೆ. ಈ ಅಪಾಯಕಾರಿ ಸ್ಟಂಟ್‌ಗೆ ತಾನು ಕ್ಷಮೆ ಕೇಳುವುದಾಗಿ ಹೇಳಿ ಸೆರ್ಗೆ ಇನ್ನೊಂದು ವಿಡಿಯೋ ಪೋಸ್ಟ್‌ ಮಾಡಿದ್ದಾನೆ. ಸದ್ಯ ಈ ವಿಡಿಯೋ ಕೂಡಾ ವೈರಲ್ ಆಗುತ್ತಿದೆ.

Comments are closed.