ಅಂತರಾಷ್ಟ್ರೀಯ

ಮಕ್ಕಳಿಬ್ಬರನ್ನು ಕೊಂದು ತಿಂಗಳುಗಟ್ಟಲೆ ಕಾರಿನಲ್ಲಿಟ್ಟು ತಿರುಗಾಡುತ್ತಿದ್ದ ಮಹಿಳೆಯ ಬಂಧನ

Pinterest LinkedIn Tumblr

ವಾಷಿಂಗ್ಟನ್: ಎರಡು ಪುಟ್ಟ ಮಕ್ಕಳ ಮೃತದೇಹಗಳನ್ನು ಟ್ರಂಕ್ ಒಂದರಲ್ಲಿ ತುಂಬಿಸಿಕೊಂಡು ತಿಂಗಳುಗಟ್ಟಲೆ ಕಾರ್ ಚಲಾಯಿಸಿದ್ದ ಮಹಿಳೆಯನ್ನು ಅಮೆರಿಕ ಪೊಲೀಸರು ಬಂಧಿಸಿದ್ದಾರೆ.

ಪೊಲೀಸರು ತಮ್ಮ ಎಂದಿನ ಸಂಚಾರ ತಪಾಸಣೆ ನಡೆಸುವ ಸಂದರ್ಭದಲ್ಲಿ ಈ ಭಯಾನಕ ಸಂಗತಿ ಬೆಳಕಿಗೆ ಬಂದಿದೆ.

ಬಲ್ಟಿಮೋರ್‌ನ ಪೂರ್ವ ಕರಾವಳಿ ನಗರದ ನಿಕೋಲೆ ಜಾನ್ಸನ್ ಎಂಬಾಕೆಯ ವಿರುದ್ಧ ತನ್ನ ಅಕ್ಕನ ಏಳು ವರ್ಷದ ಹೆಣ್ಣುಮಗು ಹಾಗೂ ಐದು ವರ್ಷದ ಮಗನನ್ನು ಕಿರುಕುಳ ನೀಡಿ ಕೊಲೆ ಮಾಡಿದ ಆರೋಪ ಸೇರಿದಂತೆ ಹಲವು ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ.

33 ವರ್ಷದ ಜಾನ್ಸನ್, ಕಳೆದ ವರ್ಷದ ಮೇ ತಿಂಗಳಲ್ಲಿ ಬಾಲಕಿಯ ದೇಹವನ್ನು ಸೂಟ್‌ಕೇಸ್ ಒಂದರಲ್ಲಿ ತುಂಬಿಸಿ, ಬಳಿಕ ಅದನ್ನು ಟ್ರಂಕ್‌ನಲ್ಲಿ ಇರಿಸಿ ಕಾರಿನಲ್ಲಿ ಹಾಕಿದ್ದಳು. ನಂತರ ಎಂದಿನಂತೆ ಕಾರ್ ಬಳಸುತ್ತಿದ್ದಳು. ಒಂದು ವರ್ಷದ ಬಳಿಕ ಆ ಬಾಲಕಿಯ ಸಹೋದರನ ದೇಹವನ್ನು ಪ್ಲಾಸ್ಟಿಕ್ ಚೀಲವೊಂದರಲ್ಲಿ ಸುತ್ತಿ ಟ್ರಂಕ್ ಒಳಗೆ ಇರಿಸಿದ್ದಳು.

ಅತಿ ವೇಗದ ಚಾಲನೆಗಾಗಿ ಬುಧವಾರ ಆಕೆಯನ್ನು ತಡೆದಿದ್ದ ಪೊಲೀಸರು, ಆಕೆಯ ಬಳಿ ಸೂಕ್ತ ದಾಖಲೆ ಪತ್ರಗಳು ಕಾಣಿಸದ ಹಿನ್ನೆಲೆಯಲ್ಲಿ ಕಾರನ್ನು ವಶಕ್ಕೆ ಪಡೆದುಕೊಂಡಿದ್ದರು. ಕಾರನ್ನು ಅಲ್ಲಿಂದ ತೆಗೆದುಕೊಂಡು ಹೋಗಲಾಗುವುದು ಎಂದು ಪೊಲೀಸರು ತಿಳಿಸಿದಾಗ, ‘ನನಗೇನೂ ತೊಂದರೆ ಇಲ್ಲ, ನಾನು ಇನ್ನು ಐದು ದಿನ ಇಲ್ಲಿ ಇರುವುದಿಲ್ಲ’ ಎಂದು ಆಕೆ ಹೇಳಿದ್ದಳು.

ಜಾನ್ಸನ್ ಸಹೋದರಿ 2019ರಲ್ಲಿ ಈ ಮಕ್ಕಳನ್ನು ನೋಡಿಕೊಳ್ಳುವಂತೆ ಆಕೆಯ ಆರೈಕೆಗೆ ಒಪ್ಪಿಸಿದ್ದರು. ಸೊಸೆಯನ್ನು ಅನೇಕ ಬಾರಿ ಹೊಡೆದಿದ್ದು, ನೆಲಕ್ಕೆ ತಲೆ ತಾಗಿ ಆಕೆ ಸತ್ತುಹೋಗಿದ್ದಳು ಎಂದು ವಿಚಾರಣೆ ವೇಳೆ ಜಾನ್ಸನ್ ಒಪ್ಪಿಕೊಂಡಿದ್ದಾಳೆ. ಎರಡು ತಿಂಗಳ ಹಿಂದೆ ಬಾಲಕನಿಗೆ ಪೆಟ್ಟಾಗಿತ್ತು. ಆತ ಮತ್ತೆ ಏಳಲಿಲ್ಲ ಎಂದು ಆಕೆ ತಿಳಿಸಿದ್ದಾಳೆ. ಮಕ್ಕಳನ್ನು ನೋಡಲು ಸಹೋದರಿ ಕೆಲವು ಬಾರಿ ಬಯಸಿದ್ದರೂ, ಆಕೆ ನೆಪಗಳನ್ನು ಹೇಳಿ ಅದನ್ನು ತಪ್ಪಿಸಿದ್ದಳು ಎಂದು ಪೊಲೀಸರು ಹೇಳಿದ್ದಾರೆ.a

Comments are closed.