ಅಂತರಾಷ್ಟ್ರೀಯ

ಗಾಲ್ವಾನ್ ಕಣಿವೆಯಲ್ಲಿ ಭಾರತೀಯ ಸೇನಾಪಡೆಯೊಂದಿಗೆ ನಡೆದ ಸಂಘರ್ಷ; 5 ಮಿಲಿಟರಿ ಅಧಿಕಾರಿಗಳು, ಸೈನಿಕರು ಮೃತಪಟ್ಟಿದ್ದಾರೆ ಎಂಬುದನ್ನು ಒಪ್ಪಿಕೊಂಡ ಚೀನಾ

Pinterest LinkedIn Tumblr

ನವದೆಹಲಿ: ಕಳೆದ ವರ್ಷ ಜೂನ್ 15ರಂದು ಭಾರತ-ಚೀನಾ ಗಡಿಭಾಗದ ಗಾಲ್ವಾನ್ ಕಣಿವೆಯಲ್ಲಿ ಭಾರತೀಯ ಸೇನಾಪಡೆಯೊಂದಿಗೆ ನಡೆದ ಸಂಘರ್ಷದಲ್ಲಿ ಸಾವು ನೋವು ಉಂಟಾಗಿದೆ ಎಂದು ಇದೇ ಮೊದಲ ಬಾರಿಗೆ ಚೀನಾ ಒಪ್ಪಿಕೊಂಡಿದೆ.

ಪೂರ್ವ ಲಡಾಕ್ ನ ಗಾಲ್ವಾನ್ ಕಣಿವೆಯಲ್ಲಿ ಭಾರತೀಯ ಸೇನಾ ಪಡೆಯೊಂದಿಗೆ ನಡೆದ ಸಂಘರ್ಷದಲ್ಲಿ ಚೀನಾದ 5 ಮಿಲಿಟರಿ ಅಧಿಕಾರಿಗಳು ಮತ್ತು ಸೈನಿಕರು ಮೃತಪಟ್ಟಿದ್ದಾರೆ ಎಂದು ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ(ಪಿಎಲ್ ಎ) ಒಪ್ಪಿಕೊಂಡಿದೆ.

ಕರಕೋರಂ ಪರ್ವತಗಳಲ್ಲಿ ಬೀಡುಬಿಟ್ಟಿದ್ದ ಐದು ಚೀನಾದ ಗಡಿನಾಡಿನ ಅಧಿಕಾರಿಗಳು ಮತ್ತು ಸೈನಿಕರನ್ನು ಭಾರತದ ಗಡಿ ಮುಖಾಮುಖಿಯಲ್ಲಿ ಹುತಾತ್ಮರಾಗಿದ್ದಾರೆ ಎಂದು ಚೀನಾ ಕೇಂದ್ರ ಮಿಲಿಟರಿ ಆಯೋಗ (ಸಿಎಮ್ಸಿ) ಹೇಳಿದೆ. ಒಪ್ಪಂದವನ್ನು ಉಲ್ಲಂಘಿಸಿ ಚೀನಾದ ಕಡೆಯಿಂದ ದಾಟಿ ಬಂದ ಭಾರತೀಯ ಸೈನ್ಯದ ವಿರುದ್ಧದ ತೀವ್ರ ಹೋರಾಟದಲ್ಲಿ ಚೆನ್ ಹಾಂಗ್‌ಜುನ್, ಚೆನ್ ಕ್ಸಿಯಾಂಗ್‌ರಾಂಗ್, ಕ್ಸಿಯಾವೋ ಸಿಯುವಾನ್ ಮತ್ತು ವಾಂಗ್ ಝೌರಾನ್ ಮೃತಪಟ್ಟಿದ್ದಾರೆ ಎಂದು ಚೀನಾ ಕಮ್ಯುನಿಸ್ಟ್ ಪಾರ್ಟಿಯ ಮುಖವಾಣಿ ದ ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ.

ಗಾಲ್ವಾನ್ ಕಣಿವೆಯಲ್ಲಿ ಕಳೆದ ವರ್ಷ ಜೂನ್ 15ರಂದು ನಡೆದ ಸಂಘರ್ಷದಲ್ಲಿ ಒಟ್ಟು 20 ಮಂದಿ ಭಾರತೀಯ ಯೋಧರು ಹುತಾತ್ಮರಾಗಿದ್ದರು. ಕಳೆದ ನಾಲ್ಕು ದಶಕಗಳಲ್ಲಿ ಭಾರತ-ಚೀನಾ ಗಡಿಭಾಗದಲ್ಲಿ ನಡೆದ ಘರ್ಷಣೆಯಲ್ಲಿ ಅತ್ಯಂತ ಭೀಕರ ಘರ್ಷಣೆಯಿದು ಎಂದು ಹೇಳಲಾಗುತ್ತಿದೆ.

ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ನೇತೃತ್ವದ ಪಿಎಲ್‌ಎಯ ಹೈಕಮಾಂಡ್ ಸಿಎಮ್‌ಸಿ, ಪಿಎಲ್‌ಎ ಕ್ಸಿನ್‌ಜಿಯಾಂಗ್ ಮಿಲಿಟರಿ ಕಮಾಂಡ್‌ನ ರೆಜಿಮೆಂಟಲ್ ಕಮಾಂಡರ್ ಕಿ ಫಬಾವೊ ಅವರಿಗೆ “ಗಡಿಯನ್ನು ರಕ್ಷಿಸಿದ ಹೀರೋ ರೆಜಿಮೆಂಟಲ್ ಕಮಾಂಡರ್” ಎಂಬ ಗೌರವ ನೀಡಿದ್ದಾರೆ. ಹುತಾತ್ಮ ಯೋಧರಿಗೆ ಚೀನಾ ಸರ್ಕಾರ ಮರಣೋತ್ತರ ಪುರಸ್ಕಾರ ನೀಡಿ ಗೌರವಿಸಿದೆ.

ಇಲ್ಲಿಯವರೆಗೆ, ಚೀನಾ ಗಾಲ್ವಾನ್ ಕಣಿವೆ ಸಂಘರ್ಷದಲ್ಲಿ ತನ್ನ ಕಡೆಯಲ್ಲಿ ಆಗಿರುವ ಸಾವುನೋವುಗಳನ್ನು ಎಂದಿಗೂ ಒಪ್ಪಿಕೊಂಡಿರಲಿಲ್ಲ. ಮೊನ್ನೆ ಫೆಬ್ರವರಿ 10 ರಂದು ರಷ್ಯಾದ ಸುದ್ದಿ ಸಂಸ್ಥೆ ಟಾಸ್ ಗಲ್ವಾನ್ ಕಣಿವೆಯಲ್ಲಿ 45 ಮಂದಿ ಚೀನಾದ ಸೈನಿಕರು ಸಾವು ನೋವು ಕಂಡಿದ್ದಾರೆ ಎಂದು ಹೇಳಿತ್ತು ಎಂದು ಭಾರತದ ಉತ್ತರ ಸೇನಾ ಕಮಾಂಡರ್ ಉಲ್ಲೇಖಿಸಿದ ನಂತರ ಚೀನಾ ಬಹಿರಂಗವಾಗಿ ಇಂದು ಒಪ್ಪಿಕೊಂಡಿದೆ.

ಗಾಲ್ವಾನ್ ಸಂಘರ್ಷ: ಕಳೆದ ವರ್ಷ ಜೂನ್ 15ರಂದು ಭಾರತೀಯ ಸೈನಿಕರು ಪೂರ್ವ ಲಡಾಕ್ ನ ಗಾಲ್ವಾನ್ ಕಣಿವೆಯಲ್ಲಿ ತಮ್ಮ ಸಾಂಪ್ರದಾಯಿಕ ಗಸ್ತು ಕೇಂದ್ರದವರೆಗೆ ಹೋಗುತ್ತಿದ್ದುದನ್ನು ಚೀನಾ ಸೈನಿಕರು ತಡೆದರು. ಈ ಸಂದರ್ಭದಲ್ಲಿ ತೀವ್ರ ಮಟ್ಟದ ಘರ್ಷಣೆ ಏರ್ಪಟ್ಟು ಅಪಾರ ಸಾವುನೋವು ಕಂಡಿತು. 1962ರ ಚೀನಾ-ಭಾರತ ಯುದ್ಧದಲ್ಲಿ ಸಹ ಇದೇ ರೀತಿಯಲ್ಲಿ ಘರ್ಷಣೆ ಉಂಟಾಗಿತ್ತು.

ಚೀನಾದ ಸೈನಿಕರು ಮಧ್ಯಕಾಲೀನ ಶೈಲಿಯ ಶಸ್ತ್ರಾಸ್ತ್ರಗಳನ್ನು ಮೊನಚಾದ ಆಯುಧಗಳ ಮೂಲಕ ಯುದ್ಧಕ್ಕಿಳಿದಿದ್ದರು, ಪರಸ್ಪರ ಗುಂಡಿನ ಚಕಮಕಿ ಏರ್ಪಟ್ಟಿರಲಿಲ್ಲ. ಈ ಘರ್ಷಣೆ ನಂತರ ಭಾರತದ ಹಲವು ಸೈನಿಕರನ್ನು ಚೀನಾ ಸೆರೆಹಿಡಿದು ನಂತರದ ದಿನಗಳಲ್ಲಿ ಬಿಡುಗಡೆ ಮಾಡಿತು.

ಹುತಾತ್ಮ ಕರ್ನಲ್ ಸಂತೋಷ್ ಬಾಬು: ಗಾಲ್ವಾನ್ ಕಣಿವೆ ಸಂಘರ್ಷದಲ್ಲಿ ಹುತಾತ್ಮರಾದ ಭಾರತೀಯ ಸೈನಿಕರಲ್ಲಿ ಆಂಧ್ರ ಪ್ರದೇಶದ ಕಮಾಂಡಿಂಗ್ ಆಫೀಸರ್ ಕರ್ನಲ್ ಸಂತೋಷ್ ಬಾಬು ಪ್ರಮುಖರು, ಅವರಿಗೆ ಭಾರತ ಸರ್ಕಾರ ಮಹಾ ವೀರ ಚಕ್ರ ಮರಣೋತ್ತರ ಪ್ರಶಸ್ತಿ ನೀಡಿ ಗೌರವಿಸಿತು.

ಭಾರತ ಮತ್ತು ಚೀನಾ ಪ್ರಸ್ತುತ ಪೂರ್ವ ಲಡಾಖ್‌ನ ಪಾಂಗೊಂಗ್ ಸರೋವರದ ಎರಡೂ ದಂಡೆಯಲ್ಲಿ ಮಿಲಿಟರಿಯನ್ನು ಹಿಂತೆಗೆದುಕೊಳ್ಳುವ ಪ್ರಕ್ರಿಯೆ ಹಂತದಲ್ಲಿದೆ, ಇದು ಘರ್ಷಣೆ ನಡೆದ ಗಾಲ್ವಾನ್‌ನ ದಕ್ಷಿಣಕ್ಕೆ ಇದೆ.ಗಾಲ್ವಾನ್‌ನಲ್ಲಿ ನಡೆದ ಕೈ-ಕೈ-ಯುದ್ಧಗಳ ನಂತರ, ಭಾರತ ಮತ್ತು ಚೀನಾ ಈ ಪ್ರದೇಶದಲ್ಲಿ ಬಫರ್ ವಲಯವನ್ನು ರಚಿಸಲು ಒಪ್ಪಿಕೊಂಡವು.

Comments are closed.