ಆತ ವೈದ್ಯ…ಆತನಿಗೆ ನೂರಾರು ಮಕ್ಕಳು…ಅರೆರೆ ಇದೇನಿದು ಇಷ್ಟೊಂದು ಮಕ್ಕಳಾ ಎಂದು ನೀವು ಹುಬ್ಬೇರಿಸಬಹುದು. ಆದರೆ ಇದು ಸತ್ಯ. ಈ ಘಟನೆ ನಡೆದಿರುವುದು ದೂರದ ಅಮೆರಿಕಾದ ಮಿಚಿಗನ್ ರಾಜ್ಯದಲ್ಲಿ. ಡಾ. ಫಿಲಿಪ್ ಪೆವೆನ್ ಹೆಸರಿನ ಡಾಕ್ಟರ್ 80ರ ದಶಕದಲ್ಲಿ ಮನೆಮಾತಾಗಿದ್ದರು. ಇದಕ್ಕೆ ಕಾರಣ ಸಂತಾನ ಭಾಗ್ಯ ಇಲ್ಲದವರು ಈತನ ಚಿಕಿತ್ಸೆ ಪಡೆದರೆ ಅವರಿಗೆ ಮಕ್ಕಳಾಗುತ್ತಿತ್ತು. ಹೌದು, ಯಾರೆಲ್ಲಾ ಮಕ್ಕಳು ಹೊಂದಲು ಸಾಧ್ಯವಾಗುತ್ತಿರಲಿಲ್ಲ, ಅವರಿಗೆ ಈತ ತನ್ನ ಆಸ್ಪತ್ರೆಯಲ್ಲಿ ವೀರ್ಯ ದಾನ ಮಾಡುತ್ತಿದ್ದ. ಕಾನೂನು ಪ್ರಕಾರ ಆತ ಮಾಡಿದರಲ್ಲಿ ಯಾವುದೇ ತಪ್ಪಿರಲಿಲ್ಲ. ಆದರೆ ಕೆಲವೊಮ್ಮೆ ರೋಗಿಗಳಿಗೂ ಅರಿವಿಲ್ಲದಂತೆ ವೀರ್ಯ ದಾನ ಮಾಡಿದ್ದ ಎಂಬ ವಿಚಾರ 40 ವರ್ಷಗಳ ಬಳಿಕ ಬಹಿರಂಗವಾಗಿದೆ.
ಹೌದು, 40 ವರ್ಷಗಳ ವೈದ್ಯಕೀಯ ವೃತ್ತಿಯಲ್ಲಿ ಪ್ರಸೂತಿ ತಜ್ಞ / ಸ್ತ್ರೀರೋಗತಜ್ಞರಾಗಿದ್ದ ಡಾ. ಫಿಲಿಪ್ ಪೆವೆನ್ ಹಲವು ಬಾರಿ ರೋಗಿಗಳಿಗೆ ಅರಿವಿಲ್ಲದಂತೆ ತನ್ನದೆ ವೀರ್ಯವನ್ನು ದಾನ ಮಾಡಿದ್ದನು. ಅಂದು ಜನಿಸಿದ ಮಗುವೊಂದರ ಡಿಎನ್ಎ ಪರೀಕ್ಷೆ ಮಾಡಿಸಿದಾಗ ಈ ವಿಚಾರ ಬಹಿರಂಗವಾಗಿದೆ. ಹೌದು, ಕಳೆದ ವರ್ಷ ಜೈಮ್ ಹಾಲ್ ಎಂಬ ಮಹಿಳೆಯು ತನ್ನ ಡಿಎನ್ಎ ಟೆಸ್ಟ್ ಮಾಡಿಸಿದ್ದರು. ಈ ವೇಳೆ ತಂದೆಯ ಡಿಎನ್ಎ ಜೊತೆ ಆಕೆಯ ಡಿಎನ್ಎ ಮಾದರಿ ಮ್ಯಾಚ್ ಆಗುತ್ತಿರಲಿಲ್ಲ.
ಈ ಬಗ್ಗೆ ಆನ್ಲೈನ್ ಮೂಲಕ ಡಿಎನ್ಎ ಮ್ಯಾಚಿಂಗ್ಗಳನ್ನು ಪರೀಕ್ಷಿಸಿದಾಗ ಡಾ. ಪೆವೆನ್ ರಕ್ತದ ಮಾದರಿ ಹೊಂದಿಕೆಯಾಗಿದೆ. ಅಲ್ಲದೆ ಅವರ ಕುಟುಂಬದ ಇನ್ನಿತರರ ಡಿಎನ್ಎ ಕೂಡ ಹಾಲ್ ಡಿಎನ್ಎಗೆ ಮ್ಯಾಚ್ ಆಗುತ್ತಿದೆ. ಇತ್ತ ಹಾಲ್ ಅವರ ಇಬ್ಬರೂ ಪೋಷಕರು ಮೃತಪಟ್ಟಿದ್ದರು. ಹೀಗಾಗಿ ಸಂಶಯಗೊಂಡ ಆಕೆ ಡಾಕ್ಟರ್ನ್ನು ಹುಡುಕಿ ಹೊರಟಿದ್ದಾರೆ. ಇದೇ ವೇಳೆ ಮಿಚಿಗನ್ ವೈದ್ಯ ಫಿಲಿಪ್ ಪೆವೆನ್ ಸಿಕ್ಕಿದ್ದಾರೆ.
ಈ ಬಗ್ಗೆ ಡೇಟಾ ಪರಿಶೀಲಿಸಿದಾಗ 50 ದಶಕದಲ್ಲಿ ಇವರ ಪೋಷಕರು ಪೆವೆನ್ ಕಾರ್ಯ ನಿರ್ವಹಿಸಿದ್ದ ಆಸ್ಪತ್ರೆಗೆ ಭೇಟಿ ನೀಡಿದ್ದರು. ಅಲ್ಲದೆ ಅವರಲ್ಲಿಯೇ ಜನ್ಮ ಕೂಡ ನೀಡಿದ್ದರು. ಇನ್ನು ಇದೇ ಆಸ್ಪತ್ರೆಯಲ್ಲಿ ಜನಿಸಿದ ಇನ್ನಿತರ ಮಕ್ಕಳ ಡಿಎನ್ಎಯನ್ನು ಪರೀಕ್ಷಿಸಿದಾಗ ಕೂಡ ಪೆವೆನ್ ಅವರ ರಕ್ತದ ಮಾದರಿಗೆ ಹೊಂದಾಣಿಕೆಯಾಗಿದೆ. ಹೀಗಾಗಿ ಜೈಮ್ ಹಾಲ್ ಊಹೆ ನಿಜವಾಯಿತು.
ಈ ವೇಳೆ ವಿಚಾರಿಸಿದಾಗ ಪ್ರಸೂತಿ ತಜ್ಞರಾಗಿದ್ದ ಡಾ.ಪೆವೆನ್ ಅನೇಕರಿಗೆ ವೀರ್ಯ ದಾನ ಮಾಡಿದ್ದರು. ಅದರಲ್ಲೂ ಕೆಲ ರೋಗಿಗಳಿಗೆ ಗೊತ್ತಿಲ್ಲದಂತೆ ವೀರ್ಯ ದಾನ ಮಾಡಿ ಗರ್ಭಧರಿಸಲು ಕಾರಣರಾಗಿದ್ದರು. ತಮ್ಮ 40 ವರ್ಷಗಳ ವೃತ್ತಿಜೀವನದಲ್ಲಿ ಡಾ. ಫಿಲಿಪ್ ಪೆವೆನ್ ಸುಮಾರು 9,000 ಶಿಶುಗಳನ್ನು ಹೆರಿಗೆ ಮಾಡಿಸಿದ್ದಾರೆ. ಇದರಲ್ಲಿ ಹಲವು ಅವರೇ ವೀರ್ಯದಾನ ಮಾಡಿದ ಮಕ್ಕಳಿದ್ದವು. ಅಂದರೆ ಡಿಎನ್ಎ ಡೇಟಾ ಪ್ರಕಾರ ಫಿಲಿಪ್ ಪೆವೆನ್ ರಕ್ತದ ಮಾದರಿಗೆ ಹೊಂದಾಣಿಕೆಯಾಗುವ ನೂರಾರು ಮಕ್ಕಳಿದ್ದಾರೆ. ಅದರಲ್ಲಿ ಜೈಮ್ ಹಾಲ್ ಕೂಡ ಒಬ್ಬರು. ಅವರೀಗ 104 ವರ್ಷದ ಡಾ.ಫಿಲಿಪ್ ಪೆವೆನ್ ಅವರನ್ನು ತಂದೆಯನ್ನಾಗಿ ಸ್ವೀಕರಿಸಿದ್ದಾರೆ.