ಅಂತರಾಷ್ಟ್ರೀಯ

ಬ್ರಿಟನ್‌ನಲ್ಲಿ ವೇಗವಾಗಿ ಹರಡುತ್ತಿರುವ ಕೊರೊನಾ ಹೊಸ ಪ್ರಬೇಧ ಮಾರಕವಾಗಿರದು: ವಿವೇಕ್ ಮೂರ್ತಿ

Pinterest LinkedIn Tumblr


ವಾಷಿಂಗ್ಟನ್: ಬ್ರಿಟನ್‌ನಲ್ಲಿ ಪತ್ತೆಯಾಗಿರುವ, ವೇಗವಾಗಿ ಹರಡುತ್ತಿರುವ ಕೊರೋನಾ ವೈರಸ್‌ನ ಹೊಸ ಪ್ರಭೇದ ಮಾರಕ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಅಮೆರಿಕದ ಸರ್ಜನ್ ಜನರಲ್, ಭಾರತ ಮೂಲದ ವಿವೇಕ್ ಮೂರ್ತಿ ಹೇಳಿದ್ದಾರೆ.

ಈಗಾಗಲೇ ಅಭಿವೃದ್ಧಿಪಡಿಸಲಾಗಿರುವ ಕೋವಿಡ್ ಲಸಿಕೆಗಳು ಹೊಸ ಪ್ರಭೇದದ ವಿರುದ್ಧ ಪರಿಣಾಮಕಾರಿಯಾಗಿ ಕೆಲಸ ಮಾಡುವುದಿಲ್ಲ ಎನ್ನಲು ಕಾರಣಗಳಿಲ್ಲ ಎಂದೂ ಅವರು ಹೇಳಿದ್ದಾರೆ.

‘ಬ್ರಿಟನ್‌ನಿಂದ ಬಂದಿರುವ ಹೊಸ ಸುದ್ದಿಯಿಂದ, ಈಗಾಗಲೇ ಹರಡಿರುವ ಕೊರೊನಾ ವೈರಸ್‌ಗಿಂತಲೂ ಹೊಸ ಪ್ರಬೇಧವು ಹೆಚ್ಚು ಸಾಂಕ್ರಾಮಿಕ ಎಂಬುದು ತಿಳಿದುಬಂದಿದೆ. ಇದು ಹೆಚ್ಚು ಹರಡುವಂತೆ ತೋರುತ್ತಿದೆ. ಆದರೆ, ಹೆಚ್ಚು ಮಾರಕ ಎಂಬುದಕ್ಕೆ ಪುರಾವೆಗಳಿಲ್ಲ’ ಎಂದು ಅವರು ತಿಳಿಸಿದ್ದಾರೆ.

ಕೊರೊನಾ ವೈರಸ್‌ನ ಹೊಸ ಪ್ರಬೇಧ ಬ್ರಿಟನ್‌ನಲ್ಲಿ ವ್ಯಾಪಕವಾಗಿ ಹರಡುತ್ತಿದೆ ಎಂಬ ವರದಿ ಬೆನ್ನಲ್ಲೇ ಅನೇಕ ರಾಷ್ಟ್ರಗಳು ಬ್ರಿಟನ್‌ ಪ್ರಯಾಣಕ್ಕೆ ನಿರ್ಬಂಧ ಹೇರಿವೆ.

‘ನೀವು ಮನೆಯಲ್ಲಿದ್ದರೆ ಮತ್ತು ಈ ಸುದ್ದಿಯನ್ನು ಕೇಳುತ್ತಿದ್ದರೆ, ಸಾಂಕ್ರಾಮಿಕವು ಹರಡದಂತೆ ಯಾವ ರೀತಿ ಮುನ್ನೆಚ್ಚರಿಕೆ ಕೈಗೊಳ್ಳುತ್ತೀರಿ ಎಂಬುದು ಮುಖ್ಯ. ಮಾಸ್ಕ್ ಧರಿಸುವುದು, ದೈಹಿಕ ಅಂತರ ಕಾಯ್ದುಕೊಳ್ಳುವುದು, ಕೈಗಳನ್ನು ತೊಳೆಯುವುದು ಕೋವಿಡ್ ಹರಡದಂತೆ ತಡೆಯಲು ಇರುವ ಪ್ರಮುಖ ಅಸ್ತ್ರಗಳು’ ಎಂದು ಮೂರ್ತಿ ಹೇಳಿದ್ದಾರೆ.

Comments are closed.