ಅಂತರಾಷ್ಟ್ರೀಯ

ಪಾಕಿಸ್ತಾನದ ಸಂಪುಟದಿಂದ ಅತ್ಯಾಚಾರಿಗಳ ನಪುಂಸಕಗೊಳಿಸುವ ಕಾನೂನು ಜಾರಿಗೆ ಒಪ್ಪಿಗೆ

Pinterest LinkedIn Tumblr


ಇಸ್ಲಾಮಾಬಾದ್: ಅತ್ಯಾಚಾರಿಗಳನ್ನು ನಪುಂಸಕಗೊಳಿಸುವ ಮತ್ತು ಅತ್ಯಾಚಾರ ಪ್ರಕರಣಗಳ ತನಿಖೆಗೆ ವಿಶೇಷ ಕೋರ್ಟ್ ಗೆ ಸ್ಥಾಪನೆಗೆ ಪಾಕಿಸ್ತಾನದ ಸಚಿವ ಸಂಪುಟ ಅನುಮೋದನೆ ನೀಡಿದೆ.

ಫೆಡರಲ್ ಕಾನೂನು ಸಚಿವ ಫರೋಘ್ ನಸೀಮ್ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಶಾಸಕಾಂಗ ಪ್ರಕರಣಗಳ ಕ್ಯಾಬಿನೆಟ್ ಸಮಿತಿಯ ಸಭೆಯಲ್ಲಿ ಅತ್ಯಾಚಾರ ವಿರೋಧಿ(ತನಿಖೆ ಮತ್ತು ವಿಚಾರಣೆ) ಸುಗ್ರೀವಾಜ್ಞೆ 2020 ಮತ್ತು ಅಪರಾಧ ಕಾನೂನು(ತಿದ್ದುಪಡಿ) ಸುಗ್ರೀವಾಜ್ಞೆ 2020ಕ್ಕೆ ಅನುಮೋದನೆ ನೀಡಲಾಗಿತ್ತು.

ಕೇಂದ್ರ ಸಂಪುಟ ಸಭೆಯಲ್ಲಿ ಪಾಕ್ ಕಾನೂನು ಸಚಿವರು ಅತ್ಯಾಚಾರ ವಿರೋಧಿ ಕರುಡನ್ನು ಮಂಡನೆ ಮಾಡಿದ್ದು, ಇದಕ್ಕೆ ಪ್ರಧಾನಿ ಇಮ್ರಾನ್ ಖಾನ್ ಸುಗ್ರೀವಾಜ್ಞೆಗೆ ಅನುಮೋದನೆ ಸೂಚಿಸಿದ್ದಾರೆ. ಜೊತೆಗೆ ಈ ಕಾಯ್ದೆಯ ಪ್ರಕಾರ ದೇಶದಲ್ಲಿ ನಡೆದ ಅತ್ಯಾಚಾರ ಪ್ರಕರಣಗಳನ್ನು ತ್ವರಿತ ರೀತಿಯಲ್ಲಿ ವಿಚಾರಣೆ ಮಾಡಬೇಕು. ಪೊಲೀಸರು ಸಾಕ್ಷಿ ನಾಶವಾಗದಂತೆ ನೋಡಿಕೊಳ್ಳಬೇಕು. ಅತ್ಯಾಚಾರ ಪ್ರಕರಣದ ತನಿಖೆಯಲ್ಲಿ ಹೆಚ್ಚು ಮಹಿಳಾ ಪೊಲೀಸರು ಭಾಗವಹಿಸಬೇಕು ಎಂಬ ಅಂಶವನ್ನು ಉಲ್ಲೇಖಿಸಲಾಗಿದೆ.

ಒಂದು ವೇಳೆ ಅಪರಾಧಿ ಪುರುಷತ್ವ ಹರಣಕ್ಕೆ ಒಪ್ಪದಿದ್ದರೆ, ಪಾಕಿಸ್ತಾನ ದಂಡ ಸಂಹಿತೆ(ಪಿಪಿಸಿ) ಪ್ರಕಾರ ನ್ಯಾಯಾಲಯ ಮರಣದಂಡನೆ, ಜೀವಾವಧಿ ಶಿಕ್ಷೆ ಅಥವಾ 25 ವರ್ಷಗಳ ಜೈಲು ಶಿಕ್ಷೆ ವಿಧಿಸಬಹುದು ಎಂದು ಸಚಿವ ಫರೋಘ್ ನಸೀಮ್ ಹೇಳಿರುವದಾಗಿ ಡಾನ್ ನ್ಯೂಸ್ ವರದಿ ಮಾಡಿದೆ.

ಇದೇ ಸಂಪುಟ ಸಭೆಯಲ್ಲಿ ಕೆಲ ಸಚಿವರು ಅತ್ಯಾಚಾರಿಗಳನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸುವ ಕಾನೂನು ತನ್ನಿ ಎಂದು ಒತ್ತಾಯ ಮಾಡಿದ್ದಾರೆ ಎಂದು ಮಾಧ್ಯಮಗಳು ಸುದ್ದಿ ಮಾಡಿವೆ. ಆದರೆ ಇಮ್ರಾನ್ ಖಾನ್ ಸದ್ಯ ಅತ್ಯಾಚಾರಿಗಳಿಗೆ ಕೆಮಿಕಲ್ ಕ್ಯಾಸ್ಟ್ರೇಶನ್ ಮೂಲಕ ಅವರನ್ನು ನಪುಂಸಕಗೊಳಿಸುವುದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ.

Comments are closed.