ಅಂತರಾಷ್ಟ್ರೀಯ

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಮೋಸ; ಸುಪ್ರೀಂಕೋರ್ಟ್ ಮೆಟ್ಟಿಲೇರುತ್ತೇವೆ ಎಂದ ಟ್ರಂಪ್‍

Pinterest LinkedIn Tumblr

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‍ ಹಾಗೂ ಡೆಮಾಕ್ರಟಿಕ್ ಪಕ್ಷದ ಜೋ ಬಿಡನ್ ನಡುವೆ ತೀವ್ರ ಹಣಾಹಣಿ ಏರ್ಪಟಿದ್ದು, ಚುನಾವಣೆಯಲ್ಲಿ ಮೋಸ ನಡೆದಿದ್ದು, ಅಮೆರಿಕ ಜನತೆಗೆ ವಂಚನೆ ಎಸಗಲಾಗಿದೆ. ನಾವು ಇದರ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರುತ್ತೇವೆ ಎಂದು ಟ್ರಂಪ್‍ಹೇಳಿದ್ದಾರೆ.

ಇಂದು ಬೆಳಗ್ಗೆ ಶ್ವೇತಭವನದ ಪೂರ್ವ ಕೊಠಡಿಯಲ್ಲಿ ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಟ್ರಂಪ್, 2020ರ ಅಧ್ಯಕ್ಷೀಯ ಚುನಾವಣೆಯಲ್ಲಿ ತಾವು ಗೆಲುವು ಸಾಧಿಸಿರುವುದಾಗಿ ಪ್ರತಿಪಾದಿಸಿದರು.

“ಇದ್ದಕ್ಕಿದ್ದಂತೆ ಎಲ್ಲವೂ ನಿಂತುಹೋಯಿತು. ಇದು ಅಮೆರಿಕಾದ ಸಾರ್ವಜನಿಕರಿಗೆ ಮಾಡಿದ ವಂಚನೆ. ಇದು ನಮ್ಮ ದೇಶಕ್ಕೆ ದೊಡ್ಡ ಮುಜುಗರ. ನಾವು ಈ ಚುನಾವಣೆಯಲ್ಲಿ ಗೆದ್ದಿದ್ದೇವೆ” ಎಂದು ಟ್ರಂಪ್ ವಂಚನೆಗೆ ಸಂಬಂಧಿಸಿದಂತೆ ಯಾವುದೇ ಸಾಕ್ಷ್ಯ ನೀಡಿದೆ ಹೇಳಿದರು.

ಟ್ರಂಪ್ ಮತ್ತು ಜೋ ಬಿಡನ್ ನಡುವೆ ತೀವ್ರ ಪೈಪೋಟಿ ಕಂಡು ಬರುತ್ತಿದ್ದು, ಇದುವರೆಗಿನ ಫಲಿತಾಂಶದ ಪ್ರಕಾರ, ಬಿಡೆನ್ ಅವರು 225 ಎಲೆಕ್ಟ್ರೋಲ್ ಮತಗಳನ್ನು ಪಡೆದರೆ, ಟ್ರಂಪ್ 213 ಮತಗಳೊಂದಿಗೆ ಹಿನ್ನೆಡೆ ಅನುಭವಿಸಿದ್ದಾರೆ. ಅಮೆರಿಕದ ಅಧ್ಯಕ್ಷರಾಗಲು 538 ಮತಗಳ ಪೈಕಿ ಕನಿಷ್ಠ 270 ಎಲೆಕ್ಟ್ರೋಲ್ ಮತಗಳನ್ನು ಪಡೆಯುವ ಅಗತ್ಯ ಇದೆ.

ದೇಶದ ಹಲವು ರಾಜ್ಯಗಳಲ್ಲಿ ಇಬ್ಬರ ಮಧ್ಯೆ ತೀವ್ರ ಸ್ಪರ್ಧೆಯಿದೆ. ಡೊನಾಲ್ಡ್ ಟ್ರಂಪ್ ಟೆಕ್ಸಾಸ್ ಗೆದ್ದು ಒಹಿಯೊ ಮತ್ತು ಅಯೊವಾಗಳಲ್ಲಿ ಗೆಲುವಿಗೆ ಹಾತೊರೆಯುತ್ತಿದ್ದರೆ, ಜೊ ಬಿಡೆನ್ ಮಿನ್ನೆಸೊಟಾ, ನ್ಯೂ ಹ್ಯಾಂಪ್ ಶೈರ್ ಗಳಲ್ಲಿ ಗೆದ್ದಿದ್ದಾರೆ.

Comments are closed.