
ನ್ಯೂಯಾರ್ಕ್: ಇತ್ತೀಚೆಗಷ್ಟೇ ಅಮೆರಿಕದಲ್ಲಿ ಕಪ್ಪುವರ್ಣೀಯನಾದ ಜಾರ್ಜ್ ಫ್ಲಾಯ್ಡ್ ನನ್ನು ಪೊಲೀಸರು ಹತ್ಯೆ ಮಾಡಿದ್ದರಿಂದ ಅದೆಷ್ಟು ದೊಡ್ಡ ಮಟ್ಟದ ಜನಾಂಗೀಯ ಪ್ರತಿಭಟನೆಯಾಗಿತ್ತು ಎಂಬುದು ಜಗಜ್ಜಾಹೀರಾಗಿದೆ. ಆ ಬಿಸಿ ಆರುವ ಮೊದಲೇ ಈಗ ಇನ್ನೋರ್ವ ಕಪ್ಪುವರ್ಣೀಯನನ್ನು ಪೊಲೀಸರು ಅದೇ ರೀತಿ, ಉಸಿರುಕಟ್ಟಿಸಿ ಹತ್ಯೆ ಮಾಡಿದ ಘಟನೆ ಬೆಳಕಿಗೆ ಬಂದಿದೆ.
ನ್ಯೂಯಾರ್ಕ್ ನಗರದಲ್ಲಿ ಘಟನೆ ನಡೆಯಿದೆ. ರಸ್ತೆಯಲ್ಲಿ ನಗ್ನವಾಗಿ ಓಡುತ್ತಿದ್ದ ಈತನನ್ನು ಹಿಡಿದ ಪೊಲೀಸರು ಅವನ ತಲೆಯಮೇಲೆ ತಲೆಗವಸು ಹಾಕಿ ನಂತರ ಫೂಟ್ಪಾತ್ನ ಕಲ್ಲಿನ ಮೇಲೆ ಮಲಗಿಸಿ ಮುಖವನ್ನು ಒತ್ತಿಹಿಡಿದಿದ್ದಾರೆ. ಉಸಿರುಕಟ್ಟಿ, ಅಸ್ವಸ್ಥನಾಗಿದ್ದ ಆತನನ್ನು ಆಸ್ಪತ್ರೆಗೆ ದಾಖಲಿಸಿ, ವೆಂಟಿಲೇಟರ್ನಲ್ಲಿ ಇಡಲಾಗಿತ್ತು. ಆದರೆ ಆತ ಬದುಕಲಿಲ್ಲ ಎಂದು ಅಮೆರಿಕದ ಮಾಧ್ಯಮಗಳು ವರದಿ ಮಾಡಿವೆ.
ಡೇನಿಯಲ್ ಪ್ರೂಡ್ (30) ಮೃತ. ಪೊಲೀಸರಿಂದ ಹಲ್ಲೆಗೊಳಗಾಗಿ ಏಳು ದಿನ ಆಸ್ಪತ್ರೆಯಲ್ಲಿ ವೆಂಟಿಲೇಟರ್ನಲ್ಲಿದ್ದ. ನಿನ್ನೆ ಅವನು ಮೃತಪಟ್ಟ ನಂತರ ಕುಟುಂಬದವರು ಸುದ್ದಿಗೋಷ್ಠಿ ನಡೆಸಿ, ಪೊಲೀಸ್ ದೌರ್ಜನ್ಯದ ವಿಡಿಯೋ ಬಿಡುಗಡೆ ಮಾಡಿದ ಬಳಿಕವಷ್ಟೇ ವಿಷಯ ಬೆಳಕಿಗೆ ಬಂದಿದೆ. ಅಲ್ಲಿಯವರೆಗೂ ಪೊಲೀಸರು ಆತನ ಮೇಲೆ ಹಲ್ಲೆ ನಡೆಸಿದ ವಿಷಯವೇ ಗೊತ್ತಿರಲಿಲ್ಲ ಎಂದು ಹೇಳಲಾಗಿದೆ.
ಪೊಲೀಸರ ಈ ದೌರ್ಜನ್ಯ ನೋಡಿ..ನಮ್ಮ ಜನಾಂಗದ ಇನ್ನೆಷ್ಟು ಸೋದರರು ಹೀಗೆ ಸಾಯಬೇಕು ಎಂದು ಪ್ರೂಡ್ ಸಹೋದರ ಪ್ರಶ್ನಿಸಿದ್ದಾರೆ. ಡೇನಿಯಲ್ ಪ್ರೂಡ್ ಸಂಪೂರ್ಣ ಬೆತ್ತಲಾಗಿ ಹೋಗುತ್ತಿದ್ದಾಗ ಆತನನ್ನು ಹಿಡಿದ ಪೊಲೀಸರು ನೆಲದ ಮೇಲೆ ಕುಳಿತುಕೊಳ್ಳುವಂತೆ ಹೇಳಿ, ಬೆನ್ನಿನ ಹಿಂದೆ ಕೈಯಕಟ್ಟುವಂತೆ ಹೇಳುತ್ತಾರೆ. ಆಗ ಪ್ರ್ಯೂಡ್ ಪೊಲೀಸರ ವಿರುದ್ಧ ಕೂಗುತ್ತಾನೆ. ಆದರೆ ನಂತರ ಅವನನ್ನು ಅಡ್ಡ ಮಲಗಿಸಿ, ಉಸಿರು ಕಟ್ಟಿಸುವುದನ್ನು ವಿಡಿಯೋದಲ್ಲಿ ನೋಡಬಹುದು.
ಅಷ್ಟೇ ಅಲ್ಲ ಪ್ರ್ಯೂಡ್ ತಲೆಯನ್ನು ರಸ್ತೆಗೆ ಜಜ್ಜುತ್ತಾರೆ. ಒಬ್ಬ ಅಧಿಕಾರಿ ಅವನ ತಲೆಯನ್ನು ಬಗ್ಗಿಸಿ ಹಿಡಿದಿದ್ದರೆ, ಮತ್ತೋರ್ವ ಪೊಲೀಸ್ ತನ್ನ ಮೊಣಕಾಲನ್ನು ಪ್ರ್ಯೂಡ್ ಕುತ್ತಿಗೆಗೆ ಒತ್ತಿ ಹಿಡಿದಿದ್ದ. ಯಾವಾಗ ಪ್ರ್ಯೂಡ್ ಬಾಯಿಯಿಂದ ನೀರು ಸುರಿಯಲು ಶುರುವಾಗುತ್ತದೆಯೋ ಆಗ ಆತಂಕದಿಂದ ಬಿಟ್ಟುಬಿಡುತ್ತಾರೆ. ಆದರೆ ಅಷ್ಟರಲ್ಲಿ ಅವನು ಅಸ್ವಸ್ಥನಾಗಿದ್ದ ಎಂದು ಕುಟುಂಬದವರು ತಿಳಿಸಿದ್ದಾರೆ.
ಆದರೆ ಈತ ಯಾಕೆ ಬಟ್ಟೆಯಿಲ್ಲದೆ ತಿರುಗುತ್ತಿದ್ದ, ಅಥವಾ ಪೊಲೀಸರೇ ಬಟ್ಟೆಯನ್ನು ತೆಗೆಸಿದರಾ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ.
ಮತ್ತೋರ್ವ ಕಪ್ಪುವರ್ಣೀಯನ ಹತ್ಯೆ ಬಗ್ಗೆ ಕೇಳಿದ್ದೇ ಕೇಳಿದ್ದು ಮತ್ತೆ ಪ್ರತಿಭಟನೆಗಳು ಪ್ರಾರಂಭವಾಗಿವೆ. ಪೊಲೀಸ್ ಸ್ಟೇಶನ್ ಎದುರು ಬಂದು ಅಧಿಕಾರಿಗಳಿಗೆ ಶಿಕ್ಷೆ ಕೊಡುವಂತೆ ಆಗ್ರಹಿಸುತ್ತಿದ್ದಾರೆ.
Comments are closed.