ಅಂತರಾಷ್ಟ್ರೀಯ

ಶವಪೆಟ್ಟಿಗೆಯೊಳಗೆ ದಿಢೀರನೇ ಕಣ್ಣುಬಿಟ್ಟ ಯುವತಿ..! ಮುಂದೆ ಆಗಿದ್ದೇನು?

Pinterest LinkedIn Tumblr


ಕ್ಯಾಲಿಫೋರ್ನಿಯಾ: ಕೆಲವರ ಜೀವನದಲ್ಲಿ ಎಂತೆಂಥಹ ತಿರುವುಗಳನ್ನು ಕಾಣುತ್ತೆ ಅಂದರೆ ಊಹಿಸೋಕೂ ಸಾಧ್ಯವಿರಲ್ಲ. ಈ ಘಟನೆ ಕೂಡ ಅಂತಹದ್ದೇ ಅಚ್ಚರಿ ಮತ್ತು ಅತೀ ಅಪರೂಪದ ಸನ್ನಿವೇಶಗಳಲ್ಲಿ ಒಂದು. ಒಬ್ಬ ವ್ಯಕ್ತಿ ಸಾವನ್ನಪ್ಪಿ ಇನ್ನೇನು ಕೆಲವೇ ಕ್ಷಣದಲ್ಲಿ ಅಂತ್ಯಕ್ರಿಯೆ ನಡೆಯುತ್ತೆ ಅಂತಾ ಆ ಹೆಣವನ್ನು ಶವಾಗಾರದ ಮುಂದೆ ತಂದಾಗ ಚಟ್ಟದಲ್ಲಿ ಮಲಗಿದ್ದ ವ್ಯಕ್ತಿ ಎದ್ದು ಬರ್ತಾರೆ ಅಂದ್ರೆ ನಂಬೋಕಾಗುತ್ತಾ?

ಹಿಂದೆಲ್ಲಾ ಅಜ್ಜ ಅಜ್ಜಿ ದೆವ್ವದ ಕಥೆ ಹೇಳೋವಾಗ ಕಲ್ಪನಾ ಲೋಕದಲ್ಲಿ ಮಾತ್ರ ಇಂತಹ ಘಟನೆಗಳು ಸಾಧ್ಯವಾಗುತ್ತಿತ್ತು. ಆದ್ರೆ ನಿಜ ಜೀವನದಲ್ಲಿಯೂ ಹೆಣವಾಗಿ ಮಲಗಿದ್ದ ವ್ಯಕ್ತಿ ಕಣ್ಣು ಬಿಟ್ಟು ಉಸಿರಾಡ್ತಾರೆ ಅಂದ್ರೆ ಯಾರಿಗೂ ನಂಬೋಕಾಗಲ್ಲ. ಆದ್ರೆ ಈಗ ಮಾತ್ರ ನಂಬಲೇಬೇಕು. ಇದು ಯಾವ ಕಥೆಯೂ ಅಲ್ಲ, ಕಲ್ಪನೆಯೂ ಅಲ್ಲ.. ಅಮೆರಿಕಾದ ಎರಡು ದಿನಗಳ ಹಿಂದೆ ನಡೆದ ವಾಸ್ತವ ಘಟನೆ.

ಆಕೆಯ ಹೆಸರು ತಿಮೆಶಾ ಬ್ಯೂಚಾಂಪ್. ಅಮೆರಿಕಾದ ಮಿಶಿಗನ್ ನಗರದ ಡೆಟ್ರಾಯ್ ಪಟ್ಟಣದ ಹುಡುಗಿ. ವೈದ್ಯಕೀಯ ಭಾಷೆಯಲ್ಲಿ ಕರೆಯಲಾಗುವ ಸರೆಬ್ರಲ್ ಪಾಲ್ಸಿ ಅನ್ನುವ ಕಾಯಿಲೆಯಿಂದ ಅಂಗವಿಕಲೆಯಾಗಿದ್ದ ಈ ಹುಡುಗಿಗೆ 20ರ ಹರೆಯ. ರಕ್ತ ಸಂಬಂಧಿ ಕಾಯಿಲೆಯನ್ನೂ ಹೊಂದಿದ್ದ ಈಕೆಯನ್ನು ತಂದೆ ತಾಯಿ ಇರೋ ಬರೋ ಆಸ್ಪತ್ರೆಯೆಲ್ಲಾ ಸುತ್ತಾಡಿದ್ರು ಕೂಡ ಆಕೆಗಿರುವ ಕಾಯಿಲೆಯನ್ನು ಗುಣ ಪಡಿಸೋಕೆ ಸಾಧ್ಯ ಆಗಿರಲಿಲ್ಲ.

ಮಗಳನ್ನು ಪ್ರೀತಿಯಿಂದ ಸಾಕಿದ್ದ ಹೆತ್ತವರು ಆಕೆ ಇರೋ ಸ್ಥಿತಿಯಲ್ಲೇ ಒಪ್ಪಿದ್ದರು. ಅನಾರೋಗ್ಯ ಕಾಡಿದಾಗಲೆಲ್ಲಾ ಆಕೆಯನ್ನು ಓಕ್‌ಲ್ಯಾಂಡ್‌ ನಗರದಲ್ಲಿರೋ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡುತ್ತಿದ್ದರು. ಆದ್ರೆ ಇತ್ತೀಚೆಗೆ ಆಕೆ ದಿಢೀರನೇ ಪ್ರಜ್ಞಾಹೀನ ಸ್ಥಿತಿ ತಲುಪಿ ಮನೆಯಲ್ಲಿ ಬಿದ್ದಿದ್ದಳು. ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ ಹೆತ್ತವರು ಚಿಕಿತ್ಸೆ ನೀಡೋಕೆ ಸೂಚಿಸಿದ್ದಾರೆ. ಆದ್ರೆ ವೈದ್ಯರು ಪರೀಕ್ಷಿಸಿದ ನಂತರ ನಿಮ್ಮ ಮಗಳು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಮರಣ ಪರೀಕ್ಷೆಯನ್ನೂ ಮಾಡದೆ ಶವವನ್ನು ಪೋಷಕರಿಗೆ ಹಸ್ತಾಂತರಿಸಿದ ವೈದ್ಯರು, ಕೈ ತೊಳೆದುಕೊಂಡಿದ್ದರು. ಬೇಸರದಲ್ಲೇ ಮಗಳ ಅಂತ್ಯಕ್ರಿಯೆ ಮಾಡೋಕೆ ಮುಂದಾದ ಪೋಷಕರು ವಿಧಿವಿಧಾನಗಳನ್ನು ನಡೆಸಿ ಮಗಳ ಹೆಣವನ್ನು ಶವಪೆಟ್ಟಿಗೆಯಲ್ಲಿ ಹಾಕಿ ಜೇಮ್ಸ್ ಹೆಚ್ ಕೋಲ್ ಸ್ಮಶಾನಕ್ಕೆ ತಂದಿದ್ದಾರೆ. ಇನ್ನೇನು ಕೆಲವೇ ಕ್ಷಣದಲ್ಲಿ ಅಂತ್ಯಕ್ರಿಯೆ ನಡೆಸಬೇಕು ಎಂದಿದ್ದಾಗ ಅಲ್ಲಿದ್ದವರಿಗೆ ಅಚ್ಚರಿ ಕಾದಿತ್ತು.

ಇದಕ್ಕಿದ್ದ ಹಾಗೆ ಸ್ಮಶಾನ ಪೆಟ್ಟಿಗೆ ಅಲುಗಾಡಲು ಆರಂಭಿಸಿದೆ. ಅಲ್ಲಿದ್ದವರು ಒಂದು ಕ್ಷಣ ಭೀತಿಗೊಂಡರೂ ಕೂಡ ಯಾರೋ ಒಬ್ಬರು ಧೈರ್ಯ ಮಾಡಿ ಶವಪೆಟ್ಟಿಗೆಯ ಬಾಗಿಲು ತೆರೆದಿದ್ದಾರೆ. ಈ ವೇಳೆ ಹೆಣವಾಗಿ ಮಲಗಿದ್ದಾಳೆ ಅಂದುಕೊಂಡಿದ್ದ ಯುವತಿ ಪಿಳಿಪಿಳಿ ಕಣ್ಣು ಬಿಡೋದನ್ನು ನೋಡಿದ್ದಾರೆ. ಆಕೆ ಉಸಿರಾಡುತ್ತಿರೋದನ್ನು ಕೂಡ ಖಚಿತಪಡಿಸಿಕೊಂಡಿದ್ದಾರೆ. ನಂತರ ತಕ್ಷಣ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ನೀಡಲಾಗ್ತಿದೆ.

ಆಯುಷ್ಯ ಗಟ್ಟಿ ಇದ್ರೆ ಎಂತೆಂಥಹ ಕಠಿಣ ಪರಿಸ್ಥಿತಿಯಲ್ಲೂ ಬದುಕಿ ಬರಬಹುದು ಅಂತಾರೆ. ಬಹುಷಃ ಈ ಮಾತಿಗೆ ತಿಮೆಶಾ ಬ್ಯೂಚಾಂಪ್ ಅನ್ನೋ ಯುವತಿ ಉತ್ತಮ ಉದಾಹರಣೆ. ಸ್ವಲ್ಪ ನಿಮಿಷಗಳೇ ತಡವಾಗ್ತಿದ್ದರೂ ಆಕೆ ಇಂದು ಭೂಮಿಯೊಳಗಡೆ ಹೆಣವಾಗಿ ಮಲಗಿರುತ್ತಿದ್ದಳು. ಆಯುಷ್ಯ ಗಟ್ಟಿ ಇತ್ತು. ಸಾವನ್ನು ಗೆದ್ದು ಬಂದಿದ್ದಾಳೆ.

Comments are closed.