ಅಂತರಾಷ್ಟ್ರೀಯ

ಮಾದಕ ಮೈಮಾಟ ಹೊಂದಿದ್ದಕ್ಕೆ ಶಿಕ್ಷಕಿಯೇ ಅಮಾನತ್ತಾ..?

Pinterest LinkedIn Tumblr


ರಿಪಬ್ಲಿಕ್‌ ಆಫ್‌ ಬಜ್‌ ಎಂಬ ಸಂಶಯಾಸ್ಪದ ಸುದ್ದಿ ವೆಬ್‌ಸೈಟ್‌ ಲಾಹೋರ್‌ನಲ್ಲಿ ಮಾದಕ ಮೈಮಾಟ ಹೊಂದಿದ್ದಕ್ಕಾಗಿ ಶಿಕ್ಷಕಿಯನ್ನು ಅಮಾನತುಗೊಳಿಸಲಾಗಿದೆ ಎಂಬ ವರದಿಯನ್ನು ಪ್ರಕಟಿಸಿತ್ತು. ಲಾಹೋರ್‌ನ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ 30 ವರ್ಷದ ಮಹಿಳೆ ತುಂಬಾ ಮಾದಕ ಮೈಮಾಟ ಹೊಂದಿದ್ದಕ್ಕಾಗಿ ಕೆಲಸ ಕಳೆದುಕೊಂಡಿದ್ದಾಳೆ ಎಂದು ವರದಿ ಹೇಳಿತ್ತು.

ವರದಿಯ ಪ್ರಕಾರ, ಎರಡು ಮಕ್ಕಳ ತಾಯಿಯಾಗಿರುವ ಆಸಿಯಾ ಜುಬೇರ್‌ ಎಂಬ ಮಹಿಳೆಯನ್ನು ಆಡಳಿತ ಮಂಡಳಿ ತುಂಬಾ ಮಾದಕವಾಗಿದ್ದಾರೆ ಎಂದು ಆರೋಪಿಸಿ ಆಗಸ್ಟ್‌ 11ರಂದು ಕೆಲಸದಿಂದ ತೆಗೆದುಹಾಕಿದೆ. ವರದಿಯಲ್ಲಿ ಸಲ್ವಾರ್ ಕಮೀಜ್‌ ಧರಿಸಿರುವ ಮಹಿಳೆಯ ಚಿತ್ರವನ್ನು ಆಸಿಯಾ ಜುಬೇರ್‌ ಎಂದು ವೆಬ್‌ಸೈಟ್‌ ಪ್ರಕಟಿಸಿದೆ. ವರದಿಯಲ್ಲಿ ಜುಬೇರ್ ಅವರ ಟ್ವಿಟರ್‌ ಖಾತೆಯಲ್ಲಿ ಶಾಲೆಯ ಅವ್ಯವಸ್ಥೆಯ ಬಗ್ಗೆ ಹೇಳಿರುವ ಟ್ವೀಟ್‌ನ ಸ್ಕ್ರೀನ್‌ಶಾಟ್‌ನ್ನು ಕೂಡ ನೀಡಲಾಗಿದೆ.

ಜುಬೇರ್‌ ಟ್ವೀಟ್‌ನಲ್ಲಿ ನನ್ನ ಶಾಲೆಯ ಆಡಳಿತ ಮಂಡಳಿ ಹೈಸ್ಕೂಲ್‌ ವಿದ್ಯಾರ್ಥಿಗಳಿಗೆ ನನ್ನ ದೇಹ ಅತಿಯಾದ ಫಿಟ್‌ ಮತ್ತು ಕಾಮ ಪ್ರಚೋದಕವಾಗಿದೆ ಎಂದು ಆರೋಪಿಸಿ ನನ್ನನ್ನು ಕೆಲಸದಿಂದ ತೆಗೆದು ಹಾಕಿದ್ದಾರೆ. ಸಾಮಾನ್ಯವಾಗಿ ಶಾಲೆಯಲ್ಲಿ ದುಪ್ಪಟ್ಟಾ ಜೊತೆ ಸಲ್ವಾರ್ ಕಮೀಜ್ ಧರಿಸುತ್ತೇನೆ. ಅವರು ನನ್ನಿಂದ ಇನ್ನೇನು ಬಯಸುತ್ತಾರೋ ಗೊತ್ತಿಲ್ಲ.. ಇದು ಹಾಸ್ಯಾಸ್ಪದ ಎಂದು @Aasiazubair908 ಟ್ವಿಟರ್‌ ಖಾತೆ ಮೂಲಕ ಟ್ವೀಟ್‌ ಮಾಡಿದ್ದಾರೆ. ಅನೇಕ ಟ್ವೀಟ್‌ ಬಳಕೆದಾರರು ವರದಿಯ ಸ್ಕ್ರೀನ್‌ ಶಾಟ್‌ಗಳನ್ನು ಹಾಗೂ ಲಿಂಕ್‌ಗಳನ್ನು ತಮ್ಮ ಖಾತೆಯಲ್ಲಿ ಟ್ವೀಟ್‌ ಮಾಡಿದ್ದಾರೆ.

ಸತ್ಯ ಏನು..?
ಆದರೆ, ಸತ್ಯ ಏನೆಂದರೆ, ರಿಪಬ್ಲಿಕ್ ಆಫ್ ಬಜ್‌ ಪೋಸ್ಟ್ ಮಾಡಿದ ಫೋಟೋ ಭಾರತೀಯ ಮಾಡೆಲ್ ಜೋಯಾ ಶೇಖ್ ಅವರದು ಎಂಬುದು ಬಹಿರಂಗವಾಗಿದೆ. ಜೋಯಾ ಶೇಖ್‌ಗೂ ಪಾಕಿಸ್ತಾನದ ಶಿಕ್ಷಕಿಯೊಂದಿಗೆ ಯಾವುದೇ ಸಂಬಂಧವಿಲ್ಲ ಎಂಬುದು ತಿಳಿದುಬಂದಿದೆ.

ಪರಿಶೀಲನೆ ಮತ್ತು ವಿಧಾನ
ಫೋಟೋದ ಸಂಬಂಧಿತ ಭಾಗವನ್ನು ಕ್ರಾಪ್ ಮಾಡಿ ಅದನ್ನು ರಿವರ್ಸ್ ಇಮೇಜ್ ಸರ್ಚ್‌ ಮಾಡಿದಾಗ ಗೂಗಲ್‌ ನಮ್ಮನ್ನು ಭಾರತೀಯ ಮಾಡೆಲ್‌ ಜೋಯಾ ಶೇಖ್‌ ಅವರ ಇನ್‌ಸ್ಟಾಗ್ರಾಮ್ ಪುಟಕ್ಕೆ ಕರೆದೊಯ್ಯಿತು.

ವರದಿಯಲ್ಲಿ ಬಳಸಲಾದ ಫೋಟೋವನ್ನು ಫೆಬ್ರವರಿ 14, 2020ರಂದು ಜೋಯಾ ಶೇಖ್‌ ಅವರು ತಮ್ಮ ಇನ್ಸ್‌ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದರು.

‘ಸೆಕ್ಸಿ ಫಿಗರ್’ ಹೊಂದಿದ್ದಕ್ಕಾಗಿ ವಿವಾಹಿತ ಮಹಿಳೆಯೊಬ್ಬರನ್ನು ಪಾಕಿಸ್ತಾನದಲ್ಲಿ ಶಿಕ್ಷಕ ವೃತ್ತಿಯಿಂದ ವಜಾಗೊಳಿಸಲಾಗಿದೆ ಎಂಬ ಸುದ್ದಿ ಬಗ್ಗೆಯೂ ಯಾವುದೇ ವಿಶ್ವಾಸಾರ್ಹತೆ ನಮಗೆ ಕಂಡುಬಂದಿಲ್ಲ.

ವರದಿಯಲ್ಲಿ ಬಳಸಲಾದ ಆಸಿಯಾ ಜುಬೇರ್‌ ಅವರ ಟ್ವೀಟ್‌ ಬಗ್ಗೆಯೂ ಟೈಮ್ಸ್‌ ಫ್ಯಾಕ್ಟ್‌ ಚೆಕ್‌ ತಂಡ ಹುಡುಕಿತು. ಆದರೆ, ಅಂತಹ ಟ್ವೀಟ್‌ ನಮಗೆ ಕಂಡುಬರಲಿಲ್ಲ. ಆಗಸ್ಟ್‌ 19, 2020ರಂದು ರಿಪಬ್ಲಿಕ್‌ ಆಫ್‌ ಬಜ್‌ ವರದಿಯ ಸ್ಕ್ರೀನ್‌ ಶಾಟ್‌ನ್ನು ಅಲ್ಲಿ ಟ್ವೀಟ್‌ ಮಾಡಲಾಗಿತ್ತು. ಜೋಯಾ ಅವರ ಫೋಟೋವನ್ನು ಟ್ವಿಟರ್‌ನಲ್ಲಿ ನಿಯಮಿತವಾಗಿ ವೆಬ್‌ಸೈಟ್‌ ಪೋಸ್ಟ್‌ ಮಾಡುತ್ತಿರುವುದು ಕಂಡುಬಂದಿದೆ.

ರಿಪಬ್ಲಿಕ್‌ ಆಫ್‌ ಬಜ್‌ ಎಂಬ ವೆಬ್‌ಸೈಟ್‌ ಈ ಹಿಂದೆ ದೆಹಲಿಯಲ್ಲಿ ಹಿಂದೂ ಜನಸಮೂಹದಿಂದ ಸಾಮೂಹಿಕ ಅತ್ಯಾಚಾರಕ್ಕೊಳಗಾದ ಮುಸ್ಲಿಂ ಬಾಲಕಿಯೊಬ್ಬಳ ಸುಳ್ಳು ಸುದ್ದಿಗಳನ್ನು ಪ್ರಕಟಿಸಿತ್ತು. ಟೈಮ್ಸ್ ಫ್ಯಾಕ್ಟ್ ಚೆಕ್ ಈ ವರ್ಷದ ಆರಂಭದಲ್ಲಿ ಅದನ್ನು ಪತ್ತೆಹಚ್ಚಿತ್ತು.

ತೀರ್ಪು
‘ಮಾದಕ ಮೈಮಾಟ’ ಹೊಂದಿದ್ದಕ್ಕಾಗಿ ಲಾಹೋರ್‌ನಲ್ಲಿ ಅಮಾನತುಗೊಂಡ ಮಹಿಳಾ ಶಿಕ್ಷಕಿಯಾಗಿ ಭಾರತೀಯ ಮಾಡೆಲ್ ಜೋಯಾ ಶೇಖ್ ಅವರ ಫೋಟೋವನ್ನು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ ಎಂದು ಟೈಮ್ಸ್ ಫ್ಯಾಕ್ಟ್ ಚೆಕ್ ತಂಡ ಬಹಿರಂಗಪಡಿಸಿದೆ.

Comments are closed.