ಅಂತರಾಷ್ಟ್ರೀಯ

ಹದಿನಾರು ವರ್ಷದ ಹುಡುಗಿಯ ಮೇಲೆ 30 ಯುವಕರಿಂದ ಅತ್ಯಾಚಾರ​: ಇಸ್ರೇಲ್​ನಲ್ಲಿ ಭುಗಿಲೆದ್ದ ಆಕ್ರೋಶ

Pinterest LinkedIn Tumblr


ಜೆರುಸಲೇಮ್​: ಹದಿನಾರು ವರ್ಷದ ಹುಡುಗಿಯ ಮೇಲೆ 30 ಪುರುಷರಿಂದ ಇಸ್ರೇಲ್​ನ ಐಲಾಟ್​ ನಗರದ​ ಕರಾವಳಿ ರೆಸಾರ್ಟ್​ನಲ್ಲಿ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂಬ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಇಸ್ರೇಲ್​ ದೇಶಾದ್ಯಂತ ಆಕ್ರೋಶ ಭುಗಿಲೆದ್ದಿದೆ.

ಅನೇಕ ನಗರಗಳಲ್ಲಿ ಪ್ರತಿಭಟನಾಕಾರರು ಒಂದೆಡೆ ಸೇರಿ ಅತ್ಯಾಚಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕುತ್ತಿದ್ದಾರೆ. ಪಾನಮತ್ತ ಹುಡುಗಿಯ ಲಾಭ ಪಡೆದುಕೊಳ್ಳಲು 20 ವಯಸ್ಸಿನವರು ಅದ್ಹೇಗೆ ಹೋಟೆಲ್​ನಲ್ಲಿನ ಆಕೆಯ ಕೋಣೆಯ ಹೊರಭಾಗದಲ್ಲಿ ಸರತಿ ಸಾಲಿನಲ್ಲಿ ನಿಂತಿದ್ದರು ಎಂದು ಪ್ರಶ್ನಿಸಿದ್ದಾರೆ.

ಸಾವಿರಾರು ಮಂದಿ ಭಿತ್ತಿಫಲಕಗಳನ್ನು ಹಿಡಿದು ಇನ್ಮುಂದೆ ನಾವು ಸುಮ್ಮನಿರಲು ಸಾಧ್ಯವಿಲ್ಲ ಎಂದು ಘೋಷಣೆ ಕೂಗುತ್ತಾ, ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆಯಾಗಲೇಬೇಕು ಎಂದು ಒತ್ತಾಯಿಸಿದ್ದಾರೆ. ರಾಜಧಾನಿ ಜೆರುಸಲೇಮ್​ ಸೇರಿದಂತೆ ಇಸ್ರೇಲ್​ನ ಪ್ರಮುಖ ನಗರಗಳಲ್ಲಿ ಭಾರಿ ಪ್ರತಿಭಟನೆಗಳು ವ್ಯಕ್ತವಾಗಿವೆ.

ಘಟನೆ ಹಿನ್ನೆಲೆ ಏನು?
ಕಳೆದ ವಾರ 16 ವರ್ಷದ ಹುಡುಗಿಯ ಮೇಲೆ 30 ಪುರುಷರಿಂದ ಇಸ್ರೇಲ್​ನ ಐಲಾಟ್​ ನಗರದ​ ಕರಾವಳಿ ರೆಸಾರ್ಟ್​ನಲ್ಲಿ ಸಾಮೂಹಿಕ ಅತ್ಯಾಚಾರ ನಡೆದಿದೆ. ಈ ಬಗ್ಗೆ ಸಂತ್ರಸ್ತೆ ದೂರು ನೀಡಿದ್ದು, ಇಸ್ರೇಲ್​ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಈಗಾಗಲೇ ಪ್ರಕರಣ ಸಂಬಂಧ ಇಬ್ಬರು ಶಂಕಿತ ಆರೋಪಿಗಳನ್ನು ಬಂಧಿಸಲಾಗಿದೆ. ತನಿಖಾ ವೇಳೆ ಶಂಕಿತ ಆರೋಪಿಯೊಬ್ಬ ಬಾಯ್ಬಿಟ್ಟಿದ್ದು, ಅದು ಅತ್ಯಾಚಾರವಲ್ಲ. ಹುಡುಗಿಯ ಒಮ್ಮತದಿಂದಲೇ ಆಕೆಯೊಂದಿಗೆ ಸಾಮೂಹಿಕ ಸೆಕ್ಸ್​ ನಡೆಸಲಾಯಿತು ಎಂದು ಹೇಳಿಕೆ ನೀಡಿದ್ದಾನೆ. ಅಲ್ಲದೆ, ಕೆಲವರು ಹುಡುಗಿ ಮೇಲಿನ ಕ್ರೌರ್ಯವನ್ನು ಮೊಬೈಲ್​ನಲ್ಲಿ ರೆಕಾರ್ಡ್​ ಮಾಡಿರುವುದಾಗಿ ತಿಳಿದುಬಂದಿದೆ.

ಹುಡುಗಿ ಹೋಟೆಲ್​ನಲ್ಲಿ ಆಕೆಯ ಫ್ರೆಂಡ್ಸ್​ ಒಟ್ಟಿಗೆ ಮದ್ಯ ಸೇವಿಸಿದ ಬಳಿಕ ಆಕೆ ಬಾತ್​ರೂಮ್​ಗೆ ತೆರಳಿದಳು. ಅಲ್ಲಿಂದ ಆಕೆಯನ್ನು ಕೋಣೆಯೊಂದಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ. ಅತ್ಯಾಚಾರ ಎಸಗಿದವರಿಗೆ ಪರಸ್ಪರ ತಿಳಿದಿದೆಯೋ ಎಂಬುದು ಖಚಿತವಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಆದರೆ, ಮತ್ತೊಬ್ಬ ಆರೋಪಿ ಹೇಳಿರುವ ಪ್ರಕಾರ ಹುಡುಗಿಯ ಮೇಲೆ ಅತ್ಯಾಚಾರ ಮಾಡುವ ಮೊದಲು ಆಕೆಯ ಕೋಣೆಯ ಹೊರಭಾಗದಲ್ಲಿ ಎಲ್ಲರೂ ಸಾಲಾಗಿ ನಿಂತಿದ್ದರು ಎಂದಿದ್ದಾನೆ. ವೈದ್ಯಕೀಯ ನೆರವು ನೀಡುವ ಸೋಗಿನಲ್ಲಿ ಹುಡುಗಿ ಕೋಣೆಯ ಒಳಹೊಕ್ಕಿದೆವು ಎಂದಿದ್ದಾನೆ. ಮದ್ಯ ಸೇವಿಸಿ ನಿಯಂತ್ರಣದಲ್ಲಿ ಇಲ್ಲದೆ, ನಿದ್ರೆಸುತ್ತಿರುವಾಗ ಅವಕಾಶವನ್ನು ದುರುಪಯೋಗ ಪಡೆಸಿಕೊಂಡೆವು ಎಂದು ಮತ್ತೊಬ್ಬ ಶಂಕಿತ ಆರೋಪಿ ಬಾಯ್ಬಿಟ್ಟಿದ್ದಾನೆ. ತನಿಖೆ ಮುಂದುವರಿದಿದೆ.

Comments are closed.