ಅಂತರಾಷ್ಟ್ರೀಯ

ಕರೊನಾ ಲಸಿಕೆ ವಿರುದ್ಧದ ಅನುಮಾನಗಳಿಗೆ ದಿಟ್ಟ ಉತ್ತರ ನೀಡಿದ ರಷ್ಯಾ

Pinterest LinkedIn Tumblr


ಮಾಸ್ಕೋ: ರಷ್ಯಾ ಕರೊನಾ ಲಸಿಕೆ ಸಿದ್ಧ ಪಡಿಸಿದ್ದೇವೆ ಎಂದು ಘೋಷಿಸಿದ ದಿನದಿಂದ ಜಾಗತಿಕವಾಗಿ ಬಲಾಢ್ಯ ಎನಿಸಿಕೊಂಡಿರುವ ಕೆಲ ದೇಶಗಳು ಅದರ ವಿರುದ್ಧ ಅನುಮಾನಗಳನ್ನು ವ್ಯಕ್ತಪಡಿಸುತ್ತಲೇ ಬಂದಿವೆ.

ಜತೆಗೆ ತಜ್ಞರು ಕುಡ ರಷ್ಯಾ ಲಸಿಕೆಯ ಕಾರ್ಯಕ್ಷಮತೆ ಹಾಗೂ ಮಾನವರ ಬಳಕೆಗೆ ಸುರಕ್ಷಿತವಾಗಿಯೇ ಎಂಬ ಬಗ್ಗೆ ಸಂದೇಹಗಳನ್ನು ವ್ಯಕ್ತಪಡಿಸುತ್ತಲೇ ಇದ್ದಾರೆ.
ಈ ಎಲ್ಲ ಟೀಕೆ ಹಾಗೂ ಸಂದೇಹಗಳಿಗೆ ರಷ್ಯಾ ಈಗ ದಿಟ್ಟ ಉತ್ತರ ನೀಡಿದೆ. ಲಸಿಕೆಯ ಸುರಕ್ಷತೆ ಹಾಗೂ ದಕ್ಷತೆ ಬಗ್ಗೆ ಕ್ಲಿನಿಕಲ್​ ಟ್ರಯಲ್​ ಹಾಗೂ ಅದಕ್ಕೂ ಮುನ್ನ ನಡೆಸಿದ ಪ್ರಯೋಗಗಳ ಫಲಿತಾಂಶ ಹಾಗೂ ದಾಖಲೆಗಳನ್ನು ಬಹಿರಂಗಗೊಳಿಸುವುದಾಗಿ ಹೇಳಿದೆ.

ಪರೀಕ್ಷೆಯ ಅಂಕಿ-ಅಂಶ ಹಾಗೂ ಫಲಿತಾಂಶದ ವಿವರಗಳನ್ನು ಕೆಲ ದಿನಗಳಲ್ಲಿ ಪ್ರಕಟಿಸುವುದಾಗಿ ರಷ್ಯಾ ಆರೋಗ್ಯ ಸಚಿವ ಮಿಖಾಯಿಲ್​ ಮುರಾಷ್ಕೋ ತಿಳಿಸಿದ್ದಾರೆ.
ಲಸಿಕೆ ಬಗ್ಗೆ ಅನುಮಾನಗಳು ಹುಟ್ಟಿಕೊಂಡಿರೋದಕ್ಕೆ ಕಾರಣ ಅದರ ಬಗ್ಗೆ ಮಾಹಿತಿ ಇಲ್ಲದಿರುವುದು. ಹೀಗಾಗಿ ಸೋಮವಾರ (ಆಗಸ್ಟ್​ 17) ಕ್ಲಿನಿಕಲ್​ ಟ್ರಯಲ್ ಹಾಗೂ ಪ್ರಿ-ಕ್ಲಿನಿಕಲ್​ ಟ್ರಯಲ್​ನ ವಿವರಗಳನ್ನು ಪ್ರಕಟಿಸಲಾಗುವುದು ಎಂದು ಮುರಾಷ್ಕೋ ಹೇಳಿದ್ದಾರೆ.

ಲಸಿಕೆಯನ್ನು ಎರಡು ಹಂತದ ಪರೀಕ್ಷೆಗಳಿಗೆ ಒಳಪಡಿಸಲಾಗಿದೆ. ಎರಡರಲ್ಲೂ ಪ್ರಯೋಗಾರ್ಥಿಗಳು ಪ್ರತಿರೋಧ ಶಕ್ತಿಯನ್ನು ಹೊಂದಿರುವುದು ಕಂಡುಬಂದಿದೆ. ಜತೆಗೆ, ಈ ಲಸಿಕೆ ಕರೊನಾ ವಿರುದ್ಧ ಕನಿಷ್ಠ ಎರಡು ವರ್ಷಗಳವರೆಗೆ ರಕ್ಷಣೆ ನೀಡಲಿದೆ ಎಂದು ಹೇಳಲಾಗಿದೆ.

Comments are closed.