ಅಂತರಾಷ್ಟ್ರೀಯ

ಕೊರೋನಾದಿಂದ ಎಂದು ಮುಕ್ತಿ? ತಜ್ಞರಿಂದ ಕುತೂಹಲಕಾರಿ ಉತ್ತರ

Pinterest LinkedIn Tumblr


ಕೊರೋನಾ ವೈರಸ್ ಮಹಾಮಾರಿ ಯಾವಾಗಪ್ಪ ಬಿಟ್ಟುಹೋಗುತ್ತೆ ಎಂಬುದು ಹಲವು ಜನರ ಸಹಜ ಪ್ರಶ್ನೆ. ಬಹಳಷ್ಟು ಜನರು ಆಗಿದ್ದಾಗಲಿ ಬಿಡು ಎಂದು ಈ ಪ್ರಶ್ನೆ ಕೇಳೋದನ್ನೇ ಬಿಟ್ಟಿದ್ದಾರೆ. ಹಾಗಾದರೆ ಉತ್ತರ ಏನು? ಔಷಧ ಮತ್ತು ಲಸಿಕೆ ಸಿಗುವವರೆಗೂ ಈ ಮಹಾಮಾರಿ ಹೋಗೋದಿಲ್ಲ ಎಂದು ವೈದ್ಯಕೀಯ ವಿಜ್ಞಾನಿಗಳು ಹೇಳುತ್ತಾರೆ. ಆದರೆ, ಇತಿಹಾಸಜ್ಞರು ಹೇಳುವುದೇ ಬೇರೆ.

ಇತಿಹಾಸತಜ್ಞರ ಪ್ರಕಾರ ಕೋವಿಡ್ ಸೇರಿದಂತೆ ಯಾವುದೇ ಸಾಂಕ್ರಾಮಿಕ ಕಾಯಿಲೆಗೆ ಎರಡು ಅಂತ್ಯಗಳುಂಟು. ಒಂದು ವೈದ್ಯಕೀಯವಾಗಿ, ಮತ್ತೊಂದು ಸಾಮಾಜಿಕವಾಗಿ. ಆರಂಭದಲ್ಲಿ ತಿಳಿಸಿದಂತೆ ಔಷಧ, ಲಸಿಕೆ, ಶುಶ್ರೂಷೆ ಇತ್ಯಾದಿ ವಿಧಾನಗಳಿಂದ ಸಾವಿನ ಪ್ರಮಾಣ ತಗ್ಗಿಸಿದಾಗ ರೋಗಕ್ಕೆ ವೈದ್ಯಕೀಯ ಮುಕ್ತಿ ಸಿಗುತ್ತದೆ. ಆದರೆ, ಸಾಮಾಜಿಕವಾಗಿ ರೋಗದ ಅಂತ್ಯ ಎಂದರೆ, ಜನರಲ್ಲಿ ರೋಗದ ಬಗ್ಗೆ ಇರುವ ಭಯ ಹೊರಟು ಹೋಗುವುದು.

ಅಯ್ಯೋ, ಈ ಕೊರೋನಾ ರೋಗಕ್ಕೆಲ್ಲಾ ಹೆದ್ರಿಕೊಂಡು ಜೀವನ ಮಾಡೋದನ್ನ ಬಿಡೋಕ್ಕಾಗುತ್ತಾ ಎಂದು ನೀವು ಜನಸಾಮಾನ್ಯರ ಬಾಯಲ್ಲಿ ಕೇಳುತ್ತಿದ್ದೀರೆಂದರೆ ಅದರರ್ಥ ರೋಗವು ಸಾಮಾಜಿಕವಾಗಿ ಅಂತ್ಯವಾಗಿದೆ ಅಂತ. ಅಮೆರಿಕದ ಜಾನ್ಸ್ ಹಾಪ್​ಕಿನ್ಸ್ ವಿಶ್ವವಿದ್ಯಾಲಯದ ವೈದ್ಯಕೀಯ ಇತಿಹಾಸಜ್ಞ ಡಾ. ಜೆರೆಮಿ ಗ್ರೀನ್ ಅವರು 2-3 ತಿಂಗಳ ಹಿಂದೆಯೇ ಈ ರೋಗದ ಸಾಮಾಜಿಕ ಅಂತ್ಯದ ಬಗ್ಗೆ ಮಾತನಾಡಿದ್ದರು. ಹಾರ್ವರ್ಡ್ ವಿಶ್ವವಿದ್ಯಾಲಯದ ಇತಿಹಾಸಜ್ಞ ಅಲನ್ ಬ್ರಾಂಟ್ ಅವರು ಕೋವಿಡ್-19 ಕೂಡ ಸಾಮಾಜಿಕವಾಗಿ ಮೊದಲು ಅಂತ್ಯವಾಗುತ್ತದೆ ಎಂದು ಹೇಳಿದ್ದರು. ಈಗ ಅವರ ಮಾತು ಇದೀಗ ನಿಜವಾಗುತ್ತಿರುವಂತಿದೆ. ಭಾರತದಲ್ಲಿ ಜನರು ಕೊರೋನಾ ಬಗ್ಗೆ ಹೆದರುವುದನ್ನು ಬಿಡುತ್ತಿರುವಂತೆ ತೋರುತ್ತಿದೆ.

ಜನರಿಗೆ ಯಾವಾಗಲೂ ಆತಂಕದಲ್ಲಿ ಇರಲು ಇಷ್ಟವಾಗುವುದಿಲ್ಲ. ಟಿವಿ, ಪೇಪರ್ ತೆರೆದರೆ ಬರೀ ಕೊರೋನಾದ್ದೇ ಸುದ್ದಿ. ಬೆಂಗಳೂರಿನಂಥ ನಗರದಲ್ಲಿ ಯಾವುದೇ ಗಲ್ಲಿಗೆ ಹೋದರೂ ಕಂಟೇನ್ಮೆಂಟ್ ಜೋನ್​ಗಳೇ. ಒಂದು ಪ್ರದೇಶದಲ್ಲಿ ತಿರುಗಾಡಬೇಕೆಂದರೆ ಜಿಗ್ ಜಾಗ್ ರೀತಿ ಸುತ್ತಾಡಿಕೊಂಡು ಹೋಗಬೇಕು. ಅಷ್ಟು ಪ್ರಮಾಣದಲ್ಲಿ ಕಂಟೇನ್ಮೆಂಟ್ ಜೋನ್​ಗಳಿವೆ. ಈಗ ಜನರೂ ಕೂಡ ಭಯ ಪಡುವುದನ್ನು ಬಿಟ್ಟು ರೋಗದ ಜೊತೆ ಬದುಕಲು ಕಲಿಯುತ್ತಿದ್ದಾರೆ. ಬೆಂಗಳೂರಿನಲ್ಲಿ ಎಷ್ಟೇ ಕಂಟೈನ್ಮೆಂಟ್ ಜೋನ್ ಇದ್ದರೂ ಮಾರ್ಚ್ ಪೂರ್ವದಲ್ಲಿ ಇದ್ದ ಜನಸಂಚಾರವೇ ಈಗ ಎಲ್ಲೆಡೆಯೂ ಮರಳುತ್ತಿರುವುದನ್ನು ಗಮನಿಸಿರಬಹುದು.

ಭಯದ ಸಾಂಕ್ರಾಮಿಕತೆ:
ಒಂದು ರೋಗ ಸಾಂಕ್ರಾಮಿಕವಾಗಿ ಪರಿವರ್ತಿತವಾಗದಿದ್ದಾಗಲೂ ರೋಗದ ಬಗೆಗಿನ ಭಯ ಸಾಂಕ್ರಾಮಿಕವಾಗಿ ಕಾಡಿರುವ ಉದಾಹರಣೆ ಬಹಳಷ್ಟು ಉಂಟು. ಐರ್​ಲೆಂಡ್ ದೇಶದ ಡುಬ್ಲಿನ್ ನಗರದಲ್ಲಿರುವ ರಾಯಲ್ ಕಾಲೇಜ್ ಆಫ್ ಸರ್ಜನ್ಸ್​ನ ಡಾ. ಸುಸಾನ್ ಮುರೆ ಅವರಿಗಾದ ಅನುಭವ ಇದಕ್ಕೆ ನಿದರ್ಶನ. ಕೆಲ ವರ್ಷಗಳ ಹಿಂದೆ ಆಫ್ರಿಕಾ ಖಂಡದ ಕೆಲ ಭಾಗಗಳಲ್ಲಿ ಇಬೋಲಾ ರೋಗ ಕಾಡಿತ್ತು. 11 ಸಾವಿರ ಜನರ ಪ್ರಾಣಪಕ್ಷಿ ಹಾರಿಹೋಯಿತಾದರೂ ರೋಗವನ್ನು ಬಹಳ ಪರಿಶ್ರಮ ವಹಿಸಿ ನಿಯಂತ್ರಣಕ್ಕೆ ತರಲಾಗಿತ್ತು. ಆಫ್ರಿಕಾ ದೇಶದಲ್ಲಿ ಆರ್ಭಟಿಸಿದ್ದ ಇಬೋಲಾ ಕಾಯಿಲೆ ಬಗ್ಗೆ ವಿಶ್ವದ ಬೇರೆಡೆ ಭಯ ಮೂಡಿಸಿಯಾಗಿತ್ತು. ಡಾ. ಸುಸಾನ್ ಮರೆ ಆಗ ಐರ್​ಲೆಂಡ್​ನ ಗ್ರಾಮೀಣ ಭಾಗದ ಆಸ್ಪತ್ರೆಯೊಂದರಲ್ಲಿ ತರಬೇತಿಯಲ್ಲಿದ್ದರು. 2014ರಲ್ಲಿ ಐರ್​ಲೆಂಡ್​ನಲ್ಲಿ ಇಬೋಲಾ ಬಗ್ಗೆ ಭಯದ ವಾತಾವರಣವನ್ನು ಅವರು ಈಗ ಸ್ಮರಿಸಿಕೊಳ್ಳುತ್ತಾರೆ:“ಇಬೋಲಾ ಬಗ್ಗೆ ಜನರು ಆತಂಕಗೊಂಡಿದ್ದರು. ಬಸ್​ನಲ್ಲಿ ಪ್ರಯಾಣಿಸುವಾಗ ಪಕ್ಕದ ವ್ಯಕ್ತಿಯ ಮೈಬಣ್ಣವನ್ನು ತಪ್ಪದೇ ಗಮನಿಸುತ್ತಿದ್ದರು. ಯಾರಾದರೂ ಕೆಮ್ಮಿದರೆ ದೂರ ಹೋಗಿಬಿಡುತ್ತಿದ್ದರು…” ಎಂದು ಅವರು ಹೇಳುತ್ತಾರೆ. ಅಂದರೆ ಇಬೋಲಾ ಕಾಯಿಲೆಯಿಂದಾಗಿ ಆಫ್ರಿಕಾದ ಕಪ್ಪು ವರ್ಣೀಯರನ್ನು ಕಂಡರೆ ಬಿಳಿಜನರು ಅಕ್ಷರಶಃ ಭಯ ಪಡುತ್ತಿದ್ದರು.

ಆಫ್ರಿಕಾದ ದೇಶವೊಂದರಿಂದ ಬಂದಿದ್ದ ವ್ಯಕ್ತಿಯೊಬ್ಬನಿಗೆ ಅನಾರೋಗ್ಯವಾಗಿ ಆಸ್ಪತ್ರೆಯ ಎಮರ್ಜೆನ್ಸಿ ರೂಮಿಗೆ ಬಂದು ದಾಖಲಾಗಿದ್ದ. ಆದರೆ, ಆಸ್ಪತ್ರೆಯಲ್ಲಿ ಯಾರೂ ಕೂಡ ಆತನ ಬಳಿ ಹೋಗಲು ಭಯಪಡುತ್ತಿದ್ದರು. ನರ್ಸ್​ಗಳು ಬಚ್ಚಿಟ್ಟುಕೊಳ್ಳುತ್ತಿದ್ದರು. ವೈದ್ಯರು ಆಸ್ಪತ್ರೆಯನ್ನೇ ತ್ಯಜಿಸಲು ಸಿದ್ಧವಾಗಿದ್ದರು. ಈ ಸಂದರ್ಭದಲ್ಲಿ ಆಫ್ರಿಕನ್ ವ್ಯಕ್ತಿಗೆ ಚಿಕಿತ್ಸೆ ನೀಡಲು ಧೈರ್ಯವಹಿಸಿದ್ದು ತಾನೊಬ್ಬಳೇ ಎಂದು ಡಾ. ಸುಸಾನ್ ಮರೆ ಹೇಳುತ್ತಾರೆ. ದುರಂತವೆಂದರೆ ಆ ಆಫ್ರಿಕಾ ವ್ಯಕ್ತಿಗೆ ಕ್ಯಾನ್ಸರ್ ಅಡ್ವಾನ್ಸ್ ಸ್ಟೇಜ್​ನಲ್ಲಿತ್ತು. ಇಬೋಲಾ ಸೋಂಕು ಇರಲಿಲ್ಲ. ಸುಸಾನ್ ಅವರು ಆತನಿಗೆ ಆರೈಕೆ ಮಾಡಲು ಪ್ರಾರಂಭಿಸಿದ ಸ್ವಲ್ಪ ಹೊತ್ತಿನಲ್ಲಿ ಆತ ಸಾವನ್ನಪ್ಪಿದ. ಆತ ಸತ್ತ ಮೂರು ದಿನಕ್ಕೆ ವಿಶ್ವ ಆರೋಗ್ಯ ಸಂಸ್ಥೆಯು ಇಬೋಲಾ ರೋಗ ಅಂತ್ಯಗೊಂಡಿದೆ ಎಂದು ಘೋಷಣೆ ಮಾಡಿತ್ತು. ಒಂದು ರೋಗ ಭಯದ ಸಾಂಕ್ರಾಮಿಕತೆ ಎಂದರೆ ಇದೇ.

ಪ್ಲೇಗ್ ಎಂಬ ಭೀಕರ ಮಹಾಮಾರಿ:
ಇತಿಹಾಸ ಓದಿದವರಿಗೆ ಪ್ಲೇಗ್ ಎಂಬ ಮಹಾಮಾರಿ ಗೊತ್ತಿರುವ ಸಂಗತಿ. ಕಳೆದ 2,000 ವರ್ಷಗಳಲ್ಲಿ ಅನೇಕ ಬಾರಿ ಇದು ಮನುಕುಲವನ್ನು ನಡುಗಿಸಿ ಹೋಗಿದೆ. ಇಲಿಗಳ ಮೇಲಿರುವ ಚಿಗಟಗಳಲ್ಲಿ ಜೀವಿಸುವ ಯೆರ್ಸಿನಿಯಾ ಪೆಸ್ಟಿಸ್ ಎಂಬ ಬ್ಯಾಕ್ಟೀರಿಯಾದಿಂದ ಪ್ಲೇಗ್ ಸೋಂಕು ತಗುಲುತ್ತದೆ. ಇಲಿಗಳ ಮೂಲಕ ಮನುಷ್ಯರಲ್ಲಿ ಈ ಸೋಂಕು ಹರಡುತ್ತದೆ. ಸೋಂಕಿತ ವ್ಯಕ್ತಿಯಿಂದ ಉಸಿರಾಟದ ಮೂಲಕವೂ ಇನ್ನೊಬ್ಬರಿಗೆ ಹರಡುವ ಅಪಾಯಕಾರಿ ರೋಗ ಅದು.

ಕ್ರಿ.ಶ. ಆರನೇ ಶತಮಾನದಲ್ಲಿ ಮೊದಲು ಪ್ರಾರಂಭವಾದ ಪ್ಲೇಗ್ ಕಾಯಿಲೆ ಸುಮಾರು 2 ಶತಮಾನಗಳಷ್ಟು ಕಾಲ ಯೂರೋಪ್ ಖಂಡವನ್ನು ಕಾಡಿತ್ತು. ಯೂರೋಪ್​ನ ಅರ್ಧದಷ್ಟು ಜನಸಂಖ್ಯೆ ಈ ಮಹಾಮಾರಿಗೆ ಬಲಿಯಾಗಿ ಹೋಗಿದ್ದರು.

ಆನಂತರ ಇದು 14ನೇ ಶತಮಾನದಲ್ಲಿ ಚೀನಾದಲ್ಲಿ ರೌದ್ರಾವತಾರ ತಾಳಿತು. ಇಲ್ಲಿಯೂ ಕೇವಲ 4 ವರ್ಷದಲ್ಲಿ ಚೀನಾದ ಅರ್ಧದಷ್ಟು ಜನಸಂಖ್ಯೆಯನ್ನು ಬಲಿತೆಗೆದುಕೊಂಡಿತು. ಯೂರೋಪ್, ಆಫ್ರಿಕಾ, ಏಷ್ಯಾದ ಹಲವು ಭಾಗಗಳಲ್ಲಿ ಪ್ಲೇಕ್ ಸಾಂಕ್ರಾಮಿಕವಾಗಿ ಹರಡಿತು. ಕೋಟ್ಯಂತರ ಜನರು ಸಾವನ್ನಪ್ಪಿದರು.

ಅದಾದ ಬಳಿಕ 19-20ನೇ ಶತಮಾನದಲ್ಲಿ ಮತ್ತೊಮ್ಮೆ ಈ ಮಹಾಮಾರಿ ವಿಶ್ವವನ್ನೇ ನಡುಗಿಸಿತು. ಈ ಬಾರಿ ಇದು ಭಾರತದಲ್ಲಿ ಒಂದು ಕೋಟಿಗೂ ಹೆಚ್ಚು ಜನರನ್ನು ಸಾಯಿಸಿತು. ಭಾರತದ ಪ್ರತಿಯೊಂದು ಹಳ್ಳಿ ಹಳ್ಳಿಯೂ ತತ್ತರಿಸಿಹೋಗಿತ್ತು. ಜನರು ಮತ್ತು ಸರ್ಕಾರಗಳಿಗೆ ಏನು ಮಾಡಬೇಕೆಂಬ ಸ್ಪಷ್ಟತೆ ಇರಲಿಲ್ಲ. ಭಯದಿಂದ ಕಂಗಾಲಾಗಿ ಹೋಗಿದ್ದ ಜನರು ದಿನಗಳುರುಳುತ್ತಿರುವಂತೆ ಪ್ಲೇಗ್ ಉಪಸ್ಥಿತಿಯಲ್ಲೇ ಬದುಕಲು ಆರಂಭಿಸಿದ್ದರು. ಇಟಲಿ ದೇಶದಲ್ಲಿ ಜನರು ಎಲ್ಲಾ ರೋಗಭಯ ಮರೆತು ಇರುವಷ್ಟು ದಿನ ಮಜಾ ಮಾಡೋಣವೆಂದು ಕುಡಿದು ಕುಣಿದು ಕುಪ್ಪಳಿಸುತ್ತಾ ದಿನಗಳೆದರೆಂದು ಒಬ್ಬ ಲೇಖಕರು ಸ್ಮರಿಸಿಕೊಳ್ಳುತ್ತಾರೆ.

ಮುಂಬೈನಲ್ಲಿ ಆರೋಗ್ಯ ಅಧಿಕಾರಿಗಳು ಇಲಿಗಳನ್ನ ನಿಗ್ರಹಕ್ಕಾಗಿ ಊರಿಗೆ ಊರನ್ನೇ ಸುಟ್ಟುಹಾಕುತ್ತಿದ್ದರು. ಜನರು ಹೀಗೆ ಏನಾದರೂ ಸರ್ಕಸ್ ಮಾಡುತ್ತಲೇ ಇರುವಂತೆಯೇ ಪ್ಲೇಗ್ ಮಹಾಮಾರಿ ಕಣ್ಮರೆಯಾಗಿ ಹೋಯಿತು. ಪ್ಲೇಗ್ ಪ್ರಕರಣ ನಿಲ್ಲುವ ಮುಂಚೆಯೇ ಜನರು ಆ ಮಹಾಮಾರಿಯನ್ನು ತಿರಸ್ಕರಿಸಿಯಾಗಿತ್ತು. ಆದರೆ, ಪ್ಲೇಗ್ ಸೋಂಕು ಸೃಷ್ಟಿಸುವ ಬ್ಯಾಕ್ಟೀರಿಯಾ ಇದ್ದೇ ಇದೆ. ಪ್ಲೇಗ್ ಮತ್ತೆ ವಕ್ಕರಿಸುವ ಸಾಧ್ಯತೆಯೂ ಇದೆ. ಅಮೆರಿಕ ಸೇರಿದಂತೆ ಅಲ್ಲಲ್ಲಿ ಪ್ಲೇಗ್ ಕಾಯಿಲೆ ಕಾಣಿಸಿಕೊಳ್ಳುತ್ತಿರುತ್ತದೆ. ಆದರೆ, 21ನೇ ಶತಮಾನದಲ್ಲಿ ಪ್ಲೇಗ್ ಸಾಂಕ್ರಾಮಿಕವಾಗಿ ಹರಡಿಲ್ಲ ಎಂಬುದು ನಮ್ಮ ಅದೃಷ್ಟ.

ವೈದ್ಯಕೀಯವಾಗಿ ಅಂತ್ಯವಾಗಿದ್ದು ಸಿಡುಬು ಮಾತ್ರ:

ಮನುಷ್ಯ ಸಮಾಜಕ್ಕೆ ಬಹಳಷ್ಟು ರೋಗ ರುಜಿನಗಳು ವಕ್ಕರಿಸಿವೆ. ಎಲ್ಲವೂ ಕೂಡ ಕಾಲ ಕಾಲಕ್ಕೆ ಮರುಕಳಿಸುತ್ತಲೇ ಇರುತ್ತವೆ. ಆದರೆ, ವೈದ್ಯಕೀಯವಾಗಿ ರೋಗ ಅಂತ್ಯವಾಗಿದ್ದೆಂದರೆ ಸಿಡುಬು (Small Pox) ರೋಗ ಮಾತ್ರ ಇರಬಹುದು. 30 ಶತಮಾನಗಳ ಕಾಲ ವಿಶ್ವಾದ್ಯಂತ ಆಗಾಗ ತಲ್ಲಣಗೊಳಿಸುತ್ತಿದ್ದ ಈ ಸಿಡುಬು ರೋಗ ಬಹಳ ಅಪಾಯಕಾರಿ ಎನಿಸಿತ್ತು. ರೋಗ ಬಂದ 10 ಜನರ ಪೈಕಿ ಮೂವರು ಸಾವನ್ನಪ್ಪುವಷ್ಟು ಡೆತ್​ ಸ್ಟ್ರೈಕ್ ಇದರದ್ದಾಗಿತ್ತು. ಈ ರೋಗಕ್ಕೆ ಕಾರಣವಾಗುವ ವೇರಿಯೋಲಾ ಮೈನರ್ (Variola Minor) ಎಂಬ ವೈರಸ್ ಕೇವಲ ಮನುಷ್ಯನ ದೇಹವನ್ನು ಮಾತ್ರ ಆಕ್ರಮಿಸುತ್ತದೆ. ಬೇರೆ ಜೀವಿಗಳಲ್ಲಿ ನೆಲಸಲು ಇದಕ್ಕೆ ಸಾಧ್ಯವಿಲ್ಲ. ಈ ವೈರಾಣುವಿನ ವಿರುದ್ಧ ಪ್ರಬಲ ಲಸಿಕೆ ಕಂಡುಹಿಡಿದು ವಿಶ್ವದ ಪ್ರತಿಯೊಬ್ಬ ವ್ಯಕ್ತಿಗೂ ಹಾಕಿದ ಪರಿಣಾಮ ಇವತ್ತು ಸಿಡುಬು ನಿರ್ಮೂಲನೆಗೊಂಡಿದೆ. 1977ರ ನಂತರ ಯಾವುದೇ ಸಿಡುಬು ಪ್ರಕರಣ ಬೆಳಕಿಗೆ ಬಂದಿಲ್ಲ.

ಈ ಸಿಡುಬು ಎಷ್ಟು ಭಯಾನಕ ಎಂಬುದು ನಮ್ಮ ತಲೆಮಾರಿನವರಿಗೆ ಗೊತ್ತಿರಲಿಕ್ಕಿಲ್ಲ. ಸೋಂಕು ತಗುಲಿದ ವ್ಯಕ್ತಿಗೆ ತೀವ್ರ ಜ್ವರದ ಜೊತೆಗೆ ಮೈಮೇಲೆ ಕೀವಿನ ಗುಳ್ಳೆಗಳೇ ತುಂಬಿಹೋಗಿ ಯಮಯಾತನೆ ಅನುಭವಿಸುತ್ತಾ ನರಳಿ ನರಳಿ ಸಾಯುವಂತಾಗಿತ್ತು. ಸುದೀರ್ಘ ಕಾಲದಿಂದ ಇದು ಅಟ್ಟಹಾಸ ನಡೆಸುತ್ತಿದ್ದರಿಂದ ಜನರೂ ಕೂಡ ಮಾನಸಿಕವಾಗಿ ಇದಕ್ಕೆ ಅಣಿಯಾಗಿದ್ದರು.

ಕೋವಿಡ್ ಅಂತ್ಯ ಹೇಗೆ?

ಕೊರೋನಾ ವೈರಸ್ ಸೋಂಕು ಕೂಡ ಬಹಳಷ್ಟು ಜನರನ್ನು ಇನ್ನಿಲ್ಲದಂತೆ ಕಾಡಿಯಾಗಿದೆ. ಆದರೆ, ವೈರಾಣುವಿಗೆ ಹೆದರಿ ಎಷ್ಟು ದಿನ ಮನೆಯಲ್ಲಿ ಕೂರಲು ಸಾಧ್ಯ? ಹೊಟ್ಟೆಪಾಡಿಗೆ ಕೆಲಸ ಮಾಡಲೇಬೇಕು. ಜನರು ಮಾನಸಿಕವಾಗಿ ಕೋವಿಡ್ ರೋಗದ ಪೆಡಂಭೂತವನ್ನು ದೂರ ಮಾಡುತ್ತಾರೆ. ಈ ರೋಗ ಸಾಮಾಜಿಕವಾಗಿ ಮೊದಲು ಅಂತ್ಯ ಕಾಣುತ್ತದೆ ಎಂದು ತಜ್ಞರು ಹೇಳಿದ್ದಾರೆ.

(ಮಾಹಿತಿ ಕೃಪೆ: ನ್ಯೂಯಾರ್ಕ್ ಟೈಮ್ಸ್)

Comments are closed.