ಅಂತರಾಷ್ಟ್ರೀಯ

ಕೊರೋನಾ ವೈರಸ್ ಗಾಳಿಯಲ್ಲಿ ತೇಲುವುದು ನಿಜವೇ?

Pinterest LinkedIn Tumblr


ಕೊರೋನಾ ವೈರಸ್ ಗಾಳಿಯಲ್ಲಿ ಬಹಳ ಹೊತ್ತು ಇರುತ್ತದೆ, ಗಾಳಿಯಲ್ಲಿ ತೇಲಾಡುತ್ತದೆ ಎಂದು ವಿಶ್ವಾದ್ಯಂತ ಹಲವು ವಿಜ್ಞಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ಧಾರೆ. ಜನಸಾಮಾನ್ಯರಲ್ಲಿ ಈಗ ನಡುಕ ಶುರುವಾಗಿದೆ. ಗಾಳಿಯಲ್ಲಿ ಇವು ಹಾರಾಡುತ್ತಾ ಇಡೀ ಪ್ರದೇಶವೇ ಕಲುಷಿತಗೊಂಡರೆ ಹೇಗಪ್ಪ ಎಂದು ಭಯ ಬರದೇ ಇರದು. ಗಾಳಿಯಲ್ಲಿ ವೈರಸ್ ಹಾರಾಡುವ ಈ ವಿಚಾರದಲ್ಲಿ ಸತ್ಯಾಸತ್ಯತೆ ಎಷ್ಟು? ವಾಸ್ತವ ಏಜು? ಒಂದು ವೇಳೆ ನಿಜವೇ ಆದಲ್ಲಿ ಅದರಿಂದ ಪಾರಾಗುವ ಉಪಾಯ ಏನು? ಎಂಬಿತ್ಯಾದಿ ಪ್ರಶ್ನೆಗಳಿಗೆ ಒಂದಷ್ಟು ಉತ್ತರ ಕಂಡುಕೊಳ್ಳುವ ಪ್ರಯತ್ನ ಇಲ್ಲಿದೆ:

ಸೋಂಕಿತ ರೋಗಿ ಕೆಮ್ಮಿದಾಗ ಅಥವಾ ಸೀನಿದಾಗ ದೊಡ್ಡ ದ್ರವಕಣಗಳು ಬಾಯಿ ಅಥವಾ ಮೂಗಿನ ಮೂಲಕ ವೇಗವಾಗಿ ಹೊರಹೊಮ್ಮುತ್ತವೆ. ರೋಗಿಯ ಸಮೀಪದಲ್ಲಿದ್ದವರ ಮೇಲೆ ಈ ದ್ರವಕಣ ಬೀಳಬಹುದು. ನೆಲ ಅಥವಾ ಬೇರೆ ಯಾವುದಾದರೂ ವಸ್ತುಗಳ ಮೇಲೆ ಬೀಳಬಹುದು. ಇವು ಭಾರವಿರುವುದರಿಂದ ಹೆಚ್ಚು ಹೊತ್ತು ಗಾಳಿಯಲ್ಲಿ ಇರುವುದಿಲ್ಲ.

ಆದರೆ, ರೋಗ ಲಕ್ಷಣಗಳು ಇಲ್ಲದ ರೋಗಿಗಳು ಮಾತನಾಡಿದಾಗ, ಹಾಡಿದಾಗ ಅಥವಾ ಉಸಿರಾಡಿದಾಗ ಬಹಳ ಪುಟ್ಟ ದ್ರವಕಣಗಳು ಬಾಯಿ ಅಥವಾ ಮೂಗಿನಿಂದ ಹೊರಬೀಳುತ್ತವೆ. ಈ ಪುಟ್ಟ ದ್ರವಕಣಗಳನ್ನೇ ವೈದ್ಯರು ಮತ್ತು ವಿಜ್ಞಾನಿಗಳು Aerosol ಎನ್ನುತ್ತಾರೆ.

ಏರೋಸೋಲ್​ಗಳ ಹೇಗಿರುತ್ತವೆ?

ಈ ಏರೋಸೋಲ್​ಗಳು ಎಷ್ಟು ದಪ್ಪ ಇರುತ್ತವೆ? 5 ಮೈಕ್ರೋನ್ ಸುತ್ತಳತೆಗಿಂತ ಕಡಿಮೆ ಇರುವ ದ್ರವಕಣಗಳನ್ನ ಏರೋಸೋಲ್​ಗಳೆಂದು ಪರಿಗಣಿಸಲಾಗುತ್ತದೆ. ಮೈಕ್ರೋನ್ ಅಂದರೆ ಎಷ್ಟು ಅಳತೆ ಎಂದು ಅಂದಾಜಿಸುವುದಾದರೆ, ನಮ್ಮ ಮನುಷ್ಯನ ಒಂದು ಕೂದಲು ಸುಮಾರು 50 ಮೈಕ್ರೋನ್​ಗಳಷ್ಟು ದಪ್ಪ ಇರುತ್ತದೆ. ನಮ್ಮ ರಕ್ತದಲ್ಲಿರುವ ಆರ್​ಬಿಸಿ ಕಣಗಳು 5 ಮೈಕ್ರೋನ್​ಗಳಿರುತ್ತವೆ.

ಈ ರೀತಿಯ ಏರೋಸೋಲ್​ಗಳ ತೂಕ ಬಹಳ ಹಗುರವಿರುವುದರಿಂದ ಗಾಳಿಯಲ್ಲಿ ಬಹಳ ಹೊತ್ತು ತೇಲುವ ಸಾಧ್ಯತೆಯಂತೂ ಇದ್ದೇ ಇರುತ್ತದೆ. ಕೊರೋನಾ ವೈರಾಣುವಷ್ಟೇ ಅಲ್ಲ ಅನೇಕ ಸೂಕ್ಷ್ಮಜೀವಿಗಳೂ ದ್ರವಕಣಗಳ ಸಹಾಯದಲ್ಲಿ ತೇಲುವುದುಂಟು. ಕೆಲ ವರ್ಗದ ವೈರಾಣುಗಳು ಗಾಳಿಯಲ್ಲಿ ಇರುವುದಿಲ್ಲ. ಉದಾಹರಣೆಗೆ ಹೆಚ್​ಐವಿ ವೈರಾಣು. ಇದು ಗಾಳಿಗೆ ಬಂದರೆ ಬೇಗ ನಿಷ್ಕ್ರಿಯಗೊಂಡುಬಿಡುತ್ತದೆ. ಆದರೆ, ದಡಾರ ರೋಗಕ್ಕೆ ಕಾರಣವಾಗುವ ಮೀಸಲ್ಸ್ (Measles) ವೈರಾಣು ಗಾಳಿಯಲ್ಲಿ 2 ಗಂಟೆಗಳವರೆಗೆ ಇರಬಲ್ಲುದು. ಆದರೆ, ಕೊರೋನಾ ವೈರಾಣು ವಿಚಾರದಲ್ಲಿ ಇನ್ನೂ ಪರಿಪೂರ್ಣ ಅಧ್ಯಯನ ಆಗಿಲ್ಲ. ಕೆಲವರು ಇದು ಗಾಳಿಯಲ್ಲಿ ಹೆಚ್ಚು ಹೊತ್ತು ಇರಲು ಸಾಧ್ಯವಿಲ್ಲ ಎನ್ನುತ್ತಾರೆ. ಕೆಲವರು ಇದು ಸ್ಥಳದ ಮೇಲೆ ಅವಲಂಬಿತವಾಗಿರುತ್ತದೆ ಎನ್ನುತ್ತಾರೆ.ವಿಶ್ವದ ಹಲವು ಕಡೆ ಮಾಂಸ ಪ್ಯಾಕೇಜ್ ಮಾಡುವ ಘಟಕ, ಚರ್ಚ್, ರೆಸ್ಟೋರೆಂಟ್​ಗಳು ಕೊರೋನಾ ವೈರಸ್​ನ ಹಾಟ್​ಸ್ಪಾಟ್ ಆಗಿವೆ ಎಂಬಂಥ ವರದಿಗಳಿವೆ. ಈ ಸ್ಥಳಗಳು ಒಳಾಂಗಣಗಳೆಂಬುದನ್ನು ಗಮನಿಸಬೇಕು. ಹೆಚ್ಚು ಗಾಳಿಯಾಡದ ಹಾಗೂ ಹೆಚ್ಚು ಜನಸಂದಣಿ ಇರುವ ಸ್ಥಳಗಳು ಕೊರೋನಾ ಸೋಂಕಿನ ಸೂಪರ್​ಸ್ಪ್ರೆಡರ್​ಗಳಾಗಿರುವುದು ಬಹಳ ಸ್ಪಷ್ಟವಾಗಿದೆ. ಮನೆ, ಪೂಜಾ ಮಂದಿರ ಇತ್ಯಾದಿ ಸ್ಥಳಗಳಲ್ಲಿ ಸೋಂಕಿತ ಜನರು ಬಂದಾಗ ಅವರ ಮೂಲಕ ವೈರಾಣು ಗಾಳಿಗೆ ಸೇರಿಹೋಗುತ್ತದೆ. ಹೆಚ್ಚು ಗಾಳಿಯಾಡದ ಪರಿಣಾಮ ವೈರಾಣುವಿರುವ ಏರೋಸಾಲ್ ದ್ರವಕಣ ಹೆಚ್ಚು ಹೊತ್ತು ಅಲ್ಲಿಯೇ ತೇಲಬಲ್ಲುದು. ಹೆಚ್ಚು ರೋಗಿಗಳಿದಷ್ಟೂ ಮತ್ತು ಅವರು ಹೆಚ್ಚೆಚ್ಚು ಹೊತ್ತು ಅಲ್ಲಿ ಇದ್ದಷ್ಟೂ ಹೆಚ್ಚೆಚ್ಚೆ ಸಂಖ್ಯೆಯಲ್ಲಿ ಕಲುಷಿತ ದ್ರವಕಣಗಳು ಗಾಳಿಗೆ ಸೇರುತ್ತಲೇ ಹೋಗುತ್ತದೆ. ಒಂದೆರಡು ಗಂಟೆಯಲ್ಲೇ ಆ ಸ್ಥಳ ಅಪಾಯಕಾರಿಯಾಗಿಬಿಡುತ್ತದೆ. ಅಲ್ಲಿಗೆ ಆರೋಗ್ಯಯುತ ವ್ಯಕ್ತಿ ಹೋದಾಗ ಸೋಂಕು ಬಹಳ ಸುಲಭವಾಗಿ ಹರಡಿಬಿಡಬಹುದು.

ಏನೇನು ಎಚ್ಚರಿಕೆ ವಹಿಸಬಹುದು?

ಇದರಿಂದ ನಾವು ಕಲಿಯಬೇಕಾದ ಮತ್ತೊಂದು ಪಾಠವೆಂದರೆ ನಾವು ಮನೆ ಆಚೆ ಹೋದಾಗ ಮುಖಕ್ಕೆ ಮಾಸ್ಕ್ ಧರಿಸಬೇಕು. ಜನರಿಂದ ಜನರ ಮಧ್ಯೆ ದೈಹಿಕ ಅಂತರ ಪಾಲನೆ ಮಾಡಬೇಕು. ಜೊತೆಗೆ, ಬೇರೆ ಒಳಾಂಗಣ ಸ್ಥಳಗಳಿಗೆ ಹೋಗುವುದನ್ನು ನಿಲ್ಲಿಸಬೇಕು. ಸಾಧ್ಯವಾದಷ್ಟೂ ಬಯಲಲ್ಲೇ ಇರಬೇಕು.

ಈ ಹಿನ್ನೆಲೆಯಲ್ಲಿ ಕಂಪನಿಗಳ ಕಚೇರಿಗಳು, ಆಸ್ಪತ್ರೆ, ಶಾಲಾ ಕಾಲೇಜು, ಪ್ರಾರ್ಥನಾ ಮಂದಿರಗಳು ಇತ್ಯಾದಿ ವಿವಿಧ ಜನ ಸೇರುವ ಸ್ಥಳಗಳಲ್ಲಿ ಇನ್ನಷ್ಟು ಜಾಗ್ರತೆ ವಹಿಸುವುದು ಅತ್ಯಗತ್ಯ ಇದೆ. ಕಟ್ಟಡಗಳಿಗೆ ಪ್ರಬಲ ಏರ್​ಫಿಲ್ಟರ್​ಗಳನ್ನ ಅಳವಡಿಸಬೇಕು. ಅತಿನೇರಳೆ ಬೆಳಕಿನ (ಅಲ್ಟ್ರಾವೈಲಟ್ ಲೈಟ್) ವ್ಯವಸ್ಥೆ ಮಾಡಬೇಕು. ಈ ಯು.ವಿ. ಲೈಟ್​ಗಳು ಯಾವುದೇ ವೈರಾಣುವನ್ನು ಕೊಲ್ಲಬಲ್ಲವಾಗಿರುತ್ತವೆ.

Comments are closed.