ಕರ್ನಾಟಕ

ಕೊರೋನಾ: ಚಂಡೀಗರ್​ನಿಂದ ಬೆಂಗಳೂರಿಗೆ ಬಂದ ಪತ್ನಿಯನ್ನು ಮನೆಗೆ ಸೇರಿಸದ ಪತಿ

Pinterest LinkedIn Tumblr


ಬೆಂಗಳೂರು(ಜು.07): ಎಲ್ಲೆಡೆ ಕೊರೋನಾ ಪ್ರಕರಣಗಳು ಹೆಚ್ಚುತ್ತಲೇ ಇವೆ. ಕೊರೋನಾ ಅಟ್ಟಹಾಸಕ್ಕೆ ಇಡೀ ವಿಶ್ವವೇ ಬೆಚ್ಚಿಬಿದ್ದಿದೆ. ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 7 ಲಕ್ಷ ದಾಟಿದೆ. ಬೆಂಗಳೂರಿನಲ್ಲಿ ಕೊರೋನಾ ಪ್ರಕರಣಗಳ ಏರಿಕೆ ಜನರನ್ನು ಬೆಚ್ಚಿ ಬೀಳಿಸಿದೆ. ಇದೇ ಭಯದಿಂದ ಬೆಂಗಳೂರಿನಲ್ಲಿ ವ್ಯಕ್ತಿಯೊಬ್ಬ ಚಂಡೀಗರ್​​ನಿಂದ ಬಂದ ತನ್ನ ಹೆಂಡತಿಯನ್ನು ಮನೆಗೆ ಸೇರಿಸಿಲ್ಲ.

ಹೌದು, 38 ವರ್ಷದ ಮಹಿಳೆ ಕೊರೋನಾ ಲಾಕ್​ಡೌನ್​​ ಮುಗಿಸಿ 3 ತಿಂಗಳ ಬಳಿಕ ಚಂಡೀಗರ್​​ನಿಂದ ಬೆಂಗಳೂರಿಗೆ ಮರಳಿದ್ದಳು. ತನ್ನ ಗಂಡ ಹಾಗೂ ಮಗನನ್ನು ನೋಡುವ ತವಕದಲ್ಲಿದ್ದಳು. ಆದರೆ ಕೊರೋನಾ ಆತಂಕದಿಂದ ಗಂಡ ತನ್ನ ಹೆಂಡತಿಯನ್ನು ಮನೆಗೆ ಸೇರಿಸಿಕೊಳ್ಳಲು ನಿರಾಕರಿಸಿದ್ದಾನೆ.

ಕೊರೋನಾ ಲಾಕ್​ಡೌನ್​ನಿಂದಾಗಿ ಮಹಿಳೆ ತನ್ನ ಕುಟುಂಬಸ್ಥರಿಂದ ಬೇರೆಯಾಗಿ 3 ತಿಂಗಳು ಚಂಡೀಗರ್​​ನಲ್ಲಿ ವಾಸವಿದ್ದಳು. ಕೆಲವು ದಿನಗಳ ಹಿಂದೆ ಆಕೆ ತನ್ನ ಗಂಡ ಹಾಗೂ 10 ವರ್ಷದ ಮಗುವನ್ನು ನೋಡಲು ನಿರ್ಧರಿಸಿ ಬೆಂಗಳೂರಿಗೆ ಬಂದಳು. ಮಧ್ಯರಾತ್ರಿ ಸಿಲಿಕಾನ್​ ಸಿಟಿಗೆ ಬಂದ ಆಕೆಗೆ ತನ್ನ ಗಂಡನಿಂದಲೇ ಆಘಾತವೊಂದು ಕಾದಿತ್ತು. ಆತ ತನ್ನ ಹೆಂಡತಿಯನ್ನು ಮನೆಗೆ ಸೇರಿಸಿಕೊಳ್ಳಲು ಒಪ್ಪಲೇ ಇಲ್ಲ. ಬದಲಾಗಿ, ನೀನು ನಮ್ಮ ಮನೆಗೆ ಬರುವ ಮುನ್ನ ಕಡ್ಡಾಯವಾಗಿ 14 ದಿನ ಸೆಲ್ಫ್​ ಕ್ವಾರಂಟೈನ್​ನಲ್ಲಿರಬೇಕು ಎಂದು ಷರತ್ತು ವಿಧಿಸಿದ.

ಇದನ್ನು ಕೇಳಿದ ಆಕೆ ಅಸಹಾಯಕಳಾಗಿ ಪರಿಹಾರ ವನಿತಾ ಸಹಾಯವಾಣಿಗೆ ಕರೆ ಮಾಡಿದಳು. ಅದು ಮಧ್ಯರಾತ್ರಿಯಲ್ಲೇ. ಬಳಿಕ ಆಕೆಯ ಗಂಡನಿಗೆ ಕೊರೋನಾ ಕುರಿತಾಗಿ ಜನರಲ್ಲಿರುವ ತಪ್ಪು ಭಾವನೆ ಮತ್ತು ಕ್ವಾರಂಟೈನ್​ ನಿಯಮಗಳ ಬಗ್ಗೆ ತಿಳಿಹೇಳಿ ಸಲಹೆ ನೀಡಲಾಯಿತು. ಬಳಿಕ ಆತ ತನ್ನ ಹೆಂಡತಿಯನ್ನು ಮನೆಗೆ ಕರೆದುಕೊಂಡು ಹೋಗಲು ಒಪ್ಪಿಕೊಂಡ ಎನ್ನಲಾಗಿದೆ.

ಟೈಮ್ಸ್​ ಆಫ್ ಇಂಡಿಯಾದ ಪ್ರಕಾರ, ಮಹಿಳೆ ಬೆಂಗಳೂರು ನಗರ ಪೊಲೀಸರ ಬಳಿ ದೂರು ದಾಖಲಿಸಿದ್ದಳು. ಬಳಿಕ ಆಕೆಯ ಗಂಡ ಮನೆಗೆ ಕರೆದೊಯ್ದಿದ್ದಾನೆ ಎನ್ನಲಾಗಿದೆ.

ಕರ್ನಾಟಕ ಸರ್ಕಾರ ಬಿಡುಗಡೆ ಮಾಡಿರುವ ಮಾರ್ಗಸೂಚಿ ಪ್ರಕಾರ, ಮಹಾರಾಷ್ಟ್ರ ಹೊರತುಪಡಿಸಿ ಬೇರೆ ರಾಜ್ಯಗಳಿಂದ ಬರುವವರು 14 ದಿನಗಳ ಕಾಲ ಹೋಂ ಕ್ವಾರಂಟೈನ್​ನಲ್ಲಿ ಇರಬೇಕು ಎಂದು ಹೇಳಿದೆ.

Comments are closed.