ವಾಷಿಂಗ್ಟನ್: ಕೋವಿಡ್-19 ಸಮಸ್ಯೆಯಿಂದಾಗಿ ಪ್ರಸಕ್ತ ಶೈಕ್ಷಣಿಕ ಸಾಲಿನ ತರಗತಿಗಳು ಆನ್ ಲೈನ್ ನಲ್ಲಿ ನಡೆಯುವುದಾದರೆ ವಿದೇಶಗಳ ವಿದ್ಯಾರ್ಥಿಗಳನ್ನು ಇರಲು ಬಿಡುವುದಿಲ್ಲ ಎಂದು ಅಮೆರಿಕ ಹೇಳಿದೆ.
ವಲಸೆಯೇತರ ಎಫ್-1 ಮತ್ತು ಎಂ-1 ವಿದ್ಯಾರ್ಥಿಗಳು ಅಮೆರಿಕದಲ್ಲಿದ್ದುಕೊಂಡು ಸಂಪೂರ್ಣವಾಗಿ ಆನ್ ಲೈನ್ ಕೋರ್ಸ್ ಗಳಿಸಲು ಸಾಧ್ಯವಿಲ್ಲ. ತರಗತಿಗಳಿಗೆ ಹೋಗಬೇಕಾಗುತ್ತದೆ ಇಲ್ಲವೇ ಅವರು ತಮ್ಮ ದೇಶಗಳಿಗೆ ತೆರಳಬೇಕಾಗುತ್ತದೆ ಎಂದು ಅಮೆರಿಕ ವಲಸೆ ಮತ್ತು ಸುಂಕ ನಿರ್ದೇಶನಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಇಂತಹ ಆನ್ ಲೈನ್ ನಲ್ಲಿ ಕೋರ್ಸ್ ಗಳನ್ನು ತೆಗೆದುಕೊಳ್ಳುತ್ತಿರುವ ವಿದ್ಯಾರ್ಥಿಗಳು ಕೋವಿಡ್-19ನಿಂದಾಗಿ ದೇಶ ಬಿಟ್ಟು ಹೋಗಬೇಕು ಇಲ್ಲವೇ ಕಾನೂನು ಮಾನ್ಯತೆ ಇದ್ದುಕೊಂಡು ಬೇರೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅದು ತಿಳಿಸಿದೆ.
ಅಮೆರಿಕದಲ್ಲಿ ಹೊರದೇಶಗಳ ಎಫ್-1 ವೀಸಾ ಹೊಂದಿರುವ ವಿದ್ಯಾರ್ಥಿಗಳು ಶೈಕ್ಷಣಿಕ ಕೋರ್ಸ್ ಗಳನ್ನು ಮತ್ತು ಎಂ-1 ವಿದ್ಯಾರ್ಥಿಗಳು ರಜೆಯ ಕೋರ್ಸ್ ನ್ನು ಪಡೆಯುತ್ತಿರುತ್ತಾರೆ. ಆನ್ ಲೈನ್ ನಲ್ಲಿ ಕೋರ್ಸ್ ಗಳನ್ನು ಪಡೆಯುತ್ತಿರುವ ವಿದ್ಯಾರ್ಥಿಗಳ ವಿವರಗಳನ್ನು ನೀಡುವಂತೆ ವಿಶ್ವವಿದ್ಯಾಲಯಗಳಿಗೆ ಸೂಚಿಸಲಾಗಿದೆ.
ವಿರೋಧ ಪಕ್ಷದ ನಾಯಕರು ಸರ್ಕಾರದ ಈ ನಿರ್ಧಾರವನ್ನು ಟೀಕಿಸಿದ್ದಾರೆ. ಸೆನೆಟರ್ ಬರ್ನಿ ಸ್ಯಾಂಡರ್ಸ್, ಶ್ವೇತಭವನದ ಕ್ರೂರ ನಿರ್ಧಾರಗಳಿಗೆ ಮಿತಿ ಇಲ್ಲದಾಗಿದೆ.ಕೋವಿಡ್-19 ಪರಿಸ್ಥಿತಿಯಲ್ಲಿ ತರಗತಿಗಳಿಗೆ ಹೋಗಿ ಪಾಠ ಕೇಳುವುದು ಕಷ್ಟ, ಹಾಗೆಂದು ಆನ್ ಲೈನ್ ನಲ್ಲಿ ಕೋರ್ಸ್ ಪಡೆಯೋಣವೆಂದರೆ ದೇಶ ಬಿಟ್ಟು ಹೋಗಿ ಎನ್ನುತ್ತಿದ್ದಾರೆ, ಈ ಸಂದಿಗ್ಧ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳು ನಿರ್ಧಾರ ಕೈಗೊಳ್ಳುವುದು ಹೇಗೆ ಎಂದು ಕೇಳಿದ್ದಾರೆ.
ಅಮೆರಿಕಾದ ಬಹುತೇಕ ವಿಶ್ವವಿದ್ಯಾಲಯಗಳು, ಕಾಲೇಜುಗಳು ಈ ವರ್ಷದ ಸೆಮಿಸ್ಟರ್ ಯಾವ ರೀತಿ ನಡೆಯಲಿದೆ ಎಂದು ಇನ್ನೂ ತಮ್ಮ ಯೋಜನೆಗಳನ್ನು ತಿಳಿಸಿಲ್ಲ.
Comments are closed.