ಚೀನಾ ಭಾರತದ ಯಾವುದೇ ಭೂ ಭಾಗವನ್ನು ಕಬಳಿಸಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟೀಕರಣ ನೀಡಿರುವ ಬೆನ್ನಿಗೆ ಮತ್ತೊಮ್ಮೆ ತಗಾದೆ ತೆಗೆದಿರುವ ಚೀನಾ, ಗಾಲ್ವಾನ್ ಕಣಿವೆಯು ಚೀನಾ-ಭಾರತ ಗಡಿಯ ವಾಸ್ತವಿಕ ನಿಯಂತ್ರಣ ರೇಖೆಯ ಚೀನಾದ ಪಶ್ಚಿಮ ಭಾಗದಲ್ಲಿದ್ದು, ಅದು ನಮ್ಮದೇ ದೇಶದ ಭೂ ಭಾಗ ಎಂದು ಹೇಳುವ ಮೂಲಕ ಚೀನಾ ಸರ್ಕಾರ ಉರಿಯುವ ಕೆಂಡಕ್ಕೆ ಮತ್ತೆ ತುಪ್ಪ ಸುರಿಯುವ ಕೆಲಸವನ್ನು ಮಾಡುತ್ತಿದೆ.
ಈ ಕುರಿತು ಹೇಳಿಕೆ ನೀಡಿರುವ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಜಾವೋ ಲಿಜಿಯಾನ್, “ಪ್ರಸ್ತುತ ಗಾಲ್ವಾನ್ ಕಣಿವೆ ಭಾಗದಲ್ಲಿ ಭಾರತ ಮತ್ತು ಚೀನಾ ನಡುವಿನ ಬಿಕ್ಕಟ್ಟಿಗೆ ಕಾರಣವಾಗಿರುವ ಪ್ರದೇಶ ಚೀನಾಗೆ ಸೇರಿದ್ದು ಎಂದು ಬಹಿರಂಗವಾಗಿಯೇ ಹೇಳುವ ಮೂಲಕ ಮತ್ತೊಮ್ಮೆ ಭಾರತವನ್ನು ಕೆಣಕಿದ್ದಾರೆ.
ಅಲ್ಲದೆ, “ಹಲವು ವರ್ಷಗಳಿಂದ ಚೀನಾ ಪಡೆಗಳು ಈ ಪ್ರದೇಶದಲ್ಲಿ ಗಸ್ತು ತಿರುಗುತ್ತಿವೆ, ಕರ್ತವ್ಯ ನಿರ್ವಹಿಸುತ್ತಿವೆ. ಆದರೆ 2020ರ ಏಪ್ರಿಲ್ ತಿಂಗಳಿಂದ ಭಾರತೀಯ ಪಡೆಗಳು ಗಾಲ್ವಾನ್ ಕಣಿವೆಯ ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ ಏಕಪಕ್ಷೀಯವಾಗಿ ಮತ್ತು ನಿರಂತರವಾಗಿ ರಸ್ತೆ, ಸೇತುವೆ ಸೇರಿದಂತೆ ಇತರೆ ಸೌಲಭ್ಯಗಳನ್ನು ನಿರ್ಮಿಸಿವೆ. ಇದು ಅಕ್ಷಮ್ಯ ಎಂದು ಲಿಜಿಯಾನ್” ಆರೋಪಿಸಿದ್ದಾರೆ.
“ಭಾರತದ ಸೇನೆ ವಾಸ್ತವಿಕ ನಿಯಂತ್ರಣ ರೇಖೆ ದಾಟಲು ಮತ್ತು ಪ್ರಚೋದನೆಗೆ ಮತ್ತಷ್ಟು ಕುಮ್ಮಕ್ಕು ನೀಡಿದೆ. ಮೇ 6ರಂದು ಬೆಳಗ್ಗೆ ಮತ್ತು ರಾತ್ರಿಯ ಸಮಯದಲ್ಲಿ ವಾಸ್ತವಿಕ ನಿಯಂತ್ರಣ ರೇಖೆ ದಾಟಿ ಚೀನಾದ ಭೂಪ್ರದೇಶಕ್ಕೆ ಅತಿಕ್ರಮಣ ಮಾಡಿರುವ ಭಾರತದ ಗಡಿ ಭದ್ರತಾ ಪಡೆಗಳು ಕೋಟೆ ಮತ್ತು ಬ್ಯಾರಿಕೇಡ್ ಗಳನ್ನು ನಿರ್ಮಿಸಿವೆ.
ಇದರಿಂದ ಚೀನಾ ಯೋಧರು ಗಸ್ತು ತಿರುಗಲು ಅಡ್ಡಿಯಾಗಿದೆ. ನಿಯಂತ್ರಣ ಮತ್ತು ನಿರ್ವಹಣೆಯ ಯಥಾಸ್ಥಿತಿಯನ್ನು ಏಕಪಕ್ಷೀಯವಾಗಿ ಬದಲಾಯಿಸುವ ಪ್ರಯತ್ನದಲ್ಲಿ ಭಾರತೀಯ ಪಡೆಗಳು ಉದ್ದೇಶಪೂರಕವಾಗಿ ಪ್ರಚೋದನೆ ಮಾಡಿದ್ದಾರೆ” ಎಂದು ಅವರು ಆರೋಪಗಳ ಪಟ್ಟಿ ಮಾಡಿದ್ದಾರೆ.
ಕಳೆದ ಸೋಮವಾರ ರಾತ್ರಿ ಭಾರತ ಮತ್ತು ಚೀನಾ ಸೇನೆಯ ನಡುವೆ ಘರ್ಷಣೆ ನಡೆದಿದ್ದು, ಈ ಘರ್ಷಣೆಯಲ್ಲಿ ಭಾರತದ 20 ಸೈನಿಕರು ಮೃತಪಟ್ಟಿದ್ದಾರೆ. ಈ ಅಮಾನವೀಯ ಘಟನೆಗೆ ಅಮೆರಿಕ, ಇಂಗ್ಲೆಂಡ್, ಫ್ರಾನ್ಸ್, ಜರ್ಮನಿ, ಜಪಾನ್ ಸೇರಿದಂತೆ ಹಲವು ದೇಶಗಳು ಖಂಡನೆ ಸೂಚಿಸಿರುವ ಬೆನ್ನಿಗೆ ಚೀನಾ ದೇಶದಲ್ಲಿ ಮತ್ತೆ ಇಂತಹದ್ದೊಂದು ಹೇಳಿಕೆ ಹೊರ ಬಂದಿರುವುದು ಅಂತಾರಾಷ್ಟ್ರೀಯ ಸಮುದಾಯದ ನಡುವೆ ಕೆಂಗಣ್ಣಿಗೆ ಗುರಿಯಾಗಿದೆ.
Comments are closed.