ಅಂತರಾಷ್ಟ್ರೀಯ

ಲಡಾಖ್ ನ ಗಾಲ್ವಾನ್ ಕಣಿವೆಯ ಸಾರ್ವಭೌಮತ್ವ ನಮಗೆ ಸೇರಿದ್ದು: ಚೀನಾ

Pinterest LinkedIn Tumblr


ಬೀಜಿಂಗ್: ತೀವ್ರ ಸಂಘರ್ಷಕ್ಕೆ ಕಾರಣವಾಗಿದ್ದ ಲಡಾಖ್ ನ ಗಾಲ್ವಾನ್ ಕಣಿವೆಯ ಮೇಲೆ ಚೀನಾ ಸೈನ್ಯದ ಸಾರ್ವಭೌಮತ್ವದ ಹಕ್ಕನ್ನು ಭಾರತ ಕಸಿದುಕೊಂಡ ನಂತರ ಮತ್ತು ಎಲ್ಎಸಿ ಬಳಿ ತನ್ನ ಚಟುವಟಿಕೆಗಳನ್ನು ಸೀಮಿತಗೊಳಿಸುವಂತೆ ಭಾರತ ಸೂಚಿಸಿದ ಮಾರನೇ ದಿನವೇ, ಚೀನಾ ವಿದೇಶಾಂಗ ಸಚಿವಾಲಯ ಗಾಲ್ವಾನ್ ಕಣಿವೆ ತನ್ನದು ಎಂದು ಹೇಳಿದೆ.

ಗಾಲ್ವಾನ್ ಕಣಿವೆಯ ಸಾರ್ವಭೌಮತ್ವ ನಮಗೆ ಸೇರಿದ್ದು ಎಂಬ ಚೀನಾ ಹೇಳಿಕೆಯನ್ನು ಭಾರತ ಈಗಾಗಲೇ ಸ್ಪಷ್ಟವಾಗಿ ತಳ್ಳಿಹಾಕಿದ್ದು, ಅಂತಹ “ಉತ್ಪ್ರೇಕ್ಷಿತ” ಮತ್ತು “ಒಪ್ಪಲಾಗದ” ಹಕ್ಕುಗಳು ಜೂನ್ 6 ರಂದು ಉನ್ನತ ಮಟ್ಟದ ಮಿಲಿಟರಿ ಮಾತುಕತೆಯ ಒಪ್ಪಂದಕ್ಕೆ ವಿರುದ್ಧವಾಗಿವೆ ಎಂದು ಹೇಳಿದೆ.

ಜೂನ್ 15 ರಂದು ಲಡಾಖ್ ನಲ್ಲಿ ನಡೆದ ಮಲ್ಲಯುದ್ಧಕ್ಕೆ ಮತ್ತೆ ಭಾರತವೇ ಕಾರಣ ಎಂದು ಆರೋಪಿಸಿರುವ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಜಾವೋ ಲಿಜಿಯಾನ್, “ಗಾಲ್ವಾನ್ ಕಣಿವೆ ಚೀನಾ-ಭಾರತ ಗಡಿಯ ಪಶ್ಚಿಮ ಭಾಗದಲ್ಲಿ ವಾಸ್ತವಿಕ ಗಡಿ ನಿಯಂತ್ರಣ ರೇಖೆ(ಎಲ್ಎಸಿ)ಯ ಚೀನಾದ ಬದಿಯಲ್ಲಿದೆ. ಹಲವು ವರ್ಷಗಳಿಂದ ಚೀನಾದ ಗಡಿ ಕಾವಲುಗಾರರು ಈ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದಾರೆ ಮತ್ತು ಸಾಮಾನ್ಯವಾಗಿ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ” ಎಂದು ಹೇಳಿದ್ದಾರೆ.

ಗಾಲ್ವಾನ್ ಕಣಿವೆಯ ಸದ್ಯದ ಪರಿಸ್ಥಿತಿಯನ್ನು ಎದುರಿಸಲು ಎರಡನೇ ಕಮಾಂಡರ್ ಮಟ್ಟದ ಸಭೆ ಆದಷ್ಟು ಬೇಗ ಆಗಬೇಕು ಲಿಜಿಯಾನ್ ಹೇಳಿದ್ದಾರೆ.

ರಾಜತಾಂತ್ರಿಕ ಮತ್ತು ಮಿಲಿಟರಿ ಮಾರ್ಗಗಳ ಮೂಲಕ ಪರಿಸ್ಥಿತಿಯನ್ನು ತಿಳಿಗೊಳಿಸುವ ಕುರಿತು ಎರಡೂ ಕಡೆಯವರು ಮಾತುಕತೆ ನಡೆಸುತ್ತಿದ್ದಾರೆ ಎಂದಿದ್ದಾರೆ.

Comments are closed.