ಅಂತರಾಷ್ಟ್ರೀಯ

ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಇನ್ನು ಖಾಯಂ ಅಲ್ಲದ ಸದಸ್ಯ ರಾಷ್ಟ್ರವಾಗಿ ಭಾರತ ಆಯ್ಕೆ

Pinterest LinkedIn Tumblr

ವಿಶ್ವಸಂಸ್ಥೆ: ಮತ್ತೊಮ್ಮೆ ಭಾರತದ ಕನಸು ನನಸಾಗಿದೆ. ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಇನ್ನು ಎರಡು ವರ್ಷಗಳ ಅವಧಿಗೆ ಖಾಯಂ ಅಲ್ಲದ ಸದಸ್ಯ ರಾಷ್ಟ್ರವಾಗಿ ಭಾರತ ಆಯ್ಕೆಯಾಗಿದೆ. 193 ಸದಸ್ಯ ರಾಷ್ಟ್ರಗಳನ್ನು ಹೊಂದಿರುವ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತದ ಪರವಾಗಿ 184 ಮತಗಳು ಲಭಿಸಿವೆ.

ಭಾರತದ ಜೊತೆಗೆ ಐರ್ಲೆಂಡ್, ಮೆಕ್ಸಿಕೊ ಮತ್ತು ನಾರ್ವೆ ದೇಶಗಳು ಸಹ ನಿನ್ನೆ ನಡೆದ ಚುನಾವಣೆಯಲ್ಲಿ ಗೆಲುವು ಸಾಧಿಸಿವೆ.
ನಿನ್ನೆ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ನಡೆದ ಚುನಾವಣೆಯಲ್ಲಿ 192 ಸದಸ್ಯ ರಾಷ್ಟ್ರಗಳು ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದವು. ಭಾರತಕ್ಕೆ ಖಾಯಂರಹಿತ ಸದಸ್ಯ ರಾಷ್ಟ್ರದ ಸ್ಥಾನಮಾನ ಸಿಗಲು 128 ರಾಷ್ಟ್ರಗಳ ಬೆಂಬಲ ಬೇಕಾಗಿತ್ತು. ಭಾರತದ ಪರವಾಗಿ 184 ರಾಷ್ಟ್ರಗಳು ಮತ ಹಾಕಿದವು. ಚುನಾವಣೆಯಲ್ಲಿ ಖಾಯಂ ರಹಿತ ಸದಸ್ಯ ರಾಷ್ಟ್ರ ಸ್ಥಾನಮಾನ ಬಯಸಿದ್ದ ಕೆನಡಾ ಸೋಲು ಕಂಡಿತು.

2021-22ನೇ ಅವಧಿಗೆ ವಿಶ್ವಸಂಸ್ಥೆ ಭದ್ರತಾ ಮಂಡಳಿಗೆ ಭಾರತವನ್ನು ಇತರ ಸದಸ್ಯ ರಾಷ್ಟ್ರಗಳು ಆಯ್ಕೆ ಮಾಡಿವೆ. 192 ರಾಷ್ಟ್ರಗಳ ಪೈಕಿ 184 ದೇಶಗಳು ಭಾರತದ ಪರ ಮತ ಹಾಕುವ ಮೂಲಕ ಅಭೂತಪೂರ್ವ ಯಶಸ್ಸು ಸಾಧಿಸಿದೆ ಎಂದು ವಿಶ್ವಸಂಸ್ಥೆಯ ಭಾರತದ ಶಾಶ್ವತ ಆಯೋಗ ಟ್ವೀಟ್ ಮೂಲಕ ಪ್ರಕಟಿಸಿದೆ.

ಈ ಮೂಲಕ ಭಾರತ, ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಶಾಶ್ವತ ಸದಸ್ಯ ರಾಷ್ಟ್ರಗಳಾದ ಚೀನಾ, ಫ್ರಾನ್ಸ್, ರಷ್ಯಾ, ಇಂಗ್ಲೆಂಡ್ ಮತ್ತು ಅಮೆರಿಕಾದ ಸಾಲಿನಲ್ಲಿ ಇನ್ನೆರಡು ವರ್ಷಗಳ ಕಾಲ ಕುಳಿತುಕೊಳ್ಳಲಿದೆ. ಭಾರತದ ಸಾಲಿನಲ್ಲಿ ಖಾಯಂ ಅಲ್ಲದ ರಾಷ್ಟ್ರಗಳಾಗಿ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಎಸ್ಟೋನಿಯಾ, ನೈಜರ್, ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್, ಟುನೀಶಿಯಾ ಮತ್ತು ವಿಯೆಟ್ನಾಂ ದೇಶಗಳೂ ಕೂಡ ಇವೆ.

ಈ ಹಿಂದೆ ಕೂಡ ಅಂದರೆ 1950-51, 1967-68, 1972-73, 1977-78, 1984-85, 1991-92 ಮತ್ತು 2011-12ರಲ್ಲಿ ಸಹ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಶಾಶ್ವತ ರಹಿತ ಸದಸ್ಯ ರಾಷ್ಟ್ರವಾಗಿ ಭಾರತ ಆಯ್ಕೆಯಾಗಿತ್ತು.

ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ 5 ಶಾಶ್ವತ ಸದಸ್ಯ ರಾಷ್ಟ್ರಗಳು ಮತ್ತು 10 ಶಾಶ್ವತ ರಹಿತ ಸದಸ್ಯ ರಾಷ್ಟ್ರಗಳು ಇವೆ.

Comments are closed.