ಅಂತರಾಷ್ಟ್ರೀಯ

ಮಾರಕ ಕೊರೋನಾ ಸೋಂಕು ಕಣ್ಣುಗಳಿಂದ ತಗಲುವ ಸಾಧ್ಯತೆ: ಅಮೇರಿಕ ವೈದ್ಯರ ಹೇಳಿಕೆ

Pinterest LinkedIn Tumblr


ವಾಷಿಂಗ್ಟನ್: ಜಗತ್ತಿನಾದ್ಯಂತ ಆತಂಕಕ್ಕೆ ಕಾರಣವಾಗಿರುವ ಕೊರೋನಾವೈರಸ್ ಸಾಂಕ್ರಾಮಿಕ ರೋಗ ಕಣ್ಣುಗಳು ಅಥವಾ ಕಿವಿಗಳ ಮೂಲಕ ತಗಲುವುದೇ ಎಂಬ ಪ್ರಶ್ನೆ ಜನರನ್ನು ಕಾಡತೊಡಗಿದೆ. ಮಾರಕ ಸೋಂಕು ಕಣ್ಣುಗಳಿಂದ ತಗಲುವ ಸಾಧ್ಯತೆ ಇದೆ. ಆದರೆ, ಕಿವಿಗಳ ಮೂಲಕ ಬರುವುದಿಲ್ಲ ಎಂದು ವೈದ್ಯರು ಹೇಳುತ್ತಾರೆ.

ಸೋಂಕಿರುವ ವ್ಯಕ್ತಿಗಳು ಕೆಮ್ಮಿದಾಗ ಅಥವಾ ಸೀನುವಾಗ ಸೋಂಕು ಕಣ್ಣಿನ ಮೂಲಕ ತಗುಲುವ ಅಪಾಯವಿರುತ್ತದೆ. ವೈರಸ್ ಇರುವ ಕೈಗಳಿಂದ ಕಣ್ಣುಗಳನ್ನು ಉಜ್ಜಿದಾಗಲೂ ಸೋಂಕು ಬರಬಹುದು, ಸೋಂಕಿತ ವ್ಯಕ್ತಿಯ ಕಣ್ಣೀರಿನಿಂದಲೂ ವೈರಸ್ ಹರಡಬಹುದು.

ಆಗಾಗ್ಗೆ ಕೈ ತೊಳೆಯುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಮುಖಗವಸು ಧರಿಸುವ ಮೂಲಕ ಕಣ್ಣುಗಳು ಸೇರಿದಂತೆ ಬೇರೆ ಯಾವುದೇ ರೀತಿಯಲ್ಲೂ ಸೋಂಕು ಹರಡದಂತೆ ಮುಂಜಾಗ್ರತೆ ವಹಿಸಬೇಕಾಗಿದೆ.

ಅಮೆರಿಕಾದ ನೇತ್ರ ವಿಜ್ಞಾನ ಅಕಾಡೆಮಿ ಪ್ರಕಾರ, ಕನ್ನಡಕವು ಹೆಚ್ಚಿನ ರಕ್ಷಣೆಯನ್ನು ನೀಡುತ್ತದೆ. ಸೋಂಕಿತ ರೋಗಿಗಳಿಗೆ ಚಿಕಿತ್ಸೆ ನೀಡುವಾಗ ಸುರಕ್ಷತಾ ಕನ್ನಡಕಗಳನ್ನು ಬಳಸಲು ಆರೋಗ್ಯ ಕಾರ್ಯಕರ್ತರಿಗೆ ಸೂಚಿಸಲಾಗಿದೆ.

ಮತ್ತೊಂದೆಡೆ ಕಿವಿಗಳ ಮೂಲಕ ಕೋವಿಡ್-19 ಸೋಂಕು ಹರಡುವುದಿಲ್ಲ ಎಂದು ಅಮೆರಿಕಾದ ಕಾಯಿಲೆಗಳ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಸೆಂಟರ್ ತಿಳಿಸಿದೆ.

ಹೊರಗಿನ ಕಿವಿಯ ಚರ್ಮವು ಸಾಮಾನ್ಯ ಚರ್ಮದಂತೆಯೇ ಇರುತ್ತದೆ. ಇದು ಬಾಯಿ, ಮೂಗಿನಲ್ಲಿರುವ ಹೊರಗಿನ ಚರ್ಮಕ್ಕಿಂತ ಭಿನ್ನವಾಗಿರುವ ಮೂಲಕ ತಡೆಗೋಡೆ ಸೃಷ್ಟಿಸುತ್ತದೆ. ಆದ್ದರಿಂದ ವೈರಸ್‌ ಪ್ರವೇಶಿಸಲು ಕಷ್ಟವಾಗುತ್ತದೆ ಎಂದು ಬೋಸ್ಟನ್‌ನ ಮ್ಯಾಸಾಚೂಸೆಟ್ಸ್ ಕಣ್ಣು ಮತ್ತು ಕಿವಿಯ ವೈದ್ಯ ಡಾ.ಬೆಂಜಮಿನ್ ಬ್ಲಿಯರ್ ತಿಳಿಸಿದ್ದಾರೆ.

Comments are closed.