ಅಂತರಾಷ್ಟ್ರೀಯ

ಕೊರೋನಾಗೆ ಹೈಡ್ರಾಕ್ಸಿಕ್ಲೋರಕ್ವಿನ್ ನಿಷ್ಪ್ರಯೋಜಕ: ಸಂಶೋಧನೆ ಕೈಬಿಟ್ಟ ಆಕ್ಸ್ ಫರ್ಡ್ ವಿಜ್ಞಾನಿಗಳು!

Pinterest LinkedIn Tumblr


ಲಂಡನ್: ಮಾರಕ ಕೊರೋನಾ ವೈರಸ್ ಚಿಕಿತ್ಸೆಯಲ್ಲಿ ಪ್ರಮುಖಪಾತ್ರವಹಿಸುತ್ತದೆ ಎಂದು ಹೇಳಲಾಗುತ್ತಿದ್ದ ಹೈಡ್ರಾಕ್ಸಿಕ್ಲೋರಕ್ವಿನ್ (HCQ) ಔಷಧದಿಂದ ಯಾವುದೇ ಪ್ರಯೋಜನವಿಲ್ಲ ಎಂಬ ನಿರ್ಧಾರಕ್ಕೆ ಬಂದಿರುವ ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಈ ಕುರಿತ ಸಂಶೋಧನೆಯನ್ನೇ ಕೈಬಿಟ್ಟಿದೆ.

ಹೌದು… ಈ ಹಿಂದೆ ಕೋವಿಡ್-19 ಚಿಕಿತ್ಸೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ ಬಳಿಕ HCQ ಕುರಿತ ಬೇಡಿಕೆ ಮತ್ತು ಅದರ ಮೇಲಿನ ಸಂಶೋಧನೆಗಳು ವ್ಯಾಪಕಗೊಂಡಿತ್ತು. ಸ್ವತಃ ಅಮೆರಿಕ ಭಾರತದ ಮೇಲೆ ಒತ್ತಡದ ತಂತ್ರ ಹೇರಿ ಭಾರಿ ಪ್ರಮಾಣದ HCQ ಮಾತ್ರೆಗಳನ್ನು ಆಮದು ಮಾಡಿಕೊಂಡಿತ್ತು. ಆದರೆ ಇದೀಗ ಇದೇ ಮಾತ್ರೆಗಳ ಮೇಲಿನ ಸಂಶೋಧನೆಯನ್ನು ನಿಷ್ಪ್ರಯೋಜಕ ಎಂದು ಹೇಳಿ ಬ್ರಿಟಿಷ್ ವಿಜ್ಞಾನಿಗಳು ಈ ಕುರಿತಾದ ಪ್ರಮುಖ ಸಂಶೋಧನೆ (ಡ್ರಗ್ ಟ್ರಯಲ್) ಸ್ಥಗಿತಗೊಳಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ರಿಕವರಿ ಟ್ರಯಲ್ ಸಹಮುಖ್ಯಸ್ಥರಾಗಿರುವ ಆಕ್ಸ್ ಫರ್ಡ್ ವಿವಿಯ ಮಾರ್ಟಿನ್ ಲಂಡ್ರೆ ಅವರು, ‘ಇದು ಕೋವಿಡ್-19 ಚಿಕಿತ್ಸೆಗೆ ಉಪಯುಕ್ತವಲ್ಲ; ಇದು ಕೆಲಸ ಮಾಡದು. ಈ ಔಷಧಿಯ ಉಪಯುಕ್ತತೆಯ ಬಗ್ಗೆ ಭಾರೀ ನಿರೀಕ್ಷೆಗಳಿದ್ದರೂ ಈ ಕುರಿತಂತೆ ಸಂಶೋಧನೆ ಮತ್ತು ಪ್ರಯೋಗದಿಂದ ಯಾವುದೇ ದೊಡ್ಡ ಆಧಾರ ದೊರಕಿಲ್ಲ. ಈ ಔಷಧಿ ಪ್ರಯೋಗವು ಕೋವಿಡ್-19 ರೋಗಿಯ ಮರಣ ಸಾಧ್ಯತೆ ಅಪಾಯವನ್ನು ಕಡಿಮೆಗೊಳಿಸುವುದಿಲ್ಲ ಎಂದು ಆರಂಭಿಕ ಸಂಶೋಧನೆಯಿಂದ ತಿಳಿದು ಬಂದಿದೆ ಎಂದು ಅವರು ಹೇಳಿದ್ದಾರೆ.

ಇನ್ನು ಈ ಪ್ರಯೋಗದ ಅಂಗವಾಗಿ 1,542 ಕೋವಿಡ್ ರೋಗಿಗಳಿಗೆ ಹೈಡ್ರೋಕ್ಸಿಕ್ಲೊರೊಕ್ವಿನ್ ನೀಡಿ ಈ ಔಷಧಿ ಪಡೆಯದ 3,132 ರೋಗಿಗಳ ಜತೆಗೆ ಹೋಲಿಸಿದಾಗ 28 ದಿನಗಳ ನಂತರ ಸಾವಿನ ಪ್ರಮಾಣ, ಆಸ್ಪತ್ರೆಯಲ್ಲಿದ್ದ ಅವಧಿಯಲ್ಲಿ ಯಾವುದೇ ಮಹತ್ವದ ವ್ಯತ್ಯಾಸ ಗಮನಕ್ಕೆ ಬಂದಿಲ್ಲ. ಇತ್ತೀಚೆಗೆ ಮಿನ್ನೆಸೊಟ ವಿವಿ ಕೂಡ ಈ ಔಷಧಿ ಉಪಯಕ್ತವಾಗಿಲ್ಲ ಎಂದು ಪ್ರಯೋಗಗಳಿಂದ ತಿಳಿದು ಬಂದಿದೆ ಎಂದು ಹೇಳಿತ್ತು ಎಂದು ಅವರು ಹೇಳಿದ್ದಾರೆ.

Comments are closed.