ಅಂತರಾಷ್ಟ್ರೀಯ

ಜಾಗತಿಕವಾಗಿ ಟಾಪ್ 5 ಸ್ಮಾರ್ಟ್ ಫೋನ್ ಸಂಸ್ಥೆಗಳ ಮಾರಾಟ ಕುಸಿತ

Pinterest LinkedIn Tumblr


ಜಾಗತಿಕವಾಗಿ ಸ್ಮಾರ್ಟ್ ಫೋನ್ ಗಳ ಮಾರಾಟ 2020 ರ ಮೊದಲ ತ್ರೈಮಾಸಿಕದಲ್ಲಿ ಶೇ.20 ರಷ್ಟು ಕುಸಿತ ಕಂಡಿದೆ.

ಅಮೆರಿಕದಲ್ಲಿರುವ ವಿವಿಧ ಕಂಪೆನಿಗಳ ಬಗ್ಗೆ ಅಧ್ಯಯನ ನಡೆಸುವ ಗಾರ್ಟ್‌ನರ್‌ ಸಂಸ್ಥೆಯ ಮಾಹಿತಿಯ ಪ್ರಕಾರ ಕೊರೋನಾ ಉಂಟುಮಾಡಿದ ಅಸ್ಥಿರತೆಗಳ ಪರಿಣಾಮವಾಗಿ ಮೊದಲ ತ್ರೈಮಾಸಿಕದಲ್ಲಿ ಜನರು ತೀರಾ ಅಗತ್ಯವಿಲ್ಲದ ಉತ್ಪನ್ನಗಳ ಮೇಲೆ ಖರ್ಚು ಮಾಡುವುದನ್ನು ಕಡಿಮೆ ಮಾಡಿರುವುದರಿಂದ ಸ್ಮಾರ್ಟ್ ಫೋನ್ ಮಾರಾಟದಲ್ಲಿ ಶೇ.20 ರಷ್ಟು ಕುಸಿತ ಕಂಡಿದೆ.

2020 ರ ಮೊದಲ ತ್ರೈಮಾಸಿಕದಲ್ಲಿ ಎಲ್ಲಾ ಟಾಪ್ 5 ಸ್ಮಾರ್ಟ್ ಫೋನ್ ಸಂಸ್ಥೆಗಳ ಮಾರಾಟ ಕುಸಿತ ಕಂಡಿದ್ದರೆ, ಚೀನಾದ ಶಿಯೋಮಿ ಸಂಸ್ಥೆಯ ಮೊಬೈಲ್ ಗಳ ಮಾರಾಟದಲ್ಲಿ ಶೇ.1.4 ರಷ್ಟು ಏರಿಕೆಯಾಗಿದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ರೆಡ್ ಮೀ ಮೊಬೈಲ್ ಗಳ ಅತಿ ಹೆಚ್ಚು ಮಾರಾಟ ಹಾಗೂ ಆನ್ ಲೈನ್ ಮಾರಾಟಗಳಿಗೆ ನೀಡಿದ ಆದ್ಯತೆಯ ಪರಿಣಾಮವಾಗಿ ಶಿಯೋಮಿ ಸಂಸ್ಥೆಯ ಮೊಬೈಲ್ ಗಳ ಮಾರಾಟ ಏರಿಕೆಯಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಚೀನಾದಲ್ಲಿ ಫ್ಯಾಕ್ಟರಿಗಳ ಸ್ಥಗಿತದಿಂದಾಗಿ ಚೀನಾದ ಮುಂಚೂಣಿಯಲ್ಲಿರುವ ಉತ್ಪಾದಕರು ಹಾಗೂ ಆಪಲ್ ಸಂಸ್ಥೆಗೆ ತೀವ್ರ ಹೊಡೆತ ಬಿದ್ದಿದ. ಇದರ ಪರಿಣಾಮ ಜಾಗತಿಕವಾಗಿಯೂ ಉಂಟಾಗಿದೆ.

ಸ್ಯಾಮ್ ಸಂಗ್ ನ ಸ್ಮಾರ್ಟ್ ಫೋನ್ ಗಳ ಮಾರಾಟದಲ್ಲಿ ಶೇ.22.7 ಕುಸಿತ ಕಂಡಿದ್ದು, ಒಟ್ಟಾರೆ ಮಾರುಕಟ್ಟೆಯಲ್ಲಿ ಶೇ.18.5 ರಷ್ಟು ಪಾಲು ಹೊಂದುವ ಮೂಲಕ ಈಗಲೂ ಸಹ ನಂ.1 ಸ್ಥಾನದಲ್ಲಿದೆ. ಆಪಲ್ ಐಫೋನ್ ಗಳ ಮಾರಾಟದಲ್ಲಿ ಶೇ.8.2 ರಷ್ಟು ಕುಸಿತ ಕಂಡಿದ್ದು, 2020 ರ ಮೊದಲ ತ್ರೈಮಾಸಿಕದ ವೇಳೆಗೆ 41 ಮಿಲಿಯನ್ ಯುನಿಟ್ ಗಳು ಮಾರಾಟವಾಗಿವೆ. ಇನ್ನು ಓಪ್ಪೋ ಸ್ಮಾರ್ಟ್ ಫೋನ್ ಗಳ ಮಾರಾಟದಲ್ಲಿ ಶೇ.19.1 ರಷ್ಟು ಕುಸಿತ ದಾಖಲಾಗಿದೆ.

Comments are closed.