ಅಂತರಾಷ್ಟ್ರೀಯ

ಶ್ವೇತಭವನದ ಮುಂದೆ ಭಾರೀ ಪ್ರತಿಭಟನೆ: ಗುಪ್ತ ಬಂಕರ್‌ನಲ್ಲಿ ಟ್ರಂಪ್‌ರನ್ನು ಮುಚ್ಚಿಟ್ಟ ಸಿಬ್ಬಂದಿ!

Pinterest LinkedIn Tumblr


ವಾಷಿಂಗ್ಟನ್: ಅಮೆರಿಕದಲ್ಲಿ ಜನಾಂಗೀಯ ಪ್ರತಿಭಟನೆ ವ್ಯಾಪಕವಾಗುತ್ತಿದ್ದು, ರಾಜಧಾನಿ ವಾಷಿಂಗ್ಟನ್ ಡಿಸಿಯಲ್ಲಿ ಭಾರೀ ಪ್ರತಿಭಟನೆಗಳು ನಡೆಯುತ್ತಿವೆ.

ಅಮೆರಿಕದ ಅಧ್ಯಕ್ಷರ ಅಧಿಕೃತ ಕಚೇರಿ ಶ್ವೇತಭವನದ ಮುಂದೆಯೂ ಭಾರೀ ಪ್ರತಿಭಟನೆ ನಡೆದಿದ್ದು, ಈ ವೇಳೆ ಶ್ವೇತಭವನದ ಮುಂದೆ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಭಾರೀ ಸಂಖ್ಯೆಯಲ್ಲಿ ಸೇರಿದ ಪ್ರತಿಭಟನಾಕಾರರ ಗುಂಪು, ಡೊನಾಲ್ಡ್ ಟ್ರಂಪ್ ವಿರುದ್ಧ ಘೋಷಣೆ ಕೂಗಿದರಲ್ಲದೇ ಶ್ವೇತಭವನದ ಸಮೀಪ ಧಾವಿಸಿ ಆತಂಕ ಸೃಷ್ಟಿಸಿತ್ತು.

ಈ ವೇಳೆ ಮುಂಜಾಗ್ರತಾ ಕ್ರಮವಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಶ್ವೇತಭವನದ ಸಿಬ್ಬಂದಿ ಭೂಗತ ಬಂಕರ್‌ನಲ್ಲಿ ಕೆಲಕಾಲ ಸುರಕ್ಷಿತವಾಗಿ ಇಟ್ಟಿದ್ದರು ಎನ್ನಲಾಗಿದೆ. ಒಂದು ಗಂಟೆಗೂ ಹೆಚ್ಚುಕಾಲ ಟ್ರಂಪ್ ಈ ಬಂಕರ್‌ನಲ್ಲೇ ಉಳಿದಿದ್ದರು ಎಂದು ಅಂದಾಜಿಸಲಾಗಿದೆ.

ವಿಪತ್ತಿನ ಪರಿಸ್ಥಿತಿಯಲ್ಲಿ ಬಳಕೆಗೆಂದೇ ನಿರ್ಮಿಸಲಾದ ಭೂಗತ್ ಬಂಕರ್‌ನಲ್ಲಿ ಡೊನಾಲ್ಡ್ ಟ್ರಂಪ್ ಅವರನ್ನು ಕೆಲಕಾಲ ಇಡಲಾಗಿತ್ತು ಎಂದು ಶ್ವೇತಭವನದ ಸಿಬ್ಬಂದಿ ಸ್ಪಷ್ಟಪಡಿಸಿದ್ದಾರೆ.

ಶ್ವೇತಭವನದ ಮುಂದೆ ಭಾರೀ ಪ್ರತಿಭಟನೆಗಳು ನಡೆಯುತ್ತಿದ್ದ ವೇಳೆ, ಅಧ್ಯಕ್ಷರ ಸುರಕ್ಷತೆ ದೃಷ್ಟಿಯಿಂದ ಟ್ರಂಪ್ ಅವರನ್ನು ಗುಪ್ತ ಬಂಕರ್‌ನಲ್ಲಿ ಮುಚ್ಚಿಡಲಾಗಿತ್ತು ಎಂದು ಹೇಳಲಾಗಿದೆ.

ಇನ್ನು ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ ಸಾವು ಪ್ರಕರಣದಿಂದಾಗಿ ಅಮೆರಿಕದಲ್ಲಿ ಜನಾಂಗೀಯ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿದ್ದು, 15 ಕ್ಕೂ ಹೆಚ್ಚಿನ ರಾಜ್ಯಗಳಿಗೆ ಪ್ರತಿಭಟನೆ ವಿಸ್ತರಿಸಿದೆ. ಬಹುತೇಕ ಕಡೆಗಳಲ್ಲಿ ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆದಿದ್ದು, ಪ್ರತಿಭಟನಾಕಾರರನ್ನು ಹತ್ತಿಕ್ಕಲು ಪೊಲೀಸರು ಹರಸಾಹಸಪಡುತ್ತಿದ್ದಾರೆ.

Comments are closed.