ಅಂತರಾಷ್ಟ್ರೀಯ

ಸ್ಪೈನ್’ನಲ್ಲಿ ಮಾರಕ ಕೊರೋನಾ ಗೆದ್ದ 113 ವರ್ಷ ಮಹಿಳೆ !

Pinterest LinkedIn Tumblr

ಬಾರ್ಸಿಲೋನಾ: ವಿಶ್ವದ 180ಕ್ಕೂ ಅಧಿಕ ರಾಷ್ಟ್ರಗಳಲ್ಲಿ ಮರಣ ಮೃದಂಗ ಭಾರಿಸುತ್ತಿರುವ ಮಾರಕ ಕೊರೋನಾ ವೈರಸ್ ಗೆ ಹಿರಿಯ ನಾಗರಿಕರೇ ಹೆಚ್ಚಾಗಿ ಬಲಿಯಾಗುತ್ತಿರುವ ಈ ಸಂದರ್ಭದಲ್ಲಿ 113 ವರ್ಷದ ಮಹಿಳೆಯೊಬ್ಬರು ಕೊರೋನಾ ವೈರಸ್ ನಿಂದ ಗುಣಮುಖರಾಗಿದ್ದಾರೆ.

ಹೌದು.. ಸ್ಪೈನ್ ಮೂಲದ 113 ವರ್ಷದ ಮಾರಿಯಾ ಬ್ರಾನ್ಯಾಸ್​ ಅವರು ಮಾರಕ ಕೊರೋನಾ ವೈರಸ್ ಸೋಂಕಿಗೆ ತುತ್ತಾಗಿ ಇದೀಗ ಸಂಪೂರ್ಣ ಗುಣಮುಖರಾಗಿದ್ದಾರೆ. ಆ ಮೂಲಕ ಮಾರಕ ಕೊರೋನಾ ವೈರಸ್ ಗೆದ್ದ ಪ್ರಪಂಚದ ಅತ್ಯಂತ ಹಿರಿಯ ಮಹಿಳೆ ಎಂಬ ಹಿರಿಮೆಗೂ ಭಾಜನರಾಗಿದ್ದಾರೆ.

ಮೂರು ಮಕ್ಕಳ ತಾಯಿಯಾಗಿರುವ ಮಾರಿಯಾ ಬ್ರಾನ್ಯಾಸ್​ ಅವರು ಏಪ್ರಿಲ್​ನಲ್ಲಿ ಕೊರೋನಾ ವೈರಸ್​ಗೆ ತುತ್ತಾಗಿದ್ದರು. ಅವರನ್ನು ವೃದ್ಧರ ಆರೈಕೆ ಕೇಂದ್ರದ ಕೊಠಡಿಯಲ್ಲಿ ಐಸೋಲೆಷನ್​ ಮಾಡಲಾಗಿತ್ತು. ಮೂಲತಃ ಅಮೆರಿಕದ ಸ್ಯಾನ್​ ಫ್ರಾನ್ಸಿಸ್ಕೊ ಮೂಲದವರಾದ ಮಾರಿಯಾ 1918-19ರಲ್ಲಿ ಸ್ಪಾನಿಷ್ ಫ್ಲೂ ಸಾಂಕ್ರಾಮಿಕಕ್ಕೆ ತುತ್ತಾಗಿ ಹಾಗೂ ವಿಶ್ವ ಯುದ್ಧ ಮತ್ತು 1936-1939ರಲ್ಲಿ ನಡೆದ ಸ್ಪಾನಿಷ್ ನಾಗರಿಕ ಯುದ್ಧದಂತಹ ಭೀಕರ ಸನ್ನಿವೇಶದಲ್ಲೂ ಬದುಕುಳಿದಿದ್ದರು.

ಈ ಬಗ್ಗೆ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿರುವ ಮಾರಿಯಾ, ತಾವು ಸಂಪೂರ್ಣ ಆರೋಗ್ಯವಾಗಿದ್ದೇವೆ. ಆದರೆ ಪ್ರತಿಯೊಬ್ಬರಿಗೂ ಇರುವಂತೆ ಅವರು ಕೆಲವು ಸಣ್ಣ-ಪುಟ್ಟ ನೋವುಗಳಿಂದ ಬಳಲುತ್ತಿದ್ದಾರೆ. ತಮ್ಮನ್ನು ಆರೈಕೆ ಮಾಡಿ, ಬೆಂಬಲ ನೀಡಿದ ಪ್ರತಿಯೊಬ್ಬರಿಗೂ ಧನ್ಯವಾದ ಅರ್ಪಿಸುತ್ತೇನೆ ಎಂದು ಹೇಳಿದ್ದಾರೆ. ಅಲ್ಲದೆ ಈ ವೃಧ್ಧಾಪ್ಯದಲ್ಲೂ ಮಾರಕ ಕೊರೋನಾ ವೈರಸ್ ಕುರಿತು ತಿಳಿದಿರುವ ಮಾರಿಯಾ ಸ್ಪೇನ್ ನಲ್ಲಿ 27 ಸಾವಿರ ಮಂದಿಯನ್ನು ಬಲಿ ಪಡೆದಿರುವ ಕೊರೋನಾಗೆ ಆದಷ್ಟು ಬೇಗ ಲಸಿಕೆ ಅಥವಾ ಔಷಧಿ ಸಿದ್ಧವಾಗಲಿ ಎಂದು ಪ್ರಾರ್ಥಿಸಿದ್ದಾರೆ.

ಇನ್ನು ಮಾರಿಯಾ ಬ್ರಾನ್ಯಾಸ್​ ಸ್ಪೇನ್​ನ ಅತಿ ಹಿರಿಯ ಮಹಿಳೆ ಎಂದು ವೃದ್ಧಾಪ್ಯಶಾಸ್ತ್ರ ಅಧ್ಯಯನ ಸಂಸ್ಥೆ ಗುರುತಿಸಿದೆ. ಈ ಸಂಸ್ಥೆ ನಡೆಸಿದ ನೂರು ವರ್ಷ ಪೂರೈಸಿದವರ ಸೂಪರ್ ಸೆಂಚುರಿಯನ್ಸ್​ ಸಮೀಕ್ಷೆಯಲ್ಲಿ ಬ್ರಾನ್ಯಾಸ್ ಸ್ಪೇನ್​ನ ಅತ್ಯಂತ ಹಿರಿಯ ಮಹಿಳೆ ಎಂಬುದು ತಿಳಿದುಬಂದಿದೆ.

ವೃದ್ಧರ ಮೇಲೆ ಕೊರೋನಾ ವೈರಸ್ ಮಾರಕ ಪರಿಣಾಮ ಬೀರುತ್ತಿದ್ದು, ಈವರೆಗೂ ಕೊರೋನಾ ವೈರಸ್​ನಿಂದ ಮೃತಪಟ್ಟವರಲ್ಲಿ ಬಹುತೇಕರು ವಯೋವೃದ್ಧರೇ ಆಗಿದ್ದಾರೆ. ಇಂತಹ ವಿಷಮ ಸ್ಥಿತಿಯಲ್ಲಿ ಬ್ರಾನ್ಯಾಸ್ ಕೋವಿಡ್-19ನಿಂದ ಚೇತರಿಸಿಕೊಂಡಿರುವುದು ಗಮನಾರ್ಹವಾಗಿದೆ. ಇದಕ್ಕೂ ಮುನ್ನ ಸ್ಪಾನಿಷ್​ನ 106 ವರ್ಷದ ಆನಾ ದೆಲ್ ವಾಲೆ ಅವರು ಕೊರೋನಾ ವೈರಸ್​ನಿಂದ ಬದುಕುಳಿದಿದ್ದರು. ಸ್ಪೇನ್​ನಲ್ಲಿ 2 ಲಕ್ಷಕ್ಕೂ ಹೆಚ್ಚು ಮಂದಿ ಮಾರಕ ಸೋಂಕಿನಿಂದ ಬಳಲುತ್ತಿದ್ದು, ಈವರೆಗೂ 27 ಸಾವಿರ ಜನರು ಮೃತಪಟ್ಟಿದ್ದಾರೆ.

Comments are closed.