ಅಂತರಾಷ್ಟ್ರೀಯ

ಅಮೆರಿಕದಲ್ಲಿ ಕೊರೋನಾ ವೈರಸ್ ಅಧ್ಯಯನದ ಅಂತಿಮ ಹಂತದಲ್ಲಿದ್ದ ಚೀನೀ ಮೂಲದ ವಿಜ್ಞಾನಿ ಹತ್ಯೆ

Pinterest LinkedIn Tumblr


ವಾಷಿಂಗ್ಟನ್(ಮೇ 07): ಅಮೆರಿಕದ ಪಿನ್​ಸಿಲ್ವೇನಿಯಾ ರಾಜ್ಯದಲ್ಲಿ ಚೀನೀ ಮೂಲದ ಸಂಶೋಧಕರೊಬ್ಬರನ್ನು ಗುಂಡಿಟ್ಟು ಹತ್ಯೆಗೈಯಲಾಗಿದೆ ಎಂದು ಅಲ್ಲಿನ ಮಾಧ್ಯಮ ವರದಿಗಳು ತಿಳಿಸಿವೆ. ಪಿಟ್ಸ್​ಬರ್ಗ್ ನಗರದ ವಿಶ್ವವಿದ್ಯಾಲಯದ ಪ್ರೊಫೆಸರ್ ಆಗಿದ್ದ 37 ವರ್ಷದ ಬಿಂಗ್ ಲಿಯು ಅವರನ್ನು ಮನೆಯೊಳಗೇ ಕೊಲೆ ಮಾಡಲಾಗಿದೆ. ಲಿಯು ಅವರ ತಲೆ, ಕುತ್ತಿಗೆ, ಎದೆ ಭಾಗಗಳಲ್ಲಿ ಗುಂಡಿನೇಟು ಬಿದ್ದಿರುವುದು ಪತ್ತೆಯಾಗಿದೆ ಎಂದು ರಾಸ್ ಟೌನ್​ಶಿಪ್​ನ ಪೊಲೀಸರು ತಿಳಿಸಿದ್ದಾರೆ ಎಂದು ವರದಿಯಾಗಿದೆ.

ಇದೇ ವೇಳೆ, ಮತ್ತೊಬ್ಬ ಚೀನೀ ವ್ಯಕ್ತಿಯೂ ಅಲ್ಲೇ ಸಮೀಪದಲ್ಲಿ ಹತ್ಯೆಯಾಗಿರುವುದು ಕಂಡು ಬಂದಿದೆ. 46 ವರ್ಷದ ಹಾವೋ ಗು ಅವರೂ ಕೂಡ ತಮ್ಮ ಕಾರಿನಲ್ಲಿ ಗುಂಡೇಟಿನಿಂದ ಮೃತಪಟ್ಟಿದ್ದಾರೆ.

ಪೊಲೀಸರು ಎರಡೂ ಘಟನೆಗಳು ಪರಸ್ಪರ ಸಂಬಂಧ ಇದೆ ಎಂದು ಶಂಕಿಸಿದ್ದಾರೆ. ಬಿಂಗ್ ಲಿಯು ಅವರನ್ನು ಹತ್ಯೆಗೈದ ಬಳಿಕ ಹಾವೋ ಗು ತಮ್ಮ ಕಾರಿನಲ್ಲಿ ತಾವೇ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ತನಿಖಾಧಿಕಾರಿಗಳು ಅಭಿಪ್ರಾಯಪಟ್ಟಿದ್ಧಾರೆ.

ಪಿಟ್ಸ್​ಬರ್ಗ್ ಸ್ಕೂಲ್ ಆಫ್ ಮೆಡಿಸಿನ್ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್ ಆಗಿದ್ದ ಬಿಂಗ್ ಲಿಯು ಕುಶಾಗ್ರಮತಿಗೆ ಹೆಸರುವಾಸಿಯಾಗಿದ್ದರು. ಕೋವಿಡ್-19 ರೋಗದ ಬಗ್ಗೆ ಗಮನಾರ್ಹ ಅಧ್ಯಯನಗಳನ್ನ ಮಾಡಿದ್ದರು. ಸೋಂಕಿನ ನಂತರದ ಕೋಶ ರಚನಾ ವ್ಯವಸ್ಥೆ ಇತ್ಯಾದಿಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದ್ದರು ಎಂದು ವಿವಿ ಹಿರಿಯರು ಹೇಳಿದ್ದಾರೆ. ಲಿಯು ಅವರು ಈವರೆಗೂ ಮಾಡಿದ್ದ ಸಂಶೋಧನೆಯನ್ನು ಮುಂದುವರಿಸಿ ಲೋಕಕಲ್ಯಾಣಕ್ಕೆ ಬಳಕೆಯಾಗುವಂತೆ ಮಾಡುತ್ತೇವೆ ಎಂದು ಅವರ ಸಹೋದ್ಯೋಗಿಗಳು ತಿಳಿಸಿದ್ದಾರೆ.

ಸಿಂಗಾಪುರ್ ನ್ಯಾಷನಲ್ ಯೂನಿವರ್ಸಿಟಿಯಲ್ಲಿ ಕಂಪ್ಯೂಟೇಶನಲ್ ಸೈನ್ಸ್​ನಲ್ಲಿ ಪಿಎಚ್​ಡಿ ಪಡೆದಿದ್ದ ಲಿಯು ಅವರು ಕಾರ್ನೆಜೀ ಮೆಲ್ಲೋನ್ ಯೂನಿವರ್ಸಿಟಿಯಲ್ಲಿ ಫೆಲೋಶಿಪ್ ಮಾಡಿದರು. ಆ ನಂತರ ಪಿಟ್ಸ್​ಬರ್ಗ್ ಔಷಧೀಯ ವಿಶ್ವವಿದ್ಯಾಲಯದಲ್ಲಿ ಸಂಶೋಧಕರಾಗಿ ಸೇರಿಕೊಂಡಿದ್ದರು.

Comments are closed.