ಹೊಸ ದಿಲ್ಲಿ: ಜೂನ್ ಹಾಗೂ ಜುಲೈ ತಿಂಗಳಿನಲ್ಲಿ ಭಾರತದಲ್ಲಿ ಕೊರೊನಾ ವೈರಸ್ ಸೋಂಕು ಉತ್ತುಂಗಕ್ಕೆ ಏರಬಹುದು ಎಂದು ಏಮ್ಸ್ ಅಂದಾಜಿಸಿದೆ. ಸದ್ಯದ ಮಟ್ಟಿಗೆ ಕೊರೊನಾ ವೈರಸ್ ಸೋಂಕು ಪ್ರಕರಣಗಳ ಸ್ಥಿತಿಗತಿ ಹಾಗೂ ಅಂಕಿ ಅಂಶವನ್ನು ಗಮನಿಸಿದರೆ ಹಾಗೂ ಭಾರತ ಈ ಸೋಂಕಿನ ವಿರುದ್ಧ ನಡೆಸುತ್ತಿರುವ ಹೋರಾಟವನ್ನು ಅವಲೋಕಿಸಿದರೆ, ಕೊರೊನಾ ವೈರಸ್ ದೇಶದಲ್ಲಿ ಜೂನ್ ಹಾಗೂ ಜುಲೈನಲ್ಲಿ ಆರ್ಭಟಿಸುವ ಆತಂಕವನ್ನು ಏಮ್ಸ್ ದಿಲ್ಲಿ ನಿರ್ದೇಶಕ ಡಾ. ರಣದೀಪ್ ಗುಲೇರಿಯಾ ವ್ಯಕ್ತಪಡಿಸಿದ್ದಾರೆ.
ಲಾಕ್‌ಡೌನ್ ವಿಸ್ತರಣೆ ಹಾಗೂ ಸೋಂಕಿನ ನಿಯಂತ್ರಣಕ್ಕೆ ಕೈಗೊಳ್ಳುತ್ತಿರುವ ಕ್ರಮಗಳು ಇಲ್ಲಿ ಮುಖ್ಯ ಪಾತ್ರ ವಹಿಸುತ್ತವೆ ಎಂದೂ ಗುಲೇರಿಯಾ ಹೇಳಿದ್ದಾರೆ. ಸದ್ಯ ಭಾರತದಲ್ಲಿ 50 ಸಾವಿರಕ್ಕೂ ಹೆಚ್ಚು ಮಂದಿಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ. ಈ ಪೈಕಿ 1,783 ಮಂದಿ ಈವರೆಗೆ ಮೃತಪಟ್ಟಿದ್ದಾರೆ. ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯದ ಅಂಕಿ ಅಂಶಗಳನ್ನು ಅಧ್ಯಯನ ಮಾಡಿ ಈ ಅಂದಾಜು ಮಾಡಲಾಗಿದೆ.
ಈವರೆಗೂ ಸರ್ಕಾರ ಕೈಗೊಂಡ ಕ್ರಮಗಳು ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಿವೆ ಅನ್ನೋದಕ್ಕೆ ಕಾಲವೇ ಉತ್ತರ ಹೇಳಲಿದೆ ಎಂದು ಡಾ. ಗುಲೇರಿಯಾ ಹೇಳಿದ್ದಾರೆ. ಸದ್ಯ ದೇಶದಲ್ಲಿ 35,902 ಮಂದಿ ಸೋಂಕಿತರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 15,266 ಸೋಂಕಿತರು ಈಗಾಗಲೇ ಗುಣಮುಖರಾಗಿರೋದು ಸಮಾಧಾನಕಾರ ಸಂಗತಿಯಾಗಿದೆ.
ಹಾಗೆ ನೋಡಿದ್ರೆ, ಮಹಾರಾಷ್ಟ್ರದಲ್ಲಿ ದೇಶದಲ್ಲೇ ಅತಿ ಹೆಚ್ಚು ಸೋಂಕಿತರಿದ್ದಾರೆ. ಮಹಾರಾಷ್ಟ್ರದಲ್ಲಿ 16,758 ಮಂದಿಗೆ ಸೋಂಕು ದೃಢಪಟ್ಟಿದ್ದರೆ, ಗುಜರಾತ್‌ನಲ್ಲಿ 6,625 ಹಾಗೂ ದಿಲ್ಲಿಯಲ್ಲಿ 5,532 ಸೋಂಕಿತರಿದ್ದಾರೆ.
Comments are closed.