ಅಂತರಾಷ್ಟ್ರೀಯ

ಕೊನೆಗೂ ಹೊರಗೆ ಕಾಣಿಸಿಕೊಂಡ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್

Pinterest LinkedIn Tumblr


ಸಿಯೋಲ್ (ಮೇ 2): ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಸಾವನ್ನಪ್ಪಿದ್ದಾರೆ, ಆ ವಿಷಯವನ್ನು ಮುಚ್ಚಿಡಲಾಗಿದೆ ಎಂಬ ಸುದ್ದಿಗಳು ಕೆಲವು ದಿನಗಳಿಂದ ಹರಿದಾಡುತ್ತಿದ್ದವು. ಆದರೆ, ಕಿಮ್ ಜಾಂಗ್ ಆರೋಗ್ಯವಾಗಿದ್ದಾರೆ ಎಂದು ದಕ್ಷಿಣ ಕೊರಿಯಾ ಅಧಿಕಾರಿಗಳು ಮಾಹಿತಿ ನೀಡಿದ್ದರು. ಇದೀಗ ಮೊದಲ ಬಾರಿಗೆ ಸಾರ್ವಜನಿಕ ಸಮಾರಂಭದಲ್ಲಿ ಕಾಣಿಸಿಕೊಳ್ಳುವ ಮೂಲಕ ತಮ್ಮ ಸಾವಿನ ವದಂತಿಗಳಿಗೆ ಕಿಮ್ ಗಾಂಜ್ ಖುದ್ದು ತೆರೆ ಎಳೆದಿದ್ದಾರೆ.

ಕಳೆದ ಕೆಲ ದಿನಗಳಿಂದ ಕಿಮ್ ಜಾಂಗ್ ಬಹಿರಂಗವಾಗಿ ಕಾಣಿಸಿಕೊಳ್ಳದೇ ಇರುವುದಕ್ಕೆ ಅವರಿಗೆ ಕೊರೋನಾ ಹಬ್ಬಿರುವುದೇ ಕಾರಣ ಎಂಬ ವರದಿಗಳು ಬಿತ್ತರಗೊಂಡಿದ್ದವು. ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಕಿಮ್ ಜಾಂಗ್ ಚೀನಾದ ವೈದ್ಯರೊಬ್ಬರಿಂದ ಕೊರೋನಾ ಸೋಂಕಿಗೆ ಒಳಗಾಗಿದ್ದಾರೆ ಎಂದು ಕೂಡ ಚೀನಾದ ಕೆಲವು ವಾಹಿನಿಗಳು ಸುದ್ದಿ ಬಿತ್ತರಿಸಿದ್ದವು.

ಉತ್ತರ ಕೊರಿಯಾದ ಪಿತಾಮಹ ಎನಿಸಿಕೊಂಡಿರುವ ಕಿಮ್ II ಸಂಗ್ ಅವರ 108ನೇ ಜನ್ಮ ದಿನಾಚರಣೆ ಏ. 15ರಂದು ನಡೆದಿತ್ತು. ಆ ದಿನ ಪ್ರತಿವರ್ಷ ಇಡೀ ಉತ್ತರ ಕೊರಿಯಾಗೆ ಸರ್ಕಾರಿ ರಜೆ ನೀಡಲಾಗುತ್ತದೆ. ತಮ್ಮ ತಾತನಾದ ಕಿಮ್ ಸಂಗ್ ಅವರ ಜನ್ಮ ದಿನಾಚರಣೆಯಲ್ಲಿ ಕೂಡ ಕಿಮ್ ಜಾಂಗ್ ಕಾಣಿಸಿಕೊಳ್ಳದಿರುವುದರಿಂದ ಅವರು ಸಾವನ್ನಪ್ಪಿದ್ದಾರೆ ಎನ್ನಲಾಗಿತ್ತು. ಆದರೆ, ದಕ್ಷಿಣ ಕೊರಿಯಾದ ಅಧ್ಯಕ್ಷರ ಕಚೇರಿಯ ಅಧಿಕಾರಿಗಳು ಕಿಮ್ ಜಾಂಗ್​ ಅವರು ಬದುಕಿದ್ದಾರೆ ಮತ್ತು ಆರೋಗ್ಯವಾಗಿದ್ದಾರೆ. ವಿನಾಕಾರಣ ಸುಳ್ಳು ಸುದ್ದಿಗಳನ್ನು ಹರಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದರು. ಆದರೂ ಈ ಬಗ್ಗೆ ಉತ್ತರ ಕೊರಿಯಾ ಯಾವುದೇ ಸ್ಪಷ್ಟನೆ ನೀಡದಿದ್ದುದು ಅನುಮಾನಕ್ಕೆ ಕಾರಣವಾಗಿತ್ತು.

ಅನಾರೋಗ್ಯದಿಂದ ಆಸ್ಪತ್ರೆಗೆ ಸೇರಿದ ಬಳಿಕ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿರುವ ಕಿಮ್ ಜಾಂಗ್, ಇಂದು ಉತ್ತರ ಕೊರಿಯಾದ ಕೆಸಿಎನ್​ಎ ಫರ್ಟಿಲೈಸರ್ ಫ್ಯಾಕ್ಟರಿಯನ್ನು ಉದ್ಘಾಟನೆ ಮಾಡಿದ್ದಾರೆ. ಕಳೆದ 1 ತಿಂಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಅವರು ಇದೀಗ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ.

ಏ. 11ರಂದು ವರ್ಕರ್ಸ್​ ಪಾರ್ಟಿ ಸಭೆಯೊಂದರಲ್ಲಿ ಕಾಣಿಸಿಕೊಂಡ ಬಳಿಕ ಮತ್ತೆ ಎಲ್ಲೂ ಹೊರಗೆ ಕಾಣಿಸಿಕೊಂಡಿರಲಿಲ್ಲ. ಇದೀಗ ಕೊರಿಯಾದ ಬೃಹತ್ ಸಮಾರಂಭವೊಂದರಲ್ಲಿ ಕಿಮ್ ಜಾಂಗ್ ಅತಿಥಿಯಾಗಿ ಆಗಮಿಸಿ, ಉದ್ಘಾಟನೆ ನೆರವೇರಿಸಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

Comments are closed.