ಅಂತರಾಷ್ಟ್ರೀಯ

ಅಮೆರಿಕ ನೆರವು ನಿಲ್ಲಿಸಿದ ಬೆನ್ನಲ್ಲೇ ವಿಶ್ವ ಆರೋಗ್ಯ ಸಂಸ್ಥೆಗೆ ಚೀನಾದಿಂದ 3 ಕೋಟಿ ಡಾಲರ್

Pinterest LinkedIn Tumblr


ಬೀಜಿಂಗ್(ಏ. 23): ಜಾಗತಿಕವಾಗಿ ಕೊರೊನಾ ವೈರಸ್ ಬಿಕ್ಕಟ್ಟಿನ ವಿರುದ್ಧ ಹೋರಾಡಲು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಹೆಚ್​ಒ) ಹರಸಾಹಸ ನಡೆಸುತ್ತಿದೆ. ಅದಕ್ಕಾಗಿ 100 ಕೋಟಿ ಡಾಲರ್ (ಸುಮಾರು 7,600 ಕೋಟಿ ರೂಪಾಯಿ) ಹಣಕ್ಕಾಗಿ ವಿಶ್ವ ರಾಷ್ಟ್ರಗಳಿಗೆ ಮನವಿ ಮಾಡಿದೆ. ಈ ಮುಂಚೆ 2 ಕೋಟಿ ಡಾಲರ್ ಕೊಟ್ಟಿದ್ದ ಚೀನಾ ಇದೀಗ ಇನ್ನೂ 3 ಕೋಟಿ ಡಾಲರ್ ಹಣ ಕೊಡುವುದಾಗಿ ಹೇಳಿದೆ.

ವಿಶ್ವ ಆರೋಗ್ಯ ಸಂಸ್ಥೆಗೆ ನಿಯಮಿತವಾಗಿ ಅತಿ ಹೆಚ್ಚು ದೇಣಿಗೆ ನೀಡುವ ಅಮೆರಿಕ ಇದೀಗ ನೆರವು ನಿಲ್ಲಿಸಿದೆ. ಕೊರೊನಾ ವೈರಸ್ ಬಗ್ಗೆ ಚೀನಾ ಸುಳ್ಳುಗಳನ್ನ ಹೇಳುತ್ತಿದೆ ಎಂಬುದು ಅಮೆರಿಕ ಸದಾ ವ್ಯಕ್ತಪಡಿಸುತ್ತಾ ಬಂದಿರುವ ಸಿಟ್ಟು. ಡಬ್ಲ್ಯೂಎಚ್​ಒ ಕೂಡ ಚೀನಾದ ಸುಳ್ಳುಗಳನ್ನೇ ಎಲ್ಲೆಡೆ ಹರಡು ನಂಬಿಸುತ್ತಿದೆ ಎಂಬುದು ಅಮೆರಿಕದ ಸಿಟ್ಟನ್ನ ಇಮ್ಮಡಿಗೊಳಿಸಿದೆ. ಈ ಹಿನ್ನೆಲೆಯಲ್ಲಿ ಕಳೆದ ವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಡಬ್ಲ್ಯೂಎಚ್​ಒಗೆ ಯಾವುದೇ ಹಣ ಒದಗಿಸುವುದಿಲ್ಲ ಎಂದು ಘೋಷಿಸಿದ್ದರು. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಚೀನಾ ಡಬ್ಲ್ಯೂಎಚ್​​ಒಗೆ ಮತ್ತೊಂದು ಸುತ್ತಿನ ನೆರವು ಒದಗಿಸಿರುವುದು ಗಮನಾರ್ಹ. ಇದರ ಮೂಲಕ ಚೀನಾ ಜಾಗತಿಕವಾಗಿ ಅತಿದೊಡ್ಡ ಶಕ್ತಿಯಾಗಿ ಹೊರಹೊಮ್ಮಲು ಯತ್ನಿಸುತ್ತಿದೆಯಾ ಎಂದನಿಸದೇ ಇರದು.

“ಈ ಮಹತ್ವದ ಘಟ್ಟದಲ್ಲಿ ಡಬ್ಲ್ಯೂಎಚ್​ಒಗೆ ಸಹಾಯ ಮಾಡುವುದೆಂದರೆ ಜಾಗತಿಕ ಐಕ್ಯತೆಗೆ ಬೆಂಬಲ ಕೊಟ್ಟಂತೆ” ಎಂದು ಚೀನಾ ವಿದೇಶಾಂಗ ಇಲಾಖೆಯ ವಕ್ತಾರೆ ಹುವಾ ಚುನ್​ಯಿಂಗ್ ಟ್ವೀಟ್ ಮಾಡಿದ್ದಾರೆ.

ಕೋವಿಡ್ ರೋಗ ವಿರುದ್ಧದ ಹೋರಾಟಕ್ಕೆ ಜಾಗತಿಕವಾಗಿ ಅಭಿವೃದ್ಧಿಶೀಲ ದೇಶಗಳಲ್ಲಿ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಲು ಡಬ್ಲ್ಯೂಎಚ್​ಒ ಪ್ರಯತ್ನಿಸುತ್ತಿದೆ. ಅದಕ್ಕಾಗಿ 1 ಬಿಲಿಯನ್ ಡಾಲರ್ ಹಣವನ್ನು ಯಾಚಿಸುತ್ತಿದೆ.

ಅಮೆರಿಕ ಕಳೆದ ವರ್ಷ ಡಬ್ಲ್ಯೂಎಚ್​ಒಗೆ 40 ಕೋಟಿ ಡಾಲರ್ ಹಣವನ್ನು ನೀಡಿದೆ. ಇದು ಆರೋಗ್ಯ ಸಂಸ್ಥೆಯ ಇಡೀ ಬಜೆಟ್​ನ ಶೇ 15ರಷ್ಟು ಮೊತ್ತವಾಗಿದೆ. ಚೀನಾ ದೇಶ ಮಾರ್ಚ್ 11ರಂದು 2 ಕೋಟಿ ಡಾಲರ್ ಹಣ ನೀಡಿತ್ತು. ಇದೀಗ 3 ಕೋಟಿ ನೀಡಿರುವುದೂ ಸೇರಿ ಒಟ್ಟು 5 ಕೋಟಿ ಡಾಲರ್ (380 ಕೋಟಿ ರೂಪಾಯಿ) ನೀಡಿದಂತಾಗಿದೆ.

Comments are closed.