ಕರ್ನಾಟಕ

ಸಾಲ ಮರುಪಾವತಿಗೆ ಗ್ರಾಹಕರಿಗೆ ಒತ್ತಡ ಹೇರುತ್ತಿರುವ ಕರ್ನಾಟಕ ಗ್ರಾಮೀಣ ಬ್ಯಾಂಕ್​​

Pinterest LinkedIn Tumblr


ಕೊಡಗು(ಏ.23): ಕೊರೋನಾ ಮಹಾಮಾರಿಗೆ ಇಡೀ ದೇಶವೇ ತತ್ತರಿಸಿ ಹೋಗಿ ಸಂಪೂರ್ಣ ಲಾಕ್ ಡೌನ್ ಆಗಿದೆ. ದೇಶದ ಕೋಟ್ಯಂತರ ಜನರು ದುಡಿಮೆ ಇಲ್ಲದೆ ಕೈಯಲ್ಲಿ ಹಣವಿಲ್ಲದೆ ಪರದಾಡುತ್ತಿದ್ದಾರೆ. ಹೀಗಾಗಿಯೇ ರಿಸರ್ವ್ ಬ್ಯಾಂಕ್ ನಿರ್ದೇಶನದಂತೆ ಸರ್ಕಾರ ಮೂರು ತಿಂಗಳು ಯಾವುದೇ ಸಾಲ ಮರುಪಾವತಿಗೆ ಅವಕಾಶ ನೀಡಿ ಆದೇಶಿಸಿದೆ. ಆದರೀಗ ಸರ್ಕಾರದ ಆದೇಶವಿದ್ರೂ ಕೆಲವು ಸಹಕಾರ ಸಂಘಗಳು ಮತ್ತು ಬ್ಯಾಂಕ್‍ಗಳು ಸಾಲ ಮರುಪಾವತಿ ಮಾಡುವಂತೆ ಜನರಿಗೆ ಒತ್ತಡ ಹೇರುತ್ತಿವೆ.

ಹೌದು, ಕೊಡಗು ಜಿಲ್ಲೆ ಸೋಮವಾರಪೇಟೆಯ ಕರ್ನಾಟಕ ಗ್ರಾಮೀಣ ಬ್ಯಾಂಕ್ ಖಾತೆದಾರರ ಅಕೌಂಟ್‍ನಲ್ಲಿದ್ದ ಠೇವಣಿ ಹಣದಲ್ಲೇ ಸಾಲದ ಕಂತನ್ನು ಜಮಾ ಮಾಡಿಕೊಂಡಿದೆ. ಈ ಬ್ಯಾಂಕಿನ ಖಾತೆದಾರರ ಚಂದ್ರಶೇಖರ್ ಎನ್ನುವವರು ಸಾಲಪಡೆದಿದ್ದರು. ಪ್ರತೀ ತಿಂಗಳು 1512 ರೂಪಾಯಿಯನ್ನು ಸಾಲ ಮರುಪಾವತಿ ಕಂತನ್ನು ಕಟ್ಟಬೇಕಾಗಿತ್ತು. ಆದರೆ, ಸರ್ಕಾರ ಸಾಲಮರುಪಾವತಿಗೆ ಮೂರು ತಿಂಗಳು ಸಮಯಾವಕಾಶ ನೀಡಿರುವುದರಿಂದ ಸುಮ್ಮನಿದ್ದರು.

ಆದರೀಗ, ಬ್ಯಾಂಕ್ ಮಾತ್ರ ಏಪ್ರಿಲ್ ತಿಂಗಳ ಕಂತಿನ ಹಣವನ್ನು ಚಂದ್ರಶೇಖರ್ ಅವರ ಖಾತೆಯಲ್ಲಿದ್ದ ಠೇವಣಿ ಹಣದಿಂದಲೇ ಜಮಾ ಮಾಡಿಕೊಂಡಿದೆ. ಕಂತಿನ ಹಣವನ್ನು ಜಮಾ ಮಾಡಿಕೊಳ್ಳುವ ಬಗ್ಗೆ ಬ್ಯಾಂಕ್ ಸಿಬ್ಬಂದಿ ಚಂದ್ರಶೇಖರ್ ಅವರ ಗಮನಕ್ಕೆ ತಾರದೆ ಕಂತಿನ ಹಣವನ್ನು ಮರುಪಾವತಿ ಮಾಡಿಕೊಂಡಿದೆ. ಆದ್ರೆ ಅವರ ಮೊಬೈಲ್‍ಗೆ ಮೆಸೇಜ್ ಬಂದಾಗಷ್ಟೇ ಇದು ಗೊತ್ತಾಗಿದೆ.

ಇದರಿಂದ ತೀವ್ರ ಬೇಸರಗೊಂಡ ಚಂದ್ರಶೇಖರ್​​ ಅವರು ಇದನ್ನು ವಿಚಾರಿಸಿದಾಗ ಬ್ಯಾಂಕ್ ಮ್ಯಾನೇಜರ್ ಇರುವ ವಿಷಯವನ್ನು ತಿಳಿಸಿದ್ದಾರೆ. ಇನ್ನು ಕುಶಾಲನಗರದ ಕೆಲವು ಸಹಕಾರ ಸಂಘಗಳು ಕೂಡ ಸಾಲ ಮರುಪಾವತಿ ಮಾಡುವಂತೆ ಫೋನ್ ಕರೆಮಾಡಿ ಕಿರುಕುಳ ನೀಡುತ್ತಿರುವ ದೂರುಗಳು ಕೇಳಿಬಂದಿದೆ.

ಇದು ದುಡಿಮೆ ಇಲ್ಲದೆ ನಿತ್ಯ ಬದುಕಿಗೆ ಪರದಾಡುವ ಸ್ಥಿತಿ ಇರುವಾಗ ಸಾಲ ಮರುಪಾವತಿಗೆ ಒತ್ತಡ ಹೇರಿ ಅಮಾನವೀಯತೆ ಮೆರೆಯುತ್ತಿದ್ದಾರೆ. ಒಟ್ಟಿನಲ್ಲಿ ಸರ್ಕಾರ ಆದೇಶ ಮಾಡಿದ್ರೂ ಅದನ್ನು ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳು ಉಲ್ಲಂಘನೆ ಮಾಡುತ್ತಿರುವುದಂತು ಸತ್ಯ.

Comments are closed.