ಅಂತರಾಷ್ಟ್ರೀಯ

ಕೊರೊನಾ ವೈರಸ್‌ ಪ್ರಯೋಗಾಲಯದಿಂದ ಬಂದಿಲ್ಲ: ವಿಶ್ವ ಆರೋಗ್ಯ ಸಂಸ್ಥೆ ಸ್ಪಷ್ಟನೆ

Pinterest LinkedIn Tumblr


ಜಿನೀವಾ: ಕೊರೊನಾ ವೈರಸ್‌ ಪ್ರಾಣಿಯಿಂದ ಬಂದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಸ್ಪಷ್ಟನೆ ನೀಡಿದ್ದು, ಪ್ರಯೋಗಾಲಯದಿಂದ ವೈರಸ್‌ ಬಂದಿರುವ ಬಗ್ಗೆ ಯಾವುದೇ ಸಾಕ್ಷಿಗಳಿಲ್ಲ ಎಂದು ಡಬ್ಲ್ಯೂಎಚ್‌ಒ ಹೇಳಿದೆ. ಲಭ್ಯವಿರುವ ಎಲ್ಲ ಸಾಕ್ಷ್ಯಗಳು ಕೊರೊನಾ ವೈರಸ್‌ ಕಳೆದ ವರ್ಷ ಚೀನಾದಲ್ಲಿ ಬಾವಲಿಗಳಿಂದಲೇ ಬಂದಿದೆ ಎಂಬುದನ್ನು ಪುಷ್ಠೀಕರಿಸುತ್ತವೆ. ಪ್ರಯೋಗಾಲಯದಲ್ಲಿ ನೋವೆಲ್‌ ಕೊರೊನಾ ವೈರಸ್‌ ಹುಟ್ಟಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವಕ್ತಾರ ಫಾಡೇಲಾ ಚಾಯಿಬ್‌ ಹೇಳಿದ್ದಾರೆ.

ಕಳೆದ ವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಚೀನಾದ ವುಹಾನ್‌ ಪ್ರಾಂತ್ಯದಲ್ಲಿ ಪ್ರಯೋಗಾಲಯದಿಂದ ಕೊರೊನಾ ಸೋಂಕು ಸೋರಿಕೆಯಾಗಿದೆ ಎಂದು ಹೇಳಿ ತನಿಖೆ ನಡೆಸುತ್ತೇವೆ ಎಂದು ಹೇಳಿ ವಿವಾದ ಸೃಷ್ಟಿಸಿದ್ದರು. ಅದಲ್ಲದೇ ಫ್ರೆಂಚ್‌ ವಿಜ್ಞಾನಿ ಕೂಡ ಕೊರೊನಾ ವೈರಸ್‌ ಪ್ರಯೋಗಾಲಯದಿಂದಲೇ ಹುಟ್ಟಿದೆ ಎಂದು ಹೇಳಿದ್ದು, ಅಮೆರಿಕದ ವಾದವನ್ನು ಬಲಗೊಳಿಸಿತ್ತು.

ಲಾಕ್‌ಡೌನ್‌ ಸಡಿಲಿಕೆಗೆ ಆತುರ ಬೇಡ
ಕೊರೊನಾ ನಿಯಂತ್ರಣಕ್ಕೆ ವಿಧಿಸಿರುವ ಲಾಕ್‌ಡೌನ್‌ ನಿರ್ಬಂಧಗಳನ್ನು ಸಡಿಲಗೊಳಿಸಲು ಆತುರ ತೋರಿಸಿದರೆ ಸೋಂಕು ಮತ್ತೆ ಪುಟಿದೇಳುವ ಅಪಾಯ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ. ಬಹುತೇಕ ರಾಷ್ಟ್ರಗಳು ಚಟುವಟಿಕೆ ಸ್ತಬ್ಧಗೊಳಿಸಿರುವುದರಿಂದ ಆರ್ಥಿಕತೆ ಅಧೋಗತಿ ತಲುಪಿದ್ದು, ಪುನರುತ್ಥಾನದ ಹೊಸ ಸಾಧ್ಯತೆಗಳತ್ತ ಪ್ರಯತ್ನ ಮುಂದುವರಿಸಿವೆ. ಇರುವ ನಿರ್ಬಂಧಗಳನ್ನು ಸಡಿಲಗೊಳಿಸಿ ಜನರ ಚಟುವಟಿಕೆಗೆ ಅವಕಾಶ ನೀಡುವುದನ್ನು ಈ ರಾಷ್ಟ್ರಗಳು ಪ್ರಥಮ ಆದ್ಯತೆಯನ್ನಾಗಿ ಪರಿಗಣಿಸಿವೆ.

ಆದರೆ, ಕೊರೊನಾ ಸೋಂಕು ಪ್ರಮಾಣ ಯಥಾಸ್ಥಿತಿಯಲ್ಲಿ ಇರುವಾಗಲೇ ಜನ ಸಂಚಾರಕ್ಕೆ ಆಸ್ಪದ ನೀಡುವುದು ತೀರಾ ಅಪಾಯಕಾರಿ ಕ್ರಮವಾಗುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಪ್ರಾದೇಶಿಕ ನಿರ್ದೇಶಕ ಡಾ.ತಕೇಶಿ ಕಾಸೈ ಎಚ್ಚರಿಸಿದ್ದಾರೆ.

ಸೋಂಕು ಹರಡುವಿಕೆಯ ಸಾಧ್ಯತೆ ಮೇಲೆ ಸರಕಾರಗಳು ತೀವ್ರ ನಿಗಾ ಇರಿಸಬೇಕು. ಅದರ ಪ್ರಮಾಣ ಆಧರಿಸಿ ಲಾಕ್‌ಡೌನ್‌ನಂತಹ ನಿರ್ಬಂಧಗಳನ್ನು ಸಡಿಲಗೊಳಿಸುವ ಕುರಿತು ಯೋಚಿಸಬೇಕು. ಆತುರಾತುರವಾಗಿ ನಿರ್ಧಾರ ಕೈಗೊಳ್ಳುವುದು ಸರಿಯಲ್ಲ. ಜನರ ಆರೋಗ್ಯ ಮತ್ತು ಆರ್ಥಿಕತೆ ಎರಡನ್ನೂ ಸರಿದೂಗಿಸುವಂತಹ ಸಮತೋಲಿತ ನಿರ್ಧಾರಗಳನ್ನು ಕೈಗೊಳ್ಳಬೇಕು ಎಂದು ಜಾಗತಿಕ ಸರಕಾರಗಳಿಗೆ ಕಾಸೈ ಸಲಹೆ ನೀಡಿದ್ದಾರೆ.

Comments are closed.