ಅಂತರಾಷ್ಟ್ರೀಯ

ಕೊರೋನಾ ಸಾವಿನ ದವಡೆಯಿಂದ ಗೆದ್ದು ಬಂದ 106 ವರ್ಷದ ಮುದುಕಿ; ಆಕೆಯ ಆರೋಗ್ಯ ಗುಟ್ಟೇನು ಗೊತ್ತೇ …?

Pinterest LinkedIn Tumblr

ಲಂಡನ್: ವಯೋವೃದ್ಧರಿಗೆ ಕೊರೋನಾ ವೈರಸ್ ಸೋಂಕು ತಗುಲಿದರೆ ಬದುಕುಳಿಯುವುದು ಕಷ್ಟ ಎನ್ನಲಾಗುತ್ತಿದೆ. ಆದರೆ, ಬ್ರಿಟನ್ ದೇಶದ ಹಣ್ಣಹಣ್ಣು ಮುದುಕಿಯೊಬ್ಬರು ಕೊರೋನಾ ಜಯಿಸಿ ಬಂದಿದ್ದಾರೆ. ಬರ್ಮಿಂಗ್​ಹ್ಯಾಮ್ ರಾಜ್ಯದ 106 ವರ್ಷದ ಕೋನೀ ಟಿಚೆನ್ ಕೊರೋನಾ ಸೋಂಕಿನಿಂದ ಮುಕ್ತಗೊಂಡಿರುವ ಮಹಿಳೆ.

ಮಾರ್ಚ್ ಮೂರನೇ ವಾರದಲ್ಲಿ ನ್ಯೂಮೋನಿಯಾ ಶಂಕೆಯ ಮೇಲೆ ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಇವರಿಗೆ ಕೋವಿಡ್-19 ಸೋಂಕು ಇರುವುದು ಪರೀಕ್ಷೆಗಳಿಂದ ಖಚಿತಪಟ್ಟಿತ್ತು. ಸೋಂಕು ತಗುಲಿ ಮೂರನೇ ವಾರದಲ್ಲಿ ಈ ಗಟ್ಟಿಗಿತ್ತಿ ವೃದ್ಧೆ ಚೇತರಿಸಿಕೊಂಡಿದ್ದಾರೆ. ಆಸ್ಪತ್ರೆಯ ವೈದ್ಯರು ಎಲ್ಲಾ ಪರೀಕ್ಷೆ ನಡೆಸಿ ಖಾತ್ರಿಪಡಿಸಿಕೊಂಡು ಇವರನ್ನು ಡಿಸ್​ಚಾರ್ಜ್ ಮಾಡಿ ಕಳುಹಿಸಿದ್ಧಾರೆ.

1913ರಲ್ಲಿ ಜನಿಸಿದ ಕೋನೀ ಟಿಚೆನ್ ಜೀವಿತಾವಧಿಯಲ್ಲಿ ಎರಡು ವಿಶ್ವ ಮಹಾಯುದ್ಧಗಳನ್ನ ಕಂಡವರು. ಈಗ ಕೊರೋನಾದಂಥ ಮಹಾಮಾರಿಯನ್ನು ಎದುರಿಸಿ ಜೈಸಿದ್ದಾರೆ. ವಯಸ್ಸಾದಂತೆ ರೋಗ ಪ್ರತಿರೋಧಕ ಶಕ್ತಿ ಸಹಜವಾಗಿಯೇ ಕುಂದುತ್ತದೆ. ಆದರೆ, 106 ವರ್ಷವಾದರೂ ಈ ವೃದ್ಧೆ ಆರೋಗ್ಯ ಉಳಿಸಿಕೊಂಡಿರುವುದು ಎಲ್ಲರಿಗೂ ಅಚ್ಚರಿ ತಂದಿದೆ.

“ಇವರು ದೈಹಿಕವಾಗಿ ಚಟುವಟಿಕೆಯಿಂದ ಇರುತ್ತಾರೆ. ಬೇರೆಯವರನ್ನು ಹೆಚ್ಚಾಗಿ ಅವಲಂಬಿಸದೇ ಸ್ವತಂತ್ರವಾಗಿಯೇ ಇರತ್ತಾರೆ. ಕಳೆದ ವರ್ಷದ ಡಿಸೆಂಬರ್​ನಲ್ಲಿ ಅವರಿಗೆ ಪೃಷ್ಟ ಭಾಗದಲ್ಲಿ ಶಸ್ತ್ರಚಿಕತ್ಸೆಯಾಗಿತ್ತು. ಅದಾಗಿ ಕೇವಲ 30 ದಿನದಲ್ಲಿ ನಡೆಯಲು ಪ್ರಾರಂಭಿಸಿದ್ದರು. ಅವರು ನಮಗೆಲ್ಲರಿಗೂ ಅಪ್ಯಾಯಮಾನರೆನಿಸಿದ್ದಾರೆ. ಅವರಿಗೆ ಸಾಕಷ್ಟು ಅಭಿಮಾನಿಗಳೂ ಇದ್ದಾರೆ. ನಮ್ಮಿಡೀ ಕುಟುಂಬ ಸದಸ್ಯರು ಅವರನ್ನು ನೋಡಲು ಕಾತರರಾಗಿದ್ದಾರೆ” ಎಂದು 40 ವರ್ಷದ ಮೊಮ್ಮಗಳು ಅಲೆಕ್ಸ್ ಜೋನ್ಸ್ ಹೇಳುತ್ತಾರೆ.

“ಅವರಿಗೆ ತಿನ್ನಲು ಅವರೇ ಅಡುಗೆ ಮಾಡಿಕೊಳ್ಳುತ್ತಿದ್ದರು. ಆಗಾಗ್ಗೆ ಮೆಕ್​ಡೊನಾಲ್ಡ್ಸ್​ನಿಂದ ಊಟ ತರಿಸಿಕೊಳ್ಳುತ್ತಿದ್ದುಂಟು” ಎಂದೂ ಅಲೆಕ್ಸ್ ಜೋನ್ಸ್ ತಿಳಿಸುತ್ತಾರೆ.ಇನ್ನು, ಆಸ್ಪತ್ರೆಯಲ್ಲಿ ಈ ವೃದ್ಧೆಯನ್ನು ಉಪಚರಿಸಿದ ನರ್ಸ್ ಕೆಲ್ಲಿ ಸ್ಮಿತ್ ಕೂಡ ಖುಷಿಪಟ್ಟಿದ್ದಾರೆ. ಕೊರೋನಾ ಸೋಂಕಿನಿಂದ ಮುಕ್ತಗೊಂಡು ರೋಗಿಗಳು ಆಸ್ಪತ್ರೆಯಿಂದ ಬಿಡುಗಡೆಯಾಗುವುದು ಖುಷಿ ತರುತ್ತದೆ. ಕಾನೀ ಟಿಚೆರ್ ಅವರು ನಿಜಕ್ಕೂ ಸೋಜಿಗದ ಮಹಿಳೆ ಎಂದು ನರ್ಸ್ ಕೊಂಡಾಡಿದ್ದಾರೆ.

ಕೊರೋನಾ ತೀವ್ರ ಮಟ್ಟದಲ್ಲಿರುವ ವಿಶ್ವದ ರಾಷ್ಟ್ರಗಳ್ಲಲಿ ಬ್ರಿಟನ್ ದೇಶ ಕೂಡ ಒಂದು. ಇಲ್ಲಿ ಒಂದು ಲಕ್ಷದಷ್ಟು ಮಂದಿಗೆ ಸೋಂಕು ವ್ಯಾಪಿಸಿದೆ. 12 ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಇಲ್ಲಿಯ ಪ್ರಧಾನಿ ಬೋರಿಸ್ ಜಾನ್ಸನ್ ಅವರಿಗೂ ಸೋಂಕು ತಗುಲಿ ಇತ್ತೀಚೆಗಷ್ಟೇ ಡಿಸ್​ಚಾರ್ಜ್ ಆಗಿದ್ದರು.

Comments are closed.