
ಢಾಕಾ (ಏ. 12): ಬಾಂಗ್ಲಾದೇಶದ ಸಂಸ್ಥಾಪಕ ಬಾಂಗಬಂಧು ಶೇಖ್ ಮುಜಿಬುರ್ ರೆಹಮಾನ್ ಅವರ ಕೊಲೆಯಾಗಿ 45 ವರ್ಷಗಳ ಬಳಿಕ ಅವರ ಹತ್ಯೆಯಲ್ಲಿ ಮುಖ್ಯ ಪಾತ್ರ ವಹಿಸಿದ್ದ ಬಾಂಗ್ಲಾ ಸೇನೆಯ ಮಾಜಿ ಕ್ಯಾಪ್ಟನ್ ಅಬ್ದುಲ್ ಮಜೇದ್ ಅವರನ್ನು ಗಲ್ಲಿಗೇರಿಸಲಾಗಿದೆ.
ಶನಿವಾರ ಮಧ್ಯರಾತ್ರಿ 12.01 ಗಂಟೆಗೆ ಸರಿಯಾಗಿ ಅಬ್ದುಲ್ ಮಜೇದ್ನನ್ನು ನೇಣಿಗೇರಿಸಲಾಯಿತು. ಢಾಕಾದ ಕೆರನಿಗಂಜ್ನಲ್ಲಿರುವ ಸೆಂಟ್ರಲ್ ಜೈಲಿನಲ್ಲಿ ಅಬ್ದುಲ್ನನ್ನು ಗಲ್ಲಿಗೇರಿಸಲಾಯಿತು. ಬಾಂಗ್ಲಾದೇಶದ ಪಿತಾಮಹ ಎಂದೇ ಕರೆಯಲಾಗುವ ಬಾಂಗಬಂಧು ಮುಜಿಬುರ್ ಅವರನ್ನು ಹತ್ಯೆ ಮಾಡಿದ ಆರೋಪದಲ್ಲಿ ಐವರು ಆರೋಪಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿತ್ತು. ಆದರೆ, ದೋಷಿಗಳಾದ ಮಾಜಿ ಕ್ಯಾಪ್ಟನ್ ಅಬ್ದುಲ್ ಮಜೇದ್ ಮತ್ತು ಮಾಜಿ ರಿಸಲ್ದಾರ್ ಮುಸ್ಲೇಹುದ್ದೀನ್ ತಲೆಮರೆಸಿಕೊಂಡಿದ್ದರು.
ಮುಜಿಬುರ್ ಹತ್ಯೆಯ ಇಬ್ಬರು ದೋಷಿಗಳು ಬಾಂಗ್ಲಾದಿಂದ ಪರಾರಿಯಾಗಿ, ಭಾರತದಲ್ಲಿ ತಲೆಮರೆಸಿಕೊಂಡಿದ್ದರು. ಸುಮಾರು 25 ವರ್ಷಗಳ ಕಾಲ ಭಾರತದಲ್ಲಿ ಅಜ್ಞಾತವಾಗಿದ್ದ ಅಬ್ದುಲ್ ಮಜೇದ್ನನ್ನು ಬಾಂಗ್ಲಾ ಪೊಲೀಸರು ಇತ್ತೀಚೆಗೆ ವಶಕ್ಕೆ ಪಡೆದಿದ್ದರು. ಅವರನ್ನು ನಿನ್ನೆ ಮಧ್ಯರಾತ್ರಿ ಗಲ್ಲಿಗೇರಿಸಲಾಗಿದೆ.
1975ರ ಆಗಸ್ಟ್ 15ರಂದು ನಡೆದ ಸೇನಾ ಕ್ಷಿಪ್ರಕ್ರಾಂತಿಯಲ್ಲಿ ಮುಜಿಬುರ್ ಅವರ ಮನೆಗೆ ನುಗ್ಗಿ ಮುಜಿಬುರ್, ಅವರ ಪತ್ನಿ ಮತ್ತು ಮೂವರು ಪುತ್ರರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಅವರ ಪುತ್ರಿ ಹಾಗೂ ಹಾಲಿ ಪ್ರಧಾನಿ ಶೇಖ್ ಹಸೀನಾ ಆ ಸಂದರ್ಭದಲ್ಲಿ ವಿದೇಶದಲ್ಲಿದ್ದರಿಂದ ಗುಂಡಿನ ದಾಳಿಯಿಂದ ಬಚಾವಾಗಿದ್ದರು. ಮನೆಯಲ್ಲಿದ್ದ ಒಟ್ಟು 20 ಮಂದಿ ಅಂದು ಗುಂಡಿಗೆ ಬಲಿಯಾಗಿದ್ದರು.
1998ರಲ್ಲಿಯೇ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಲಾಗಿತ್ತು. ಬಾಂಗಬಂಧು ಎಂದೇ ಹೆಸರಾಗಿದ್ದ ಶೇಖ್ ಮುಜಿಬುರ್ ರೆಹಮಾನ್ ಸಾರಥ್ಯದಲ್ಲಿ ಬಾಂಗ್ಲಾದೇಶ ಪಾಕ್‌ನಿಂದ ಬೇರ್ಪಟ್ಟು ಸ್ವತಂತ್ರವಾಗಿತ್ತು. ಅವರೇ ಬಾಂಗ್ಲಾದೇಶದ ಪ್ರಥಮ ಪ್ರಧಾನಮಂತ್ರಿಯೂ ಆಗಿದ್ದರು. ಬಾಂಗ್ಲಾದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಭಾರತ ಕೂಡ ಪ್ರಮುಖ ಪಾತ್ರ ವಹಿಸಿತ್ತು.
Comments are closed.